ಬೆಳಗಾವಿ: ಅನಾರೋಗ್ಯದಿಂದ ಮೃತಪಟ್ಟ ಪುತ್ರನ ಅಂತ್ಯಕ್ರಿಯೆಗೆ ಹಣವಿಲ್ಲದೇ ಪರದಾಡಿದ ತಾಯಿ
ಬೆಳಗಾವಿ: ಅನಾರೋಗ್ಯದಿಂದ ಮೃತಪಟ್ಟ ಪುತ್ರನ ಅಂತ್ಯಕ್ರಿಯೆಗೆ ಹಣವಿಲ್ಲದೇ ತಾಯಿ ಶನಿವಾರ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಪರದಾಡಿದರು.
ಸವದತ್ತಿ ತಾಲ್ಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ ಗುರಕ್ಕನವರ (34) ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟರು.
ವಿಶ್ವನಾಥ ಅವರ ತಾಯಿ ನೀಲವ್ವ ಅವರ ರೋದನ ಹೇಳತೀರದಾಯಿತು. ‘ಇದ್ದ ಒಬ್ಬ ಮಗನ ಶವವನ್ನು ಊರಿಗೆ ಒಯ್ಯಲು ಮತ್ತು ಅಂತ್ಯಕ್ರಿಯೆ ನೆರವೇರಿಸಲು ಹಣವಿಲ್ಲ’ ಎಂದು ನೀಲವ್ವ ಸಂಕಟಪಟ್ಟರು.
ವಿಷಯ ತಿಳಿದು ಸ್ಥಳಕ್ಕೆ ಬಂದ ವಿಜಯ ಮೋರೆ ಅವರ ‘ಎಂಗ್ ಬೆಳಗಾಂ ಫೌಂಡೇಷನ್’ ಸದಸ್ಯರು ಮಹಿಳೆಗೆ ನೆರವಾದರು. ಮಹಾನಗರ ಪಾಲಿಕೆ ಆಂಬುಲೆನ್ಸ್‌ನಲ್ಲಿ ಶವ ಸಾಗಿಸಿ, ಸದಾಶಿವ ನಗರದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
‘ಮಗ ಅನಾರೋಗ್ಯಕ್ಕೆ ಒಳಗಾದಾಗ ನಾನು ಚಿಂತೆಗೀಡಾಗಿದ್ದೆ. ‘ನಿನಗೆ ಸಿದ್ದರಾಮಯ್ಯ ಅವರ ಗೃಹಲಕ್ಷ್ಮಿ ಯೋಜನೆಯ ₹2000 ಬರುತ್ತದೆ ಅವ್ವ. ನಾನು ಸತ್ತರೆ ಯೋಚನೆ ಮಾಡಬೇಡ’ ಎಂದು ಮಗ ಧೈರ್ಯ ಹೇಳಿದ್ದ. ಈಗ ಅವನೂ ಬಿಟ್ಟುಹೋದ. ನಾನು ಒಂಟಿಯಾದೆ’ ಎಂದು ನೀಲವ್ವ ಕಣ್ಣೀರು ಹಾಕಿದರು.
‘ಅಸಹಾಯಕರ ಹಾಗೂ ಅನಾಥ ಶವಗಳ ಅಂತ್ಯಕ್ರಿಯೆ ಮಾಡಲು ಫೌಂಡೇಷನ್ ಕಟ್ಟಿಕೊಂಡಿದ್ದೇವೆ. ಈವರೆಗೆ 948 ಶವಗಳ ಅಂತ್ಯಕ್ರಿಯೆ ಮಾಡಿದ್ದೇವೆ. ವೃದ್ಧರಿಗೆ ನೆರವಾಗುವುದು ನಮ್ಮ ಉದ್ದೇಶ’ ಎಂದು ಫೌಂಡೇಷನ್ ಮುಖಂಡ ಅಲನ್ ಮೋರೆ ಹೇಳಿದರು.