ಲೋಕಸಭೆಗೆ ಕಾಂಗ್ರೆಸ್ನ 9 ಅಭ್ಯರ್ಥಿಗಳ ಫೈನಲ್: ಇವರೇ ನೋಡಿ ಕೈಕಲಿಗಳು.!
ಬೆಂಗಳೂರು: ಲೋಕಸಭಾ ಚುನಾವಣೆ ಇನ್ನೇನು ಹತ್ತಿರ ಬಂದೇಬಿಟ್ಟಿದೆ. ಹೀಗಾಗಿ ರಾಜಕೀಯ ಪಕ್ಷಗಳಲ್ಲಿ ದಿನೇ ದಿನೆ ಆತಂಕಗಳು ಹೆಚ್ಚಾಗ ತೊಡಗಿವೆ. ಹೀಗಾಗಿ ಪ್ರತಿಯೊಂದು ಹೆಜ್ಜೆಯನ್ನೂ ಲೆಕ್ಕಾಚಾರ ಮಾಡಿ ಇಡುತ್ತಿದ್ದಾರೆ. ಬಿಜೆಪಿ ಈಗಾಗಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಸಜ್ಜಾಗಿದೆ. ಅದರಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರನ್ನೂ ಘೋಷಣೆ ಮಾಡಲಿದೆ. ಅದೇ ಕಾಂಗ್ರೆಸ್ ಸಹ ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಗುರುವಾರ ನವ ದೆಹಲಿಯಲ್ಲಿ ಸಭೆ ನಡೆಸಲಾಗಿದೆ. ಇಲ್ಲಿ ಕರ್ನಾಟಕದ 14 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿ 9 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಹೈಕಮಾಂಡ್ ಸಭೆಗೆ ಮುಂಚಿತವಾಗಿ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಚರ್ಚೆ ನಡೆಸಿ ಒಂದು ಹಂತದ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಈ ಪಟ್ಟಿಯ ಬಗ್ಗೆ ಹೈಕಮಾಂಡ್ನಲ್ಲಿ ಚರ್ಚೆಯಾಗಿದ್ದು, 9 ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಗಿದೆ.
ಈ 9 ಮಂದಿಗೆ ಟಿಕೆಟ್ ಫೈನಲ್?
ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್
ಬೆಂಗಳೂರು ಕೇಂದ್ರ – ಎನ್.ಎ. ಹ್ಯಾರಿಸ್
ತುಮಕೂರು – ಮುದ್ದಹನುಮೇಗೌಡ
ಚಿತ್ರದುರ್ಗ – ಚಂದ್ರಪ್ಪ
ಕೋಲಾರ – ಕೆ.ಎಚ್. ಮುನಿಯಪ್ಪ
ಮಂಡ್ಯ – ಸ್ಟಾರ್ ಚಂದ್ರು (ವೆಂಕಟರಾಮಣೇಗೌಡ)
ಮೈಸೂರು – ಎಂ. ಲಕ್ಷ್ಮಣ್
ಬೀದರ್ – ರಾಜಶೇಖರ್ ಪಾಟೀಲ್
ಕಲಬುರಗಿ – ರಾಧಾಕೃಷ್ಣ
ಇನ್ನೂ 19 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಾಕಿ ಇದ್ದು, ಇವುಗಳನ್ನು ಸೋಮವಾರ ನಡೆಯಲಿರುವ ಸಭೆಯಲ್ಲಿ ಅಂತಿಮ ಮಾಡಲಾಗುವುದು ಎಂದು ತಿಳಿದುಬಂದಿದೆ. ಆದರೆ, ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶುಕ್ರವಾರವೂ ನಾಯಕರು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಇಂದೇ ಐದಾರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ದೆಹಲಿ ಕಾಂಗ್ರೆಸ್ ಮೂಲಕಗಳು ತಿಳಿಸಿವೆ.
ಕಾಂಗ್ರೆಸ್ನಿಂದ ಎಷ್ಟು ಪಟ್ಟಿ ಬಿಡುಗಡೆ? ಈಗ ಕಾಂಗ್ರೆಸ್ ಎಷ್ಟು ಪಟ್ಟಿ ಬಿಡುಗಡೆ ಮಾಡುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಒಂದಾ, ಎರಡೇ? ಮೂರೇ? ಹೀಗೆ ಎಷ್ಟು ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಕೆಲವು ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಕಡೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲಾಗಿದೆ. ಈಗ ಬಿಜೆಪಿ 28 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡುವವರೆಗೂ ಕೈಪಡೆ ಕಾಯಲಿದೆ. ಹೀಗಾಗಿ ಎರಡು ಪಟ್ಟಿ ಬಿಡುಗಡೆ ಮಾಡಲಿರುವ ಕಾಂಗ್ರೆಸ್, ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲು ವಿಳಂಬ ಮಾಡಲಿದೆ.
ಅಭ್ಯರ್ಥಿ ಕೊರತೆ ಇರುವ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿರುವ ಕಾಂಗ್ರೆಸ್ ಈಗ ಬಿಜೆಪಿ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲು ಮುಂದಾಗಿದೆ. ಅಲ್ಲಿ ಟಿಕೆಟ್ ವಂಚಿತರನ್ನು ಪಕ್ಷಕ್ಕೆ ಸೆಳೆಯುವ ಬಗ್ಗೆ ಯೋಚನೆ ಮಾಡಲಾಗಿದೆ. ಹೀಗಾಗಿ ಐದಾರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕೊನೇ ಗಳಿಗೆಯಲ್ಲಿ ಘೋಷಣೆ ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ.