ಬಿಯರ್ ದರ ಮತ್ತೆ ಹೆಚ್ಚಳ, ಮದ್ಯ ಪ್ರಿಯರಿಗೆ ಆಘಾತ ನೀಡಿದ ರಾಜ್ಯ ಸರ್ಕಾರ
ಬೆಂಗಳೂರು, ಫೆಬ್ರವರಿ 2: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ (Karnataka government) ಮತ್ತೆ ಆಘಾತ ನೀಡಿದೆ. ಪದೇ ಪದೇ ದರ ಏರಿಕೆ ಮಾಡಿ ಜೇಬಿಗೆ ಕತ್ತರಿ ಹಾಕುತ್ತಿದ್ದು, ಕಿಸೆಯಲ್ಲಾ ಖಾಲಿಯಾದರೂ ಕಿಕ್ ಮಾತ್ರ ಏರದಂತಾಗಿದೆ.! ರಾಜ್ಯ ಸರ್ಕಾರ ಬಿಯರ್ (Beer) ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದೆ. ಅಬಕಾರಿ ಸುಂಕವನ್ನು ಶೇಕಡಾ 185 ರಿಂದ ಶೇಕಡಾ 195 ಕ್ಕೆ ಅಂದ್ರೆ ಶೇ 10 ರಷ್ಟು ಹೆಚ್ಚಿಸಿದೆ. ಇದರಿಂದಾಗಿ, ಬಿಯರ್ ಬಾಟಲ್ ಬೆಲೆ (Beer Price) 10 ರಿಂದ 15 ರೂಪಾಯಿ ಹೆಚ್ಚಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.
7 ತಿಂಗಳಲ್ಲಿ 3ನೇ ಬಾರಿ ಬಿಯರ್ ದರ ಹೆಚ್ಚಳ
ಇದರೊಂದಿಗೆ, ಕಳೆದ 7 ತಿಂಗಳ ಅವಧಿಯಲ್ಲಿ 3ನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾದಂತಾಗಿದೆ. ಬಿಯರ್ ಬೆಲೆ ಒಟ್ಟು 40 ರೂ. ಜಾಸ್ತಿ ಆಗಿದೆ. ಪದೆಪದೇ ದರ ಏರಿಸಿದರೆ ವ್ಯಾಪಾರಕ್ಕೂ ಹೊಡೆತ ಆಗುತ್ತದೆ ಎಂದು ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುಕ್ಕಾಣಿ ಹಿಡಿಯುತ್ತದ್ದಂತೆಯೇ ಬಿಯರ್ ಮೇಲೆ ಶೇ 20ರಷ್ಟು ಸುಂಕ ಹೆಚ್ಚಿಸಿತ್ತು. ಉತ್ಪಾದನಾ ವೆಚ್ಚ ಸರಿದೂಗಿಸಿಸಲು ಬಾಟಲ್ ಮೇಲೆ 10 ರೂ. ಏರಿಸಿತ್ತು. ಇದೀಗ ಮತ್ತೆ ಬಿಯರ್ ದರ ಹೆಚ್ಚಳ ಮಾಡಿದೆ. ಈ ವರ್ಷ ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ಆದಾಯ ಸಂಗ್ರಹಕ್ಕೆ ಗುರಿ ನೀಡಿದೆ.
ಈ ವರ್ಷ ರಾಜ್ಯ ಸರ್ಕಾರ ಅಬಾಕಾರಿ ಇಲಾಖೆಗೆ 36 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿ ನೀಡಿದೆ. 10 ತಿಂಗಳಲ್ಲಿ 27 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇನ್ನೆರಡು ತಿಂಗಳಿನಲ್ಲಿ ಗುರಿ ತಲುಪಲು 9 ಸಾವಿರ ಕೋಟಿ ಸಂಗ್ರಹವಾಗಬೇಕಿದೆ. ಇತ್ತ ಬೆಲೆ ಏರಿಕೆಯಿಂದ ಮದ್ಯಪ್ರಿಯರು ಬಿಯರ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ.