Belagavi: ಸಂಸದೆ ಮಂಗಲಾ ಸ್ಪರ್ಧಿಸುತ್ತಾರಾ? ಪುತ್ರಿ ಶ್ರದ್ಧಾ ಕಣಕ್ಕಿಳಿಯುತ್ತಾರಾ?

WhatsApp Group Join Now
Telegram Group Join Now

ಬೆಳಗಾವಿ: ಕನ್ನಡ ಮತ್ತು ಮರಾಠಿ ಭಾಷಿಕ ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರೇ ತಮ್ಮ ಪಕ್ಷ ಮೂಲೆಗುಂಪಾಗುವಂತೆ ಮಾಡಿದ್ದರು.

 

ಇದರ ಲಾಭ ಸಿಕ್ಕಿದ್ದು ಬಿಜೆಪಿಗೆ.

ಇದುವರೆಗೆ ಒಂದು ಉಪಚುನಾವಣೆ ಸಹಿತ ಒಟ್ಟು 15 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದು 12 ಬಾರಿ. ಆದರೆ ಒಮ್ಮೆ ಮಾತ್ರ ಸಚಿವ ಸ್ಥಾನದ ಅವಕಾಶ ಸಿಕ್ಕಿದೆ. 1956ರಲ್ಲಿ ಬಿ.ಎನ್‌.ದಾತಾರ ಮಾತ್ರ ಸಚಿವರಾಗಿದ್ದರು.

 

1957ರಿಂದ 1991ರ ವರೆಗೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು 1996ರಲ್ಲಿ ಮುರಿದ ಶಿವಾನಂದ ಕೌಜಲಗಿ ಜನತಾದಳದ ಖಾತೆ ತೆರೆದರು. ಆದರೆ ಈ ಸಂತಸ ಇದ್ದದ್ದು ಕೇವಲ ಎರಡು ವರ್ಷ ಮಾತ್ರ. 2004ರಿಂದ ಇದು ಬಿಜೆಪಿಯ ಭದ್ರಕೋಟೆಯಾಗಿದೆ. 2004ರಿಂದ ಬಿಜೆಪಿಯ ಸುರೇಶ ಅಂಗಡಿ ಸತತ ನಾಲ್ಕು ಬಾರಿ ಗೆದ್ದಿದ್ದರು. ಅವರ ಅಕಾಲಿಕ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಪತ್ನಿ ಮಂಗಲಾ ಸುರೇಶ ಅಂಗಡಿ ಗೆದ್ದಿದ್ದರು.

 

ಜಾತಿ ಆಧಾರಿತ ಟಿಕೆಟ್‌
ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ಬೆಳಗಾವಿ ಲೋಕಸಭೆ ಕ್ಷೇತ್ರ ಮೊದಲಿಂದಲೂ ಅಭಿವೃದ್ಧಿಗಿಂತ ಜಾತಿವಾರು ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಹೀಗಾಗಿ ಇಲ್ಲಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಪ್ರಬಲ ಲಿಂಗಾಯತ ನಾಯಕರನ್ನೇ ಕಣಕ್ಕಿಳಿಸಿವೆ. ಆದರೆ ಈ ಬಾರಿ ಜಾತಿ ಆಧಾರದಲ್ಲಿ ಟಿಕೆಟ್‌ ಹಂಚಿಕೆ ಅಷ್ಟು ಸುಲಭವಾಗಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಟಿಕೆಟ್‌ ವಿಷಯ ಅತ್ಯಂತ ಪ್ರತಿಷ್ಠೆಯಾಗಿದೆ.

 

ಈ ಕ್ಷೇತ್ರದಲ್ಲಿ ಲಿಂಗಾಯತ, ಮರಾಠ ಮತ್ತು ಕುರುಬ ಸಮಾಜದ ಮತಗಳು ಅಧಿಕವಾಗಿರುವುದರಿಂದ ಸಹಜವಾಗಿಯೇ ಈ ಸಮುದಾಯಗಳ ಬೇಡಿಕೆ ಹೆಚ್ಚಾಗಿದೆ. ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡೇ ಇದೆ. ಪೈಪೋಟಿಯೂ ಅಷ್ಟೇ ಪ್ರಬಲವಾಗಿದೆ. ಹೀಗಾಗಿ ಯಾರಿಗೆ ಟಿಕೆಟ್‌ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

 

ಕಾಂಗ್ರೆಸ್‌ನಲ್ಲಿ ಯಾರು ಮೇಲು?

