ಬೆಳಗಾವಿ ಜಿಲ್ಲೆಯಲ್ಲಿ ಏರುತ್ತಿರುವ ತಾಪಮಾನ; ಜನ ಹೈರಾಣ: ವೈದ್ಯರ ಸಲಹೆಗಳು ಬೇಸಿಗೆಯಲ್ಲಿ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆಗಳು
ಬೆಳಗಾವಿ : ಬೆಳಗಾವಿ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಹಲವು ದಿನಗಳಿಂದ 40 ಡಿಗ್ರಿಗಿತಂತಲೂ ಮೇಲ್ಪಟ್ಟು ಉಷ್ಣಾಂಶ ವರದಿಯಾಗುತ್ತಿದೆ. ಇನ್ನು ಮುಂದೆಯೂ ಉಷ್ಣಾಂಶ ಮತ್ತಷ್ಟು ಹೆಚ್ಚಾಗಲಿದ್ದು, ಬಿಸಿಗಾಳಿಯ ಭೀತಿಯೂ ಇದೆ.
ಬಿಸಿಲು, ತಾಪ, ಧಗೆಯಿಂದಾಗಿ ಜನ ಹೈರಾಣಾಗಿದ್ದು ಫ್ಯಾನ್, ಎಸಿ (ಹವಾನಿಯಂತ್ರಿತ)ಗಳ ಮೊರೆ ಹೋಗಿದ್ದಾರೆ.
ವಿದ್ಯುತ್ ಸರಬರಾಜು ಕಡಿತಗೊಂಡರಂತೂ ಮನೆಯಲ್ಲಿ ಕುಳಿತುಕೊಳ್ಳಲು ಆಗುವುದೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ, ಗ್ರಾಮಾಂತರ ವ್ಯಾಪ್ತಿಯಲ್ಲಿ ದುರಸ್ಥಿ ಮತ್ತು ಇತರ ಕಾರಣಗಳಿಗಾಗಿ ಬೆಳಿಗ್ಗಿನಿಂದ ಸಂಜೆವರೆಗೆ ವಿದ್ಯುತ್ ತೆಗೆಯುತ್ತಿರುವುದು ಜನರನ್ನು ಮತ್ತಷ್ಟು ಚಿಂತೆಗೆ ದೂಡಿದೆ.
ಕಳೆದ ಎರಡು ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ಬಿಸಿಲಿನ ಪ್ರಖರತೆ ಇಷ್ಟೊಂದು ಹೆಚ್ಚಾಗಿರಲಿಲ್ಲ. ದೀರ್ಘಾವಧಿಯ ಸರಾಸರಿ ನೋಡಿದರೆ ಈ ವರ್ಷ ಒಂದೂವರೆಯಿಂದ ಎರಡು ಡಿಗ್ರಿಯಷ್ಟು ಉಷ್ಣಾಂಶದ ಪ್ರಮಾಣ ಹೆಚ್ಚಿದೆ ಎನ್ನುತ್ತಾರೆ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರದ ತಜ್ಞರು.
ಒಂದೆಡೆ, ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ ನೀರಿನ ಅಭಾವವೂ ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಸುತ್ತಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರು ಕಲುಷಿತಗೊಂಡು, ಜನರಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಬಾರಿಯ ಬೇಸಿಗೆ ಜನರಿಗೆ ಮೇಲಿಂದ ಮೇಲೆ ಸವಾಲುಗಳನ್ನು ಹಾಕುತ್ತಿದೆ. ಕೊಳವೆಬಾವಿಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಕೊಳವೆಬಾವಿಗಳಲ್ಲಿನ ನೀರು ಬತ್ತಿ ಹೋಗಿದ್ದು, ನೀರೇ ಬರುತ್ತಿಲ್ಲ. ಹೊಸ ಕೊಳವೆಬಾವಿಗಳನ್ನು ಕೊರೆದರೂ ನೀರು ದಕ್ಕುತ್ತಿಲ್ಲ. ಬೆಳಗಾವಿಯಲ್ಲಿ 200 ಅಡಿಗಳಿಗೇ ಸಿಗುತ್ತಿದ್ದ ಅಂತರ್ಜಲ ಈ ಸಲ 300 ರಿಂದ 350 ಅಡಿ ಆಳಕ್ಕೆ ಹೋಗಿದೆ.
ಈ ಬಾರಿ ಬೇಸಿಗೆ ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ಆರೋಗ್ಯ, ನೀರಿನ ಲಭ್ಯತೆ, ಮೇವಿನ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ 15 ದಿನಗಳಿಗೊಮ್ಮೆ ಸಭೆ ನಡೆಸುತ್ತಿದ್ದು, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆ ನೀಡುತ್ತಿದ್ದಾರೆ.
ತಾಪಮಾನ ಏರುತ್ತಿರುವ ಪರಿಣಾಮವಾಗಿ ಜಿಲ್ಲೆಯಾದ್ಯಂತ ಸಂಘ-ಸಂಸ್ಥೆಗಳು ಅರವಟಿಕೆ, ನೆರಳಿನ ವ್ಯವಸ್ಥೆ ಮಾಡಿವೆ. ಕೆಲ ಸಂಸ್ಥೆಗಳು ಉಚಿತವಾಗಿ ಟ್ಯಾಂಕರ್ ನೀರು ಪೂರೈಕೆ ಮಾಡುವ ಮೂಲಕ ಜನರ ಸೇವೆಯಲ್ಲಿ ತೊಡಗಿವೆ. ಜಾನುವಾರುಗಳಿಗೂ ನೀರಿನ ವ್ಯವಸ್ಥೆ ಮಾಡಿವೆ. ರಸ್ತೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಬ್ಬಿನ ಹಾಲು, ಹಣ್ಣಿನ ರಸದ ಅಂಗಡಿಗಳು ತಲೆಎತ್ತಿವೆ. ಕಲ್ಲಂಗಡಿ ಸೇರಿದಂತೆ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.
ಬೇಸಿಗೆ ರಜೆ ಇಲ್ಲ: ಪ್ರತಿವರ್ಷ ಬೇಸಿಗೆ ಋತುವಿನಲ್ಲಿ ಸರ್ಕಾರಿ ನೌಕರರಿಗೆ ಮಧ್ಯಾಹ್ನದ ನಂತರ ಕೆಲಸಕ್ಕೆ ರಜೆ ನೀಡಲಾಗುತ್ತಿತ್ತು. ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ರಜೆ ನೀಡಿಲ್ಲ. ಈ ಹಿಂದಿನ ವರ್ಷವೂ ವಿಧಾನಸಭಾ ಚುನಾವಣೆ ಕಾರಣ ನೀಡಿ ಮಧ್ಯಾಹ್ನದ ರಜೆ ನಿರ್ಬಂಧಿಸಲಾಗಿತ್ತು. ಹೀಗಾಗಿ ಕಚೇರಿ ಕೆಲಸಗಾರರು ಗೊಣಗಿಕೊಂಡೇ ವೃತ್ತಿ ನಿಭಾಯಿಸುತ್ತಿದ್ದಾರೆ.
ವೈದ್ಯರ ಸಲಹೆಗಳು
- ಮಧ್ಯಾಹ್ನ 12ರಿಂದ 5 ಗಂಟೆಯವರೆಗೆ ಹೊರಗಡೆ ಹೋಗದಿರುವುದು ಒಳಿತು
- ಹೊರಗಡೆ ಹೋದಾಗ ಕುಡಿಯುವ ನೀರು ತೆಗೆದುಕೊಂಡು ಹೋಗಿ
- ನಿರ್ಜಲೀಕರಣ ತಪ್ಪಿಸಲು ಒಆರ್‌ಎಸ್ ಮಿಶ್ರಿತ ನೀರು ಕುಡಿಯುವುದು ಒಳ್ಳೆಯದು
- ಮಜ್ಜಿಗೆ, ಎಳನೀರು, ಪಾನಿಯ ಕುಡಿಯಿರಿ
- ಮಧ್ಯಾಹ್ನ ಹೊರಗಡೆ ಹೋದರೆ ಟೊಪ್ಪಿಗೆ, ಕೊಡೆ ಬಳಸಿ
- ಮಕ್ಕಳಿಗೆ ರಜೆ ಇರುವುದರಿಂದ ಮಧ್ಯಾಹ್ನ ಹೊರಗಡೆ ಕಳುಹಿಸದಿರುವುದು ಒಳ್ಳೆಯದು
- ಬಿಗಿಯಲ್ಲದ ಹತ್ತಿ ಬಟ್ಟೆಗಳನ್ನೇ ಧರಿಸಬೇಕು.
ಬೇಸಿಗೆಯಲ್ಲಿ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆಗಳು
ಶಾಖಾಘಾತ ಸೋಂಕು ನಿರ್ಜಲೀಕರಣ ಕಾಲರಾ ಟೈಫಾಯ್ಡ್ ವಾಂತಿ-ಭೇದಿ ಕಣ್ಣಿನ ಸಮಸ್ಯೆ ಅಮ್ಮ ಬಿಸಿನಿಲಿಂದ ತಲೆ ಸುತ್ತು ಮೂಗಿನಲ್ಲಿ ರಕ್ತ ಸುರಿಯುವುದು ಅತಿಯಾದ ಸೂರ್ಯಕಿರಣಗಳಿಂದ ಚರ್ಮ ಸಮಸ್ಯೆಗಳು ಧೂಳಿನಿಂದ ಚರ್ಮದ ಅಲರ್ಜಿ ಶ್ವಾಸಕೋಶ ತೊಂದರೆ ಬೆವರು ಗುಳ್ಳೆ ಕೀವು ತುಂಬಿದ ಗುಳ್ಳೆ ಕೆಮ್ಮು ತಲೆ ಸುತ್ತು ಅಂಗೈ-ಅಂಗಾಲು ಉರಿ ಉರಿ ಮೂತ್ರ ಸರ್ಪಸುತ್ತು ಮಲಬದ್ಧತೆ ಕಾಣಿಸಿಕೊಳ್ಳುತ್ತವೆ.
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು
ಸನ್-ಹೀಟ್ ಸ್ಟ್ರೋಕ್‌ಗೆ ಒಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ಆರೋಗ್ಯ ಕೇಂದ್ರಗಳು ಸನ್ನದ್ಧ ಸ್ಥಿತಿಯಲ್ಲಿವೆ. ಅಗತ್ಯ ಇರುವ ಕಡೆ ಒಅರ್‌ಎಸ್ ಮಿಶ್ರಿತ ನೀರು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದ ಒಆರ್‌ಎಸ್ ಪೊಟ್ಟಣಗಳ ದಾಸ್ತಾನನು ಇಡಲಾಗಿದೆ. ಮಕ್ಕಳು ಹಿರಿಯರು ಬೆಳಗ್ಗೆ 11ರ ನಂತರ ಮನೆಗಳಿಂದ ಹೊರ ಹೋಗದಿರುವುದು ಒಳ್ಳೆಯದು. ನಿತ್ಯ ಹೆಚ್ಚಿನ ಪ್ರಮಾಣದ ನೀರು ಕುಡಿಯಬೇಕು ಎಂದು ತಿಳಿಸಿದ್ದಾರೆ.