ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಫೈನಲ್‌: ಪಟ್ಟಿ ಬಿಡುಗಡೆ ಕುರಿತು ಡಿ ಕೆ ಶಿವಕುಮಾರ್‌ ಹೇಳಿಕೆ

WhatsApp Group Join Now
Telegram Group Join Now
ಬೆಂಗಳೂರು, ಮಾರ್ಚ್ 12: ರಾಜ್ಯದ 7 ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿತ್ತು. ಸೋಮವಾರ ನಡೆದ ಸಭೆಯಲ್ಲಿ 21 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ಕೇಂದ್ರ ಚುನಾವಣಾ ಸಮಿತಿಗೆ ರಾಜ್ಯದ ನಾಯಕರು ಶಿಫಾರಸು ಮಾಡಲಿದ್ದಾರೆ.ಸೋಮವಾರ ರಾತ್ರಿ ನಗರದಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ.
ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಹರೀಶ್ ಚೌಧರಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನೂ ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್‌ ಮಾತನಾಡಿ, ಲೋಕಸಭೆ ಚುನಾವಣೆ ಸಂಬಂಧ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಚರ್ಚೆ ಮಾಡಲಾಗಿದ್ದು, 75%ರಷ್ಟು ಕ್ಷೇತ್ರಗಳಲ್ಲಿ ಒಬ್ಬರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಸ್ಕ್ರೀನಿಂಗ್ ಕಮಿಟಿ ಸಭೆ ಮುಕ್ತಾಯವಾಗಿದ್ದು ಲೋಕಸಭೆ ಅಭ್ಯರ್ಥಿಗಳ ಹೆಸರುಗಳನ್ನು ಚರ್ಚಿಸಿದ್ದೇವೆ. ಕೆಲವು ಕಡೆಗಳಲ್ಲಿ ಒಬ್ಬರ ಹೆಸರು ಚರ್ಚೆಯಾದರೆ ಮತ್ತೆ ಕೆಲವೆಡೆ ಹಲವು ಹೆಸರು ಚರ್ಚೆಯಾಗಿದೆ ಎಂದರು.ಚರ್ಚೆಯಾದ ಹೆಸರುಗಳನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಗೆ ರವಾನಿಸುತ್ತೇವೆ.

ಇದೇ 14ರ ನಂತರ ದೆಹಲಿಯಲ್ಲಿ ನಡೆಯುವ ಸಭೆಗೆ ನಾನು ಹಾಗೂ ಮುಖ್ಯಮಂತ್ರಿಗಳು ಹೋಗಿ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ.ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಮ್ಮ ಅಭಿಪ್ರಾಯ ಏನೇ ಇರಬಹುದು ಅಂತಿಮವಾಗಿ ನಮ್ಮ ಹೈಕಮಾಂಡ್ ನಾಯಕರು, ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಸಮಿತಿ ತೀರ್ಮಾನ ಮಾಡಲಿದೆ. ಬಹುತೇಕ 75% ಕ್ಷೇತ್ರಗಳಲ್ಲಿ ಒಬ್ಬರ ಹೆಸರು ಶಿಫಾರಸ್ಸು ಮಾಡಿದ್ದೇವೆ ಎಂದು ಹೇಳಿದರು. ದೇವೇಗೌಡರು ಈಗ ಕಣ್ಣೀರು ಹಾಕುತ್ತಿದ್ದಾರೆ: ಡಿ ಕೆ ಶಿವಕುಮಾರ್‌ ಕೇಂದ್ರ ಸರ್ಕಾರ ಸಿಎಎ ಜಾರಿ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಕೇಂದ್ರ ಸರ್ಕಾರ ಕಳೆದ ಮೂರೂವರೆ ವರ್ಷಗಳಿಂದ ನಿದ್ರೆ ಮಾಡುತ್ತಿತ್ತು. ಈಗ ಚುನಾವಣೆ ಬಂದ ಕಾರಣ, ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುವ ಹೊತ್ತಲ್ಲಿ ಶಾಂತಿ ಕದಡಲು ಇಂತಹ ಪ್ರಯತ್ನ ಮಾಡಲಾಗಿದೆ.

ಇದಕ್ಕೂ ಮುನ್ನವೇ ಈ ವಿಚಾರವನ್ನು ಜಾರಿ ಮಾಡಬಹುದಿತ್ತು. ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಧರ್ಮ ರಕ್ಷಣೆ ಮಾಡಿಕೊಂಡು ಸಂವಿಧಾನದ ಆಶಯ ಕಾಪಾಡಿಕೊಂಡು ನಡೆಯಲಿದೆ ಎಂದು ತಿಳಿಸಿದರು.ಅನಂತ ಕುಮಾರ್ ಹೆಗಡೆ ಅವರು ಸಂವಿಧಾನ ಕುರಿತು ಹೇಳಿಕೆ ಕುರಿತು ಮಾತನಾಡಿ, ಸಂವಿಧಾನ ಬದಲಿಸಲು ಬಿಜೆಪಿ 400 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ನೀಡಿರುವ ಹೇಳಿಕೆ ಖಂಡನೀಯ. ಕಾಂಗ್ರೆಸ್ ಸರ್ಕಾರ ಇದ್ದಾಗ ನೀಡಿರುವ ಸಂವಿಧಾನ ಪ್ರತಿಯೊಬ್ಬ ಭಾರತೀಯನ ಪಾಲಿಗೆ ಪವಿತ್ರವಾದ ಗ್ರಂಥ. ಸಂವಿಧಾನ ಇಲ್ಲದೆ ದೇಶದ ರಕ್ಷಣೆ ಅಸಾಧ್ಯ.ಈ ಸಂವಿಧಾನದ ಮೂಲಕ ಎಲ್ಲಾ ವರ್ಗದವರ ರಕ್ಷಣೆ ಮಾಡಲಾಗುತ್ತಿದೆ.

ಇದನ್ನು ಬದಲಿಸಲು ಶಕ್ತಿ ಕೊಡಿ ಎಂದು ಬಿಜೆಪಿ ಕೇಳುತ್ತಿರುವುದು, ಇದನ್ನು ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಬಿಜೆಪಿ ಅವರ ವಿರುದ್ಧ ಯಾವ ಕ್ರಮ ಜರುಗಿಸಿದೆ. ಅವರನ್ನು ಉಚ್ಚಾಟಿಸಿದ್ದಾರಾ? ಇದು ಬಿಜೆಪಿಯ ಧ್ವನಿ. ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ತಿಳಿಸಿದರು.
WhatsApp Group Join Now
Telegram Group Join Now
Back to top button