BIG NEWS : ಮಹಾಸಮರಕ್ಕೆ ಮಹೂರ್ತ ಫಿಕ್ಸ್, ಇಲ್ಲಿದೆ ಲೋಕಕದನದ ವೇಳಾಪಟ್ಟಿ
ನವದದೆಹಲಿ,ಮಾ.16- ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ 18ನೇ ಲೋಕಸಭೆ ಚುನಾವಣೆ ಏ.19ರಿಂದ ಮೇ 26ರವರೆಗೆ ಏಳು ಹಂತಗಳಲ್ಲಿ ನಡೆಯಲಿದ್ದು, ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‍ಕುಮಾರ್ ಲೋಕಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದರು.
543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಏ.19, 2ನೇ ಹಂತದ ಏ.26, ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13, ಐದನೇ ಹಂತ ಮೇ 20, ಆರನೇ ಹಂತ ಮೇ 25 ಹಾಗೂ ಕೊನೆಯ ಏಳನೇ ಹಂತದ ಮತದಾನ ಜೂನ್ 1ರಂದು ನಡೆಯಲಿದೆ.
ಅರುಣಾಚಲ ಪ್ರದೇಶ, ಅಂಡಮಾನ್ ನಿಕೋಬಾರ್, ಛತ್ತೀಸ್‍ಘಡ, ದಾದರ್ ಮತ್ತು ಹವೇಲಿ, ದೆಹಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಕೇರಳ, ಲಕ್ಷದ್ವೀಪ, ಲಡಾಖ್, ಮಿಜೋರಾಂ, ಮೇಘಾಲಯ, ನಾಗಲ್ಯಾಂಡ್, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್, ತೆಲಂಗಾಣ ಹಾಗೂ ಉತ್ತರಖಂಡ್‍ನಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಕರ್ನಾಟಕ, ರಾಜಸ್ಥಾನ, ತ್ರಿಪುರ, ಮತ್ತು ಮಣಿಪುರದಲ್ಲಿ 2 ಹಂತದ ಮತದಾನ ನಡೆದರೆ ಛತ್ತೀಸ್‍ಘಡ ಮತ್ತು ಅಸ್ಸಾಂನಲ್ಲಿ ಮೂರು ಹಂತದ ಮತದಾನ ನಡೆಸಲು ಆಯೋಗ ತೀರ್ಮಾನಿಸಿದೆ.
ಒಡಿಸ್ಸಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್‍ನಲ್ಲಿ ನಾಲ್ಕು ಹಂತ, ಮಹಾರಾಷ್ಟ್ರ, ಜಮ್ಮುಕಾಶ್ಮೀರದಲ್ಲಿ 5 ಹಂತ ಹಾಗೂ ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿ ದೇಶಾದ್ಯಂತ 97 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು, ಮೊದಲ ಬಾರಿಗೆ ಅಂದರೆ 18ರಿಂದ 19 ವರ್ಷದೊಳಗಿನ ಸುಮಾರು 1.80 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ.85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಾರಿ 12 ರಾಜ್ಯಗಳಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದು, ಶೇ.40ಕ್ಕಿಂತ ಹೆಚ್ಚು ವಿಕಲಚೇತನರಿದ್ದರೆ ಅವರು ಕೂಡ ಮನೆಯಿಂದಲೇ ಮತ ಚಲಾಯಿಸಬಹುದು.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಸುಳ್ಳು ಮಾಹಿತಿ ಮತ್ತು ನಕಲು ಸುದ್ದಿ, ನೀತಿಸಂಹಿತೆ ಉಲ್ಲಂಘನೆ, ತೋಳ್ಬಲ ಮತ್ತು ಹಣದ ಪ್ರಭಾವ ತಡೆಗಟ್ಟುವುದು ಚುನಾವಣಾ ಆಯೋಗಕ್ಕೆ ಈ ಬಾರಿ ಸವಾಲುಗಳಾಗಿವೆ ಎಂದು ಆಯೋಗದ ಮುಖ್ಯಸ್ಥರು ಹೇಳಿದ್ದಾರೆ.
ಗಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ದ್ರೋಣ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮತದಾರರಿಗೆ ಕುಕ್ಕರ್, ಟಿವಿ, ಫ್ರಿಡ್ಜ್, ನಗದು, ಉಡುಗೊರೆಗಳು, ಮದ್ಯ ಸೇರಿದಂತೆ ಇತರೆ ಆಮಿಷವೊಡ್ಡಿದರೆ ಕಾನೂನು ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಸೂರ್ಯಾಸ್ತದ ಬಳಿಕ ಎಟಿಎಂ ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿಬಂಧನೆ ಹಾಕಿರುವ ಆಯೋಗ ಕಪ್ಪು ಹಣ ಸಾಗಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಆಯೋಗ ಸುಳ್ಳು ಸುದ್ದಿ ಹಬ್ಬಿಸುವುದು, ಖಾಸಗಿ ಬದುಕಿನ ಮೇಲೆ ವಾಗ್ದಾಳಿ, ಜಾತಿ, ಧರ್ಮ ಆಧಾರಿತ ಪ್ರಚಾರ ಹಾಗೂ ಸುಳ್ಳು ಜಾಹಿರಾತು ನೀಡುವುದಕ್ಕೆ ನಿರ್ಬಂಧ ಹಾಕಿದೆ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ.
ಮತದಾರರ ಅಂಕಿಅಂಶ :
ಒಟ್ಟು ಮತದಾರರು 97 ಕೋಟಿ
49.72 ಕೋಟಿ ಪುರುಷರು
47.15 ಕೋಟಿ ಮಹಿಳೆಯರು
80 ವರ್ಷ ದಾಟಿದವರು 1.98 ಕೋಟಿ
20-29 ವರ್ಷದೊಳಗಿನವರು 19.74 ಕೋಟಿ
18-19 ವರ್ಷದವರು 1.84 ಕೋಟಿ
ಯುವತಿಯರು 85 ಲಕ್ಷ
88 ಲಕ್ಷ ವಿಶೇಷ ವಿಕಲ ಚೇತನರು
2.18 ಶತಾಯುಷಿ ಮತದಾರರು
ಒಟ್ಟು ಮತಗಟ್ಟೆ 10.5 ಲಕ್ಷ
ಇವಿಎಂ 55 ಲಕ್ಷ
4 ಲಕ್ಷ ವಾಹನ
1.5 ಕೋಟಿ ಭದ್ರತಾ ಸಿಬ್ಬಂದಿ ನಿಯೋಜನೆ