ಬೆಳಗಾವಿ ಜನತೆಗೆ ಗುಡ್ ನ್ಯೂಸ್: ಉಚಿತ ನೀರಿನ ಟ್ಯಾಂಕರ್, ಕಸ ವಿಲೇವಾರಿ ವಾಹನ ವಿತರಿಸಿದ ರಾಹುಲ್ ಜಾರಕಿಹೊಳಿ
ಉಚಿತ ನೀರಿನ ಟ್ಯಾಂಕರ್, ಕಸ ವಿಲೇವಾರಿ ವಾಹನ ವಿತರಿಸಿದ ರಾಹುಲ್ ಜಾರಕಿಹೊಳಿ
ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದ ಜನತೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತ ನೀರಿನ ಟ್ಯಾಂಕರ್, ಕಸ ವಿಲೇವಾರಿ ವಾಹನ ವಿತರಿಸಲಾಗುತ್ತಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ತಿಳಿಸಿದರು.
ಬೆಳಗಾವಿ ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ನೀರಿನ ಟ್ಯಾಂಕರ್ ಹಾಗೂ ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಚಿವ ಸತೀಶ್ ಜಾರಕಿಹೊಳಿ ಅವರ ಸಲಹೆ, ಸೂಚನೆ ಮೇರೆಗೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ಈಗ ಬೇಸಿಗೆ ಆರಂಭವಾಗುತ್ತಿದ್ದು, ಜನತೆಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಉಚಿತ ನೀರಿನ ಟ್ಯಾಂಕರ್ ನೀಡುತ್ತಿದ್ದೇವೆ. ನಗರ ಸ್ವಚ್ಛತೆಗಾಗಿ ಕಸ ವಿಲೇವಾರಿ ಮಾಡಲು ವಾಹನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಎರಡೆರಡು ವಾಹನ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದ ಜನರು ನೀರಿನ ಸಮಸ್ಯೆ ಇದ್ದಲ್ಲಿ ಪುರಸಭೆ ಸದಸ್ಯರ ಗಮನಕ್ಕೆ ತನ್ನಿ, ಪುರಸಭೆ ಸದಸ್ಯರು ಸತೀಶ್ ಜಾರಕಿಹೊಳಿ ಫೌಂಡೇಶನ್ ತಂಡಕ್ಕೆ ತಿಳಿಸಿ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ. ಸಾರ್ವಜನಿಕರ ಕಾರ್ಯಕ್ರಮಗಳಿಗೂ ನಮ್ಮ ತಂಡ ನೀರು ಒದಗಿಸುತ್ತದೆ ಎಂದರು.
ಶಾಸಕ ಆಸೀಪ್ (ರಾಜು) ಸೇಠ್ ಮಾತನಾಡಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪೌರಾಯುಕ್ತೆ ರಾಜೇಶ್ರಿ ಜೈನಾಪುರೆ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಕಿರಣ ಸಾಧುನ್ನವರ್, ಕಿರಣ ಪಾಟೀಲ್, ಪರಶುರಾಮ ಧಗೆ, ಅರವಿಂದ ಕಾರ್ಚಿ, ಆಯಿಷಾ ಸನದಿ, ಪ್ರಭಾವತಿ ಪಾಟೀಲ್, ಪುರಸಭೆ ಸದಸ್ಯರಾದ ಅಪ್ರೋಜ್ ಮುಲ್ಲಾ, ಅಜೀಂ ಪಟೇಗಾರ್, ಖುರ್ಸಿದ್ದ ಮುಲ್ಲಾ, ರವಿ ನಾಳುಂಕೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಮಹಿಳಾ ಕಾರ್ಯಕರ್ತೆಯರು ಇದ್ದರು.