ಸವದಿ ಜೊತೆ ನಿರಂತರ ಸಂಪರ್ಕ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಅಲರ್ಟ್ ಆದ ‘ಕೈ’ ಹೈಕಮಾಂಡ್

WhatsApp Group Join Now
Telegram Group Join Now

ಬೆಳಗಾವಿ, ಫೆ.03: ಮಾಜಿ ಸಿಎಂ, ಕಾಂಗ್ರೆಸ್​ನ ಎಂಎಲ್​ಸಿ ಆಗಿದ್ದ ಜಗದೀಶ್ ಶೆಟ್ಟರ್ (Jagadish Shettar) ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ಹೈಕಮಾಂಡ್ ವಿರುದ್ಧ ಮುನಿಸಿಕೊಂಡು ಕಾಂಗ್ರೆಸ್ (Congress) ಸೇರಿದ್ದರು. ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ ಎಂಎಲ್​ಸಿ ಸ್ಥಾನ ನೀಡಿ ಗೌರವಿಸಿತ್ತು. ಇಷ್ಟೆಲ್ಲ ಇದ್ದರೂ ಜಗದೀಶ್ ಶೆಟ್ಟರ್​ ಮತ್ತೆ ಬಿಜೆಪಿಗೆ (BJP) ಸೇರಿದ್ದಾರೆ. ಇದು ಕಾಂಗ್ರೆಸ್​ಗೆ ಭಾರೀ ಆಘಾತ ತಂದಿದೆ. ಮತ್ತೊಂದೆಡೆ ಲಕ್ಷ್ಮಣ ಸವದಿ (Laxman Savadi) ಕೂಡ ಬಿಜೆಪಿ ಸೇರುತ್ತಾರೆ ಎಂಬ ಬಗ್ಗೆ ಮಾತುಗಳು ಹರಿದಾಡುತ್ತಿದ್ದು ಕಾಂಗ್ರೆಸ್ ಹೈಕಮಾಂಡ್ ಅಲರ್ಟ್ ಆಗಿದ್ದಾರೆ.

 

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ‘ಕೈ’ ಹೈಕಮಾಂಡ್ ಅಲರ್ಟ್ ಆಗಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದವರನ್ನ ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಪಕ್ಷ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಾನಾ ಸರ್ಕಸ್ ಮಾಡುತ್ತಿದೆ. ಶಾಸಕ ಲಕ್ಷ್ಮಣ ಸವದಿ ಕೂಡ ಪಕ್ಷ ಬಿಡದಂತೆ ಕೈ ನಾಯಕರು ಎಚ್ಚರಿಕೆ ವಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕ ಲಕ್ಷ್ಮಣ ಸವದಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ.

 

ಪಕ್ಷ ಬಿಡಬೇಡಿ ಎಂದು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಲಕ್ಷ್ಮಣ ಸವದಿಗೆ ಹೇಳಿದ್ದಾರೆ. ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಸವದಿಗೆ ಕರೆ ಮಾಡಿ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಬಿಡದಂತೆ ಮತ್ತು ಸೂಕ್ತ ಸ್ಥಾನಮಾನ ನೀಡುವುದಾಗಿ ಸವದಿಗೆ ಭರವಸೆ ನೀಡಿದ್ದಾರೆ. ಮುಂದಿನ ವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಸುರ್ಜೇವಾಲ ಭೇಟಿ ವೇಳೆ ಕೆಲ ಬೇಡಿಕೆ ಇಡಲು ಸವದಿ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

WhatsApp Group Join Now
Telegram Group Join Now
Back to top button