ಕಾಂಗ್ರೆಸ್‌ನಲ್ಲಿ ಮರಾಠ ಸಮುದಾಯಕ್ಕಿಂತ ಲಿಂಗಾಯತ ಮತ್ತು ಕುರುಬ ಸಮಾಜದಲ್ಲಿ ಟಿಕೆಟ್‌ಗೆ ಹೆಚ್ಚಿನ ಪೈಪೋಟಿ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆಪ್ತ ಕಿರಣ ಸಾಧುನವರ ಮತ್ತು ಡಾ| ಗಿರೀಶ ಸೊನವಾಲ್ಕರ ಮುಂಚೂಣಿಯಲ್ಲಿದ್ದಾರೆ. ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಕೂಡ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಇದೇ ಕ್ಷೇತ್ರದಿಂದ ಒಮ್ಮೆ ಸಂಸದರಾಗಿದ್ದ ಅಮರಸಿಂಹ ಪಾಟೀಲ್‌ ಮತ್ತೆ ಟಿಕೆಟ್‌ಗಾಗಿ ಕೇಂದ್ರ ಮಟ್ಟದಲ್ಲಿ ಪ್ರಯತ್ನಿಸಿದ್ದಾರೆ.

 

ಕವಲುದಾರಿಯಲ್ಲಿ ಬಿಜೆಪಿ?
ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಬಿಜೆಪಿಯಲ್ಲಿ ಅಂತರಿಕವಾಗಿ ಊಹಿಸಲಾಗದಷ್ಟು ಅಸಮಾಧಾನವಿದೆ. ಯಾರೊಬ್ಬರೂ ಬಹಿರಂಗವಾಗಿ ತೋರಿಸಿಕೊಳ್ಳುತ್ತಿಲ್ಲ. ಮುಖ್ಯವಾಗಿ ವಿಧಾನಸಭೆ ಚುನಾವಣೆಯ ಹೊಡೆತ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಸಂಬಂಧ ಆತ್ಮಾವಲೋಕನ ಸಭೆ ನಡೆದರೂ ಹೆಚ್ಚಿನ ಪ್ರಯೋಜನವಾಗಿಲ್ಲ.

 

ಟಿಕೆಟ್‌ ವಿಷಯದಲ್ಲಿ ಆಕಾಂಕ್ಷಿಗಳ ಪಟ್ಟಿ ನಿರೀಕ್ಷೆಗಿಂತ ದೊಡ್ಡದಿದೆ. ಇವರ ನಡುವೆ ನಿವೃತ್ತ ಐಎಎಸ್‌ ಆಧಿಕಾರಿ ಎಂ. ಜಿ.ಹಿರೇಮಠ ಅವರ ಟಿಕೆಟ್‌ ಲಾಬಿ ಹೆಚ್ಚು ಸದ್ದು ಮಾಡುತ್ತಿದೆ. ಕೊರೊನಾ ಸಮಯದಲ್ಲಿ ಒಂದೇ ದಿನ ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ಲಸಿಕೆ ವಿತರಿಸಿ ದೇಶದ ಗಮನಸೆಳೆದು ದಾಖಲೆ ಮಾಡಿದ್ದ ಅವರ ಶ್ರಮದ ಬಗ್ಗೆ ಬಿಜೆಪಿ ವರಿಷ್ಠರು ಆಸಕ್ತಿ ವಹಿಸಿದ್ದಾರೆ. ಇದು ಹಿರೇಮಠ ಇವರಿಗೆ ಟಿಕೆಟ್‌ ಕೊಡಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

 

ಬಿಜೆಪಿಗೆ ಮರಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಮತ್ತು ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್‌, ಎಂ.ಬಿ.ಜಿರಲಿ, ಮಂಗಲಾ ಸುರೇಶ ಅಂಗಡಿ ಅಥವಾ ಶ್ರದ್ಧಾ (ಶೆಟ್ಟರ್‌) ಅಂಗಡಿ, ಶಂಕರಗೌಡ ಪಾಟೀಲ್‌ ಹೆಸರುಗಳು ಕೂಡ ಚಾಲ್ತಿಯಲ್ಲಿವೆ. ಇನ್ನೊಬ್ಬ ಪ್ರಮುಖ ಆಕಾಂಕ್ಷಿ ಮಾಜಿ ಶಾಸಕ ಅನಿಲ್‌ ಬೆನಕೆಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲಾಗಿದೆ. ಹಾಲಿ ಸಂಸದೆ ಮಂಗಲಾ ಅವರು ನನಗೆ ಟಿಕೆಟ್‌ ಕೊಡಿ ಇಲ್ಲದಿದ್ದರೆ ಪುತ್ರಿಗೆ ಅವಕಾಶ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಕೊನೆ ಕ್ಷಣದಲ್ಲಿ ಅಚ್ಚರಿಯ ಹೆಸರು ಘೋಷಣೆ ಸಾಧ್ಯತೆಯೂ ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿದೆ.

 

ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುವ ಜೆಡಿಎಸ್‌ ಈಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಇದರಿಂದ ಸುಮಾರು 20ರಿಂದ 30 ಸಾವಿರ ಹೆಚ್ಚುವರಿ ಮತಗಳು ಬಿಜೆಪಿಗೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

 

WhatsApp Group Join Now
Telegram Group Join Now
Back to top button