4 ತಿಂಗಳಲ್ಲಿ ಜೈತನಮಾಳ ಸಮಗ್ರ ಅಭಿವೃದ್ಧಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಜಯ ದಾಖಲಿಸಿದರೆ ಚೈತನಮಾಳವನ್ನು ದತ್ತು ಸ್ವೀಕರಿಸಿ, ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೈತನ್ ಮಾಳದಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಚಿವರು, ಇಲ್ಲಿರುವ ಅವ್ಯವಸ್ಥೆ ನೋಡಿ ನಿಜಕ್ಕೂ ಬೇಸರ ಉಂಟಾಯಿತು. ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ಒದಗಿಸಲು ಈ ಭಾಗದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಜೈತನ್ ಮಾಳ ಜನರು ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆ ನೋಡಿ ಮರುಕ ಉಂಟಾಯಿತು. ಮೃಣಾಲ್ ಹೆಬ್ಬಾಳ್ಕರ್ ಆರಿಸಿ ಬಂದರೆ ಕೇವಲ ನಾಲ್ಕು ತಿಂಗಳಲ್ಲಿ ಅಭಿವೃದ್ಧಿ ಮಾಡಲಾಗುವುದು. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಅವರನ್ನು ಬೆಂಬಲಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಜುನೆ ಬೆಳಗಾವಿಯಲ್ಲಿ ಅದ್ದೂರಿ ಸ್ವಾಗತ
ಬಳಿಕ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಜುನೆ (ಹಳೇ) ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಚಾರ ನಡೆಸಿದರು. ಸ್ಥಳೀಯ ಮಹಿಳೆಯರು ಆರತಿ ಬೆಳಗಿ ಸಚಿವರನ್ನು ಸ್ವಾಗತಿಸಿದರು. ಹಳೇ ಬೆಳಗಾವಿ ನಾಕಾದಿಂದ ಕಲ್ಲಪ್ಪ ದೇವಸ್ಥಾನದವರೆಗೆ ಸಚಿವರೊಂದಿಗೆ ನೂರಾರು ಮಹಿಳೆಯರು ಹೆಜ್ಜೆ ಹಾಕಿದರು. ಚೌಡಿಗಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಜೊತೆಗೂಡಿ ಸಚಿವರು ಪ್ರಚಾರ ನಡೆಸಿದರು.
ಈ ವೇಳೆ ದೇವದಾಸ್ ಕನ್ನುಕರ್, ಕಾರ್ಪೋರೇಟರ್ ಲಕ್ಷ್ಮೀ ಲೋಖರೆ, ಮಲ್ಲಸರ್ಜ ಪಾಟೀಲ್,ತುಕರಾಮ್ ಹೊಸುರಕರ, ನೈ.ವೈ.ಕನ್ನುಕರ್, ಡಾ.ಸುಕೀರ್ತ್ ನಾರಾಯಣ್ ಭಂಡಾರಿ, ಮಾಧುರಿ ಜಾಧವ್, ಮುತ್ತುರಾಜ್, ನಾಗಪ್ಪ, ಯಲ್ಲಪ್ಪ ಗುಜನಾಳ, ಚಂದ್ರು, ಶಬ್ಬೀರ್, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.