ಮುಸ್ಲಿಮರ ಮತ ಸಾಕು ಎಂದು ಸಿಎಂ ಹೇಳಿದಂತೆ ನಕಲಿ ವರದಿ ಪೋಸ್ಟ್: 7 ಮಂದಿ ವಿರುದ್ದ ಎಫ್‌ಐಆರ್
ಬೆಂಗಳೂರು: ಹಿಂದೂಗಳ ಮತ ಬೇಡ, ಮುಸ್ಲಿಂ ಮತಗಳಷ್ಟೇ ಸಾಕು, ಮುಂದಿನ ಜನ್ಮದಲ್ಲಿ ಮುಸ್ಲಿಮನಾಗುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಲ್ಲಿ ನಕಲಿ ಸುದ್ದಿ ಸೃಷ್ಟಿಸಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ವಾರಪತ್ರಿಕೆಯನ್ನು ಹೋಲುವ ನಕಲಿ ಸುದ್ದಿ ತುಣುಕನ್ನು ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕೃತ್ಯದಲ್ಲಿ ಭಾಗಿಯಾದ ಪ್ರಭಾಕರ ರೆಡ್ಡಿ, ವಸಂತ ಗಿಳಿಯಾರ, ವಿಜಯ ಹೆರಗು, ಪಾಂಡು ಮೋದಿ ಕಾ ಪರಿವಾರ, ಬಿ.ಎಸ್.ವೈ. ಸಪೋರ್ಟರ್ಸ್, ದಾವಣಗೆರೆ ಬಿಜೆಪಿ, ಧಾತ್ರಿ ಗೋಶಾಲೆ ಎಂಬ ಖಾತೆಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಫೇಕ್ ನ್ಯೂಸ್ ಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾರು ಕೂಡ ಕಾನೂನುಬಾಹಿರ ಕೃತ್ಯಕ್ಕೆ ಕೈ ಹಾಕದಂತೆ ಎಚ್ಚರಿಕೆ ನೀಡಿದ್ದರೂ ನನ್ನ ವಿರುದ್ಧವೇ ಸುಳ್ಳು ಸುದ್ದಿ ಸೃಷ್ಟಿಸಿ ಜನರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಕಾನೂನಿನ ಮೂಲಕ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.