ನಾನು ಎಲ್ಲದಕ್ಕೂ ಸಿದ್ಧ ಎಂದ ಕನಕಪುರ ಬಂಡೆ: ನನ್ನನ್ನು ಜೈಲಿಗೆ ಕಳುಹಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ.
ಬೆಂಗಳೂರು, ಫೆಬ್ರವರಿ 13: ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಅನೇಕರು ಮಾತನಾಡಿದ್ದಾರೆ. ಅವರೂ ಮಾತನಾಡಿದ್ದಾರೆ, ನಮ್ಮ ಜಿಲ್ಲೆಯವರೂ ಮಾತನಾಡಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಬಿಐ ಮೂಲಕ ಏನೇನು ಮಾಡಿಸುತ್ತಿದ್ದಾರೆ, ಬೇರೆಯವರ ಮೂಲಕ ಏನು ಮಾಡಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ.
ಸಮಯ ಬಂದಾಗ ಮಾತನಾಡುತ್ತೇನೆ ಎಂದು ತಿಳಿಸಿದರು. ಡಿ.ಕೆ ಸಹೋದರರನ್ನು ರಾಮನಗರದಲ್ಲಿ ಕಟ್ಟಿಹಾಕಲು ಬದ್ಧವೈರಿಗಳು ಒಂದಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಏನಾದರೂ ಮಾಡಲಿ. ಅವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ರಾಜಕಾರಣ ಮಾಡುವವರನ್ನು ನಾವು ಬೇಡ ಎನ್ನಲು ಸಾಧ್ಯವೇ? ಈ ಹಿಂದೆಯೂ ಸುರೇಶ್ ಅವರು ಚುನಾವಣೆಗೆ ನಿಂತಾಗ ದಳ ಮತ್ತು ಬಿಜೆಪಿಯವರು ಮಾತ್ರ ಮಾಡಿಕೊಂಡು ಅನಿತಾ ಕುಮಾರಸ್ವಾಮಿ ಅವರನ್ನು ಮಾತ್ರ ಕಣಕ್ಕಿಳಿಸಿದ್ದರು. ಅವರು ಏನಾದರೂ ರಾಜಕಾರಣ ಮಾಡಲಿ.ರಾಜ್ಯದ 28 ಸಂಸದರ ಪೈಕಿ ಸುರೇಶ್ ಅವರು ಮಾಡಿರುವ ಕೆಲಸ ಬೇರೆ ಯಾವುದೇ ಸಂಸದರು ಮಾಡಿಲ್ಲ. ಅದಕ್ಕೆ ದಾಖಲೆಗಳಿವೆ.
ಕುಡಿಯುವ ನೀರಿನ ವಿಚಾರ, ಅರಣ್ಯ ಜಮೀನು ಕೊಡಿಸಿರುವುದು, ಕೆರೆ ತುಂಬಿಸಿರುವುದು, ನಿವೇಶನ ಹಂಚಿಕೆ ಸೇರಿದಂತೆ ಅನೇಕ ಕೆಲಸ ಮಾಡಿದ್ದಾರೆ. ಈಗ ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮ ಬಳಿ ಅಧಿಕಾರ ಇದ್ದಾಗ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.ಸದನಕ್ಕೆ ಕೇಸರಿ ಶಾಲು ಹಾಕಿಕೊಂಡು ಬಂದ ಬಿಜೆಪಿ ನಾಯಕರು: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಕುಮಾರಸ್ವಾಮಿ ಈ ಹಿಂದೆ ಹೇಳಿದ್ದೆಲ್ಲಾ ಮತ್ತೆ ನೆನಪಿಸಿಕೊಳ್ಳಿ. ಅವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಿಗಾ ದೇವೇಗೌಡರೇ ಹೇಳಿದ್ದರು. ಅದಕ್ಕೆ ಪ್ರಧಾನಿಗಳು ನನ್ನ ಮನೆಯಲ್ಲೇ ಜಾಗ ನೀಡುತ್ತೇನೆ ಬನ್ನಿ ಎಂದಿದ್ದರು. ಕುಮಾರಸ್ವಾಮಿ ಅವರ ಮಾತುಗಳ ದಾಖಲೆ ನಿಮ್ಮ ಬಳಿ ಇಲ್ಲವೇ ಎಂದರು.
ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸಿದೆ ಎಂಬ ಬಿಜೆಪಿ ನಾಯಕರ ಆರೋಪದ ಕುರಿತು ಮಾತನಾಡಿ, ರಾಜ್ಯದ ಮಹಿಳೆಯರಿಗೆ 2 ಸಾವಿರ ಕೊಟ್ಟಿರುವುದು ಸುಳ್ಳೇ, ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಸಂಚಾರ ಮಾಡುತ್ತಿರುವುದು ಸುಳ್ಳೇ, ಯುವಕರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿರುವುದು ಸುಳ್ಳಾ? ಬಡವರಿಗೆ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣ ನೀಡುತ್ತಿರುವುದು ಸುಳ್ಳಾ? 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿರುವುದು ಸುಳ್ಳಾ? ಬಿಜೆಪಿಯವರು ರಾಮನ ಹೆಸರಲ್ಲಿ ಮತ ಕೇಳಲು ಹೊರಟಿದ್ದಾರೆ. ರಾಮ ಅವರ ಮನೆ ಆಸ್ತಿಯೇ? ರಾಮ ನಮ್ಮ ಆಸ್ತಿಯಲ್ಲವೇ? ನಾವು ಹಿಂದೂಗಳಲ್ಲವೇ? ಎಂದು ತಿರುಗೇಟು ನೀಡಿದರು.
ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲು ಡಿ.ಕೆ. ಸುರೇಶ್ ಅವರು ಸಂಕಲ್ಪ ಮಾಡಿದ್ದಾರೆ. ಅವರ ಯೋಜನೆಗಳನ್ನು ಜಾರಿಗೊಳಿಸಲು ನಾನು, ಇಕ್ಬಾಲ್ ಹುಸೇನ್, ಬಾಲಕೃಷ್ಣ, ರವಿ ಅವರು ಸಂಪೂರ್ಣ ಸಹಕಾರ ನೀಡುತ್ತೇವೆ. ಬಿಡದಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಪರಿವರ್ತಿಸುತ್ತಿದ್ದೇವೆ. ಬಿಡದಿ ಹಾಗೂ ಆನೇಕಲ್ ವರೆಗೂ ಮೆಟ್ರೋ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇನೆ. ರಾಮನಗರ ಜಿಲ್ಲೆಗೆ ಯಾವ ಯಾವ ಇಲಾಖೆಗಳಲ್ಲಿ ಏನೆಲ್ಲಾ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ತಿಳಿಸುತ್ತೇನೆ.
ತಮಿಳುನಾಡಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದ್ದರು. ನಮ್ಮ ಸರ್ಕಾರ ಶಕ್ತಿ ಯೋಜನೆ ಮೂಲಕ ಇಡೀ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಬರೀದಾಗುತ್ತವೆ ಎಂದು ಹೇಳುತ್ತಿದ್ದರು. ಈಗ ಪ್ರತಿ ತಿಂಗಳು ಮಹಿಳೆಯರ ಪ್ರಯಾಣದ ಹಣವನ್ನು ಸರ್ಕಾರ ಕಟ್ಟುತ್ತಿದೆ. ಬೆಳಗಾವಿ, ಹುಬ್ಬಳ್ಳಿ ಹಾಗೂ ಇತರೆ ಭಾಗದ ಜಿಲ್ಲೆಗಳಿಂದ ಬೆಂಗಳೂರಿಗೆ ಒಂದು ಬಾರಿ ಓಡಾಡಲು 1500-2000 ರೂಪಾಯಿ ಬೇಕಾಗುತ್ತದೆ. ಈ ಯೋಜನೆಯಿಂದ ಅವರಿಗೆ ಅಷ್ಟೂ ದುಡ್ಡು ಉಳಿಯುತ್ತದೆ. ಕೆಲಸಕ್ಕೆ ಓಡಾಡುವವರಿಗೂ ಈ ಯೋಜನೆ ಬಹಳ ಅನುಕೂಲವಾಗಿದೆ.
Follow Us