ಹೆಲ್ಮೆಟ್ ಇಲ್ಲದೇ ಸಂಚರಿಸುವವರ ಚಾಲನಾ ಪರವಾನಿಗೆ ಅಮಾನತುಗೊಳಿಸಲು ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಸೂಚನೆ
ಬೆಳಗಾವಿ: ಜಿಲ್ಲೆಯಾದ್ಯಂತ ಹಾಗೂ ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಶೇ.25 ರಷ್ಟು ಅಪಘಾತಗಳನ್ನು ಕಡಿಮೆಗೊಳಿಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಹೆಲ್ಮೆಟ್ ಇಲ್ಲದೇ ಸಂಚರಿಸುವವರ ಚಾಲನಾ ಪರವಾನಿಗೆ ಅಮಾನತುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಲ್ಲದೇ ನಗರದ ಆಯ್ದ ಪ್ರಮುಖ ಸ್ಥಳಗಳಲ್ಲಿ ಪ್ರಿಪೇಡ್ ಆಟೋ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.
ನಗರದ ಫುಟ್ ಪಾತ್ ಗಳಲ್ಲಿ ಕುಳಿತುಕೊಳ್ಳುವ ಬೀದಿ ವ್ಯಾಪಾರಿಗಳಿಂದ ಮಹಾನಗರ ಪಾಲಿಕೆಯವರು ಕರ ವಸೂಲಿ ಮಾಡುತ್ತಿರುವುದರಿಂದ ಅಂತಹ ವ್ಯಾಪಾರಿಗಳನ್ನು ತೆರವುಗೊಳಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಈ ಬಗ್ಗೆ ಪಾಲಿಕೆ ಗಮನಹರಿಸಬೇಕು ಎಂದು ಸಿದ್ದರಾಮಪ್ಪ ತಿಳಿಸಿದರು.
ದೇಶದಾದ್ಯಂತ ಅಪಘಾತ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರಂತರ ನಿಗಾ ವಹಿಸಿರುತ್ತದೆ. ಆದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗುವುದರ ಜತೆಗೆ ತಮಗೆ ನಿಗದಿಪಡಿಸಿದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹದಿನೇಳು ಬ್ಲ್ಯಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಅಪಘಾತಗಳನ್ನು ತಡೆಗಟ್ಟವುದಕ್ಕೆ ಸಂಬಂಧಿಸಿದಂತೆ ಪೊಲೀಸ್, ಲೋಕೋಪಯೋಗಿ ಮತ್ತಿತರ ಸಂಬಂಧಿತ ಇಲಾಖೆಯ ಅಧಿಕಾರಿಗಳ ಜಂಟಿ ತಂಡ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಹೆದ್ದಾರಿ ಅಥವಾ ಜಿಲ್ಲಾ ಮುಖ್ಯರಸ್ತೆಗೆ ಕೂಡುರಸ್ತೆಗಳಿರುವ ಕಡೆಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು; ರಸ್ತೆ ಸರಿಯಾಗಿ ಕಾಣಿಸಲು ಅನುಕೂಲವಾಗುವಂತೆ ಗಿಡಗಂಟೆಗಳು ಅಥವಾ ಪೊದೆಯನ್ನು ಕತ್ತರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಬ್ಬು ಸಾಗಾಣಿಕೆ ಮಾಡುವ ಹಾಗೂ ಇತರೆ ಟ್ರ್ಯಾಕ್ಟರ್ ಹಾಗೂ ಟ್ರೇಲರ್ ಗಳಿಗೆ ರಿಫ್ಲೆಕ್ಟರ್ ಕಡ್ಡಾಯವಾಗಿ ಅಳವಡಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಡಾ.ಭೀಮಾಶಂಕರ ಗುಳೇದ ಹೇಳಿದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಪರವಾನಿಗೆ ನೀಡುವಾಗ ಮತ್ತು ವಾಹನ ನೋಂದಣಿ ಸಂದರ್ಭದಲ್ಲಿ ಈ ಬಗ್ಗೆ ಗಮನಹರಿಸಬೇಕು ಎಂದು ಡಾಗುಳೇದ ನಿರ್ದೇಶನ ನೀಡಿದರು.
ನಗರದ ಕೆಲವು ಪ್ರದೇಶಗಳಲ್ಲಿ ಖಾಸಗಿ ಬಸ್ ಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದಲ್ಲದೇ ಫುಟ್ ಪಾಥ್ ಅತಿಕ್ರಮಣದಿಂದ ಜನಸಂಚಾರಕ್ಕೂ ಅನಾನುಕೂಲವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ ಎಂದು ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿ ಅರುಣ ಕುಮಾರ್ ಪಾಟೀಲ ಸಭೆಯಲ್ಲಿ ವಿವರಿಸಿದರು.
ಬ್ಲ್ಯಾಕ್ ಸ್ಪಾಟ್ ಗಳನ್ನು ಸಂಬಂಧಿತ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ಮುಂಬರುವ ದಿನಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಡಿಸಿಪಿ ಸ್ನೇಹಾ, ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ಝಿಬ್ರಾ ಕ್ರಾಸಿಂಗ್ ಮತ್ತಿತರ ಮಾರ್ಕಿಂಗ್ ಹಾಗೂ ಸಂಚಾರ ಚಿಹ್ನೆಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ.ಸೊಬರದ, ಸಮಿತಿಯ ಸದಸ್ಯರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ಸಾರಿಗೆ ಇಲಾಖೆಯ ಡಿಟಿಓ ಲಮಾಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗೇಶ್ ಮುಂಡಾಸ, ವಾರ್ತಾಧಿಕಾರಿ ಗುರುನಾಥ ಕಡಬೂರ ಸೇರಿದಂತೆ ಲೋಕೋಪಯೋಗಿ, ಪೊಲೀಸ್, ಸಾರಿಗೆ ಇಲಾಖೆ, ಮಹಾನಗರ ಪಾಲಿಕೆ ಮತ್ತಿತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.