ಶಾಸಕ ಲಕ್ಷ್ಮಣ ಸವದಿ ಯಾವ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲ್ಲ: ಸಚಿವೆ ಹೆಬ್ಬಾಳ್ಕರ್

WhatsApp Group Join Now
Telegram Group Join Now

ಬೆಳಗಾವಿ: ಕಾಂಗ್ರೆಸ ಶಾಸಕ ಲಕ್ಷ್ಮಣ ಸವದಿ ಯಾವ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಸ್ಪಷ್ಟಪಡಿಸಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲಕ್ಷ್ಮಣ ಸವದಿಯವರು ಬಿಜೆಪಿಗೆ ಹೋಗುತ್ತಾರೆಂಬ ವಿಷಯ ಖಂಡಿತ ತಮ್ಮ ಗಮನಕ್ಕೆ ಬಂದಿಲ್ಲ. ಅವರು ಕಾಂಗ್ರೆಸ್ಸಿಗೆ ಬರುವ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಪಾತ್ರ ನಿರ್ವಹಿಸಿದ್ದೇವು. ಏನೇ ಹೇಳಿ, ಯಾವುದೇ ಕಾರಣಕ್ಕೂ ಲಕ್ಷ್ಮಣ ಸವದಿಯವರು ಪಕ್ಷವನ್ನು ಬಿಡುವುದಿಲ್ಲ ಎಂದು  ಹೇಳಿದರು.

ಬೆಳಗಾವಿಯಲ್ಲಿ ನಿಮ್ಮ ಪುತ್ರ ಮೃಣಾಲ್‌ ಅವರಿಗೆ ಟಿಕೆಟ್‌ ನೀಡಬೇಕೆಂದು ಕ್ಷೇತ್ರದ ಜನರು ಮತ್ತು ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಆದರೆ, ಅವರ ತಾಯಿಯವರೇ ಈ ಬಗ್ಗೆ ಮೌನವಹಿಸಿದ್ದಾರೆಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕ್ಷೇತ್ರದ ಜನರ, ಕಾರ್ಯಕರ್ತರ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಅಭಿಮಾನ ಎನ್ನುವುದು ರಾಜಕಾರಣಿಗಳಿಗೆ ಅತ್ಯಾವಶ್ಯಕ. ಆದರೆ, ನಮ್ಮ ಪಕ್ಷ ಹೈಕಮಾಂಡ್‌ ತಳಹದಿಯ ಪಕ್ಷ. ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡುತ್ತದೆಯೇ ಅವರಿಗೆ ನನ್ನ ಬೆಂಬಲವಿದೆ ಎಂದು ಹೇಳಿದರು.

ದೆಹಲಿಯ ಪ್ರತಿಭಟನೆಗೆ ಬೆಳಗಾವಿ ಜಿಲ್ಲೆಯಿಂದ 11 ಶಾಸಕರು, ಇಬ್ಬರು ವಿಧಾನಪರಿಷತ್‌ ಸೇರಿದಂತೆ ನಾನು ಮತ್ತು ಸಚಿವರಾದ ಸತೀಶ್‌ ಜಾರಕಿಹೊಳಿಯವರು ತೆರಳುತ್ತಿದ್ದೇವೆ. ರಾಜ್ಯ ಕಾಂಗ್ರೆಸ್ಸಿನ 136 ಶಾಸಕರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಎಲ್ಲರೂ ಒಟ್ಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ರವರ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯ್ಕಕೆ ಕೇಂದ್ರದಿಂದ ಪದೇ ಪದೇ ಅನ್ಯಾಯ:  ಅಂಕಿ ಅಂಶಗಳ ಸಮೇತ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಸದ್ಯ ಉಂಟಾಗಿರುವ ಬರ ಪರಿಸ್ಥಿತಿಯಲ್ಲೂ ಜನರ ಸಹಾಯ, ಸಹಕಾರಕ್ಕೆ ಕೇಂದ್ರ ಬರಲಿಲ್ಲವೆಂದರೆ ಹೇಗೆ? ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವಾ !? ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದರು.

ಮಲತಾಯಿ ಧೋರಣೆ ಜಗತ್ ಜಾಹೀರ: ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸುತ್ತಿದೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಭಾಳಕರ್‌, ಅದನ್ನು ನನ್ನ ಬಾಯಿಂದ ಏಕೆ ಹೇಳಿಸುತ್ತೀರಿ? ಎಂದು ಮಾಧ್ಯಮಗಳಿಗೆ ಮರುಪ್ರಶ್ನೆ ಹಾಕಿದರಲ್ಲದೆ, ಕೇಂದ್ರ, ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎನ್ನುವುದು ಜಗತ್ ಜಾಹೀರವಾದುದು ಎಂದರು.

ಗ್ಯಾರಂಟಿ ಯಾರದು..!? ಬಿಜೆಪಿಯದೇ..!? ಕೇಂದ್ರ ಸರ್ಕಾರ 3 ಕೋಟಿ ಮನೆಗೆ ಉಚಿತ ವಿದ್ಯುತ್‌ ನೀಡುವ ಗ್ಯಾರಂಟಿ ಯೋಜನೆ ಘೋಷಿಸಿರುವ ಬಗ್ಗೆ ಹೇಗೆ ವ್ಯಾಖ್ಯಾನಿಸುತ್ತೀರಿ..!? ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಳೆದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 165 ಗ್ಯಾರಂಟಿಗಳನ್ನು ಅಂದರೆ ಭಾಗ್ಯಗಳನ್ನು ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದರು. ಆ ಐದು ವರ್ಷದಲ್ಲಿ 158 ಗ್ಯಾರಂಟಿಗಳನ್ನು ಈಡೇರಿಸಿದ್ದರು. ಈಗ ಪಂಚ ಗ್ಯಾರಂಟಿಗಳನ್ನು ಘೋಷಿಸಿ, ಸಮರ್ಪಕವಾಗಿ ಜನರಿಗೆ ನೀಡಿದ್ದೇವೆ. ಈ ಗ್ಯಾರಂಟಿ ಎನ್ನುವ ಶಬ್ಧ ಯಾರಿಂದ ಬಂತು? ಕಾಂಗ್ರೆಸ್ಸಿನಿಂದಲೇ ಅದೂ ಕರ್ನಾಟಕದಿಂದಲೇ ಬಂತು. ಈಗ ದೊಡ್ಡ ದೊಡ್ಡ ಪೋಸ್ಟರ್‌ ಗಳಲ್ಲಿ ಮೋದಿ ಗ್ಯಾರಂಟಿ- ಓಟು ಗ್ಯಾರಂಟಿ ಎಂದೆಲ್ಲ ಬರೆದುಕೊಳ್ಳುತ್ತಿದ್ದಾರಲ್ಲ!? ಇದು ಯಾರ ಗ್ಯಾರಂಟಿ. ಇದನ್ನು ನಾವು ಕಳ್ಳತನ ಎನ್ನುವುದಿಲ್ಲ. ಎಲ್ಲರಿಗೂ ಗ್ಯಾರಂಟಿಯೇ ಅಸ್ತ್ರ ಆಗಿದೆ ಹೇಳಲು ಇಚ್ಛೇಸುತ್ತೇನೆ ಅಷ್ಟೇ ಎಂದು ಸಚಿವರು ಹೇಳಿದರು.

WhatsApp Group Join Now
Telegram Group Join Now
Back to top button