ಸ್ತ್ರೀ ಸ್ವಾತಂತ್ರ್ಯದ ಸಶಕ್ತ ಧ್ವನಿ: ಸಾವಿತ್ರಿಬಾಯಿ ಪುಲೆ ಜನ್ಮದಿನ ಇಂದು

WhatsApp Group Join Now
Telegram Group Join Now

ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ಮಾನವೀಯತೆಯ ಪ್ರತಿಪಾದಕಿ. ಮಹಿಳೆಯರು ಮನೆಯಿಂದ ಹೊರಬರಲೂ ಅವಕಾಶವಿರದ ಕಾಲದಲ್ಲಿ ಪತಿ ಜ್ಯೋತಿಬಾ ಜತೆಗೂಡಿ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದರು.

ಮಹಿಳೆಯರು ಮತ್ತು ಕೆಳವರ್ಗದವರು ಶಿಕ್ಷಣ ಪಡೆಯುವಂತಿಲ್ಲವೆಂದು ಹೇಳುತ್ತಿದ್ದ ಕಾಲಘಟ್ಟದಲ್ಲಿ ಸಂಪ್ರದಾಯ ಹಾಗೂ ಧರ್ಮದ ಹೆಸರಿನಲ್ಲಿ ನಡೆಸಲಾಗುತ್ತಿದ್ದ ಅನೇಕ ಅನ್ಯಾಯಗಳನ್ನು ತಳಮಟ್ಟದಿಂದ ಕಿತ್ತುಹಾಕಲು ಹೋರಾಡಿದರು.

ಸಾವಿತ್ರಿಬಾಯಿ ಜನಿಸಿದ್ದು 1831ರ ಜ. 3ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಾಯಗಾವ ಗ್ರಾಮದಲ್ಲಿ. ತಂದೆ ಖಂಡೋಜಿ ನೆವಸೆ ಪಾಟೀಲ, ತಾಯಿ ಲಕ್ಷ್ಮೀಬಾಯಿ. ಆ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶವಿಲ್ಲದ ಕಾರಣ ಎಲ್ಲ ಮಹಿಳೆಯರಂತೆ ಸಾವಿತ್ರಿಯೂ ಅನಕ್ಷರಸ್ಥಳಾಗಿದ್ದಳು. 8ನೇ ವಯಸ್ಸಿನಲ್ಲೇ ಆಕೆಯ ವಿವಾಹ ಪುಣೆಯ ಜ್ಯೋತಿಬಾ ಫುಲೆ ಅವರೊಂದಿಗೆ ನೆರವೇರಿತು.

ವಿವಾಹದ ನಂತರ ಸಾವಿತ್ರಿಯ ಜೀವನದ ದಿಕ್ಕೇ ಬದಲಾಯಿತು. ಪ್ರಗತಿಪರ ದೃಷ್ಟಿಕೋನ ಹೊಂದಿದ್ದ ಜ್ಯೋತಿಬಾ, ಮನೆಯಲ್ಲಿಯೇ ಪತ್ನಿಗೆ ಅಕ್ಷರ ಕಲಿಸಿದರು. ಮುಂದೆ ಶಾಲೆಗೂ ಸೇರಿಸಿದರು. ಬಳಿಕ ಸಾವಿತ್ರಿಬಾಯಿ 1848ರಲ್ಲಿ ಪ್ರಾರಂಭಿಸಲಾದ ಮೊಟ್ಟಮೊದಲ ಕನ್ಯಾಶಾಲೆಯಲ್ಲಿ ಶಿಕ್ಷಕಿಯಾದರು. ಈ ಮೂಲಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೆಣ್ಣು ಶಿಕ್ಷಣ ಕಲಿಯುವುದು, ಕಲಿಸುವುದು ಅಪರಾಧ ಎಂಬ ಸಾಮಾಜಿಕ ವ್ಯವಸ್ಥೆ ಅಸ್ತಿತ್ವ ಇದ್ದಾಗಲೇ ಅವರು ಸ್ವತಃ ಅಕ್ಷರ ಕಲಿತು ಅನೇಕ ಹೆಣ್ಣು ಮಕ್ಕಳಿಗೆ ಅಕ್ಷರದ ಔತಣವನ್ನು ಉಣಬಡಿಸಿದರು. ಈ ಕಾರ್ಯಕ್ಕೆ ವಿಘ್ನ ತರಲು ಪುರುಷರು ಹಲವು ರೀತಿಯಿಂದ ಪ್ರಯತ್ನಿಸಿದರೂ ಸಾವಿತ್ರಿಬಾಯಿ ಧೃತಿಗೆಡಲಿಲ್ಲ.

ಫುಲೆ ದಂಪತಿ ಮಹಾರಾಷ್ಟ್ರದಾದ್ಯಂತ 1848ರಿಂದ 1857ರ ಅವಧಿಯಲ್ಲಿ 18 ಶಾಲೆಗಳನ್ನು ಆರಂಭಿಸಿದರು. ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಶಿಕ್ಷಣ ನೀಡಲು ಎಲ್ಲ ಪ್ರಯತ್ನ ಮಾಡಿದರು. ಈ ಶಾಲೆಗಳಲ್ಲಿ ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿಯಾಗಿ ಸಾವಿತ್ರಿಬಾಯಿ ಜವಾಬ್ದಾರಿ ನಿರ್ವಹಿಸಿದರು. ಈ ಶಾಲೆಗಳು ಕಡಿಮೆ ದಿನಗಳಲ್ಲಿ ಹೆಚ್ಚಿನ ಖ್ಯಾತಿ ಪಡೆದವು. ಪುರುಷ ವಿದ್ಯಾರ್ಥಿಗಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಶಾಲೆಗೆ ಬರುತ್ತಿದ್ದ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಷ್ಟೇ ಅಲ್ಲದೇ ಮಧ್ಯಾಹ್ನದ ಊಟ ನೀಡುವ ಸಲುವಾಗಿ ತನ್ನ ಮನೆಯಿಂದಲೇ ಊಟವನ್ನು ತರುವ ವ್ಯವಸ್ಥೆ ಮಾಡಿದರು.

ಸತಿಸಹಗಮನ, ಬಾಲ್ಯವಿವಾಹ, ಕೇಶಮುಂಡನ, ಅಸ್ಪೃಶ್ಯತೆ ವಿರುದ್ಧವೂ ಸಾವಿತ್ರಿಬಾಯಿ ಹೋರಾಡಿದರು. ಅಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ವಿವಾಹ ಮಾಡುತ್ತಿದ್ದರು. ಗಂಡಿನ ವಯಸ್ಸು ಅವರಿಗಿಂತ 2-3 ಪಟ್ಟು ಹೆಚ್ಚು ಇರುತ್ತಿತ್ತು. ಗಂಡ ತೀರಿಕೊಂಡಾಗ ಹೆಣ್ಣುಮಕ್ಕಳು ಚಿಕ್ಕವಯಸ್ಸಿನಲ್ಲೇ ವಿಧವೆಯಾಗುತ್ತಿದ್ದರು. ಅವರು ಮರುಮದುವೆ ಆಗುವಂತಿರಲಿಲ್ಲ. ಇಂತಹ ಹಲವು ಬಂಧನಗಳನ್ನು ಹಾಕಿದ್ದರಿಂದ ಮಹಿಳೆಯರ ಸ್ಥಿತಿ ದಾರುಣವಾಗಿತ್ತು. ಅನೇಕ ವಿಧವೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು.

ತಮ್ಮದಲ್ಲದ ತಪ್ಪಿಗೆ ನರಕಯಾತನೆ ಅನುಭವಿಸಿದ ವಿಧವೆಯರಿಗೆ ಸಾವಿತ್ರಿಬಾಯಿ ತಮ್ಮ ಮನೆಯನ್ನೇ ಆಶ್ರಯ ತಾಣವನ್ನಾಗಿ ಮಾಡಿದರು. 1890ರಲ್ಲಿ ಜ್ಯೋತಿಬಾ ನಿಧನರಾದಾಗ ಅಂತ್ಯಸಂಸ್ಕಾರದ ವಿಧಿಗಳನ್ನು ತಾನೇ ಮಾಡುವ ಮೂಲಕ ಸ್ಥಾಪಿತ ಸಂಪ್ರದಾಯಗಳಿಗೆ ಸಾವಿತ್ರಿಬಾಯಿ ತಿಲಾಂಜಲಿ ಇಟ್ಟರು. ಸಾವಿತ್ರಿಬಾಯಿ ಬದುಕಿರುವವರೆಗೂ ಸತ್ಯಶೋಧಕ್ ಚಳವಳಿ ನಡೆಸಿದರು. ಅಲ್ಲಿಯವರೆಗೆ ಬದುಕಲು ಯೋಗ್ಯವಾದ ಜೀವನವನ್ನು ಎಂದಿಗೂ ಅನುಭವಿಸದ ಲಕ್ಷಾಂತರ ಜನರಿಗೆ ಯೋಗ್ಯವಾದ ಜೀವನವನ್ನು ನೀಡಿದ ಮಹಾನ್ ಮಹಿಳೆ ಸಾವಿತ್ರಿಬಾಯಿ.

WhatsApp Group Join Now
Telegram Group Join Now
Back to top button