ಶಿವಕುಮಾರ ಮಹಾ ಶಿವಯೋಗಿಗಳಿಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ಪತ್ರ: ಸಿಎಂ ಸಿದ್ದರಾಮಯ್ಯ ಭರವಸೆ

WhatsApp Group Join Now
Telegram Group Join Now

ತುಮಕೂರು; (ಸಿದ್ದಗಂಗಾ ಮಠ) : ಶಿವಕುಮಾರ ಮಹಾಶಿವಯೋಗಿ ಶ್ರೀಗಳು ಬಸವಾದಿ ಶರಣರ ಆಶಯಗಳನ್ನು ಆಚರಿಸಲು ಬದುಕನ್ನು ಮುಡಿಪಾಗಿಟ್ಟು ನುಡಿದಂತೆ ನಡೆದ ಮಹಾಯೋಗಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕರ್ನಾಟಕ ರತ್ನ ಶತಾಯುಷಿ ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸ್ಮರಣಾರ್ಥ ನಿರ್ಮಿಸಿರುವ “ಸ್ಮೃತಿ ವನ” ವನ್ನು ಉದ್ಘಾಟಿಸಿ, ಶ್ರೀಗಳ 5 ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀ ಶ್ರೀ ಶಿವಕುಮಾರಮಹಾಶಿವಯೋಗಿಗಳಿಗೆ ಭಾರತ ರತ್ನ ನೀಡಬೇಕು. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

12 ನೇ ಶತಮಾನದಲ್ಲೇ ಬಸವಾದಿ ಶರಣರು ಜಾತಿ ರಹಿತ, ವರ್ಗ ರಹಿತ ಸಮಾನತಾ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿಯನ್ನೇ ಮಾಡಿದ್ದರು. ಮನುಷ್ಯ ಕುಲ ಇರುವವರೆಗೂ ಶಾಶ್ವತ ಆಗಿ ಉಳಿಯುವ ಸಂದೇಶ ಮತ್ತು ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಈ ಮೌಲ್ಯಗಳನ್ನು ಪಾಲಿಸುವುದೇ ಬಸವಾದಿ ಶರಣರಿಗೆ ಸಲ್ಲಿಸುವ ಗೌರವ ಎಂದರು.‌

ಭಾರತ ಸಂವಿಧಾನದ ಆಶಯ ಮತ್ತು ಬಸವಾದಿ ಶರಣರ ಹೋರಾಟದ ಆಶಯ ಒಂದೇ ಆಗಿದೆ. ನಮಗೆ ಸಂವಿಧಾನ ಧರ್ಮಗ್ರಂಥ ಇದ್ದ ಹಾಗೆ. ಜನರ ಬದುಕನ್ನು ಎತ್ತಿರುವುದೇ ಈ ಸಂವಿಧಾನ ಎಂಬ ಧರ್ಮಗ್ರಂಥದ ಆಶಯ ಎಂದು ವಿವರಿಸಿದರು.

ಕಾಯಕ ಮತ್ತು ದಾಸೋಹ ಎರಡೂ ಜೀವನ ಮೌಲ್ಯಗಳು. ಈ ಮೌಲ್ಯಗಳನ್ನು ಪೂಜ್ಯರು ತಮ್ಮ ಬದುಕಿನುದ್ದಕ್ಕೂ ಆಚರಿಸಿದ್ದರು‌. ಇಂದು 10 ಸಾವಿರ ಮಕ್ಕಳಿಗೆ ಮಠದಲ್ಲಿ ವಿದ್ಯೆ, ವಸತಿ, ಅನ್ನ ಪಡೆಯುತ್ತಿದ್ದಾರೆ ಎಂದರೆ ಶಿವಕುಮಾರಮಹಾಯೋಗಿಗಳ ಬದುಕಿನ ಆಚರಣೆಯೇ ಕಾರಣ ಎಂದು ಮುಖ್ಯಮಂತ್ರಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ನಂಜುಂಡಪ್ಪ ಅವರ ವರದಿಯಂತೆ ಸರ್ಕಾರ ಕೆಲಸ ಮಾಡುತ್ತಿದೆ. ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದಕ್ಷಿಣ ಮತ್ತು ಉತ್ತರ ಕರ್ನಾಟಕ ನಡುವಿನ ಅಭಿವೃದ್ಧಿಯ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರ ಶ್ರಮಿಸುತ್ತಿದೆ. ಶಿಕ್ಷಣದ ಮೂಲಕ ತಾರತಮ್ಯ ಮತ್ತು ಅಸಮಾನ ಪ್ರಜ್ಞೆಯನ್ನು ಅಳಿಸಲು ಸಾಧ್ಯವಿದೆ. ನಾನು ಬಸವಾದಿ ಶರಣರ ತತ್ವಾದರ್ಶಗಳು ಸಮಾಜದಲ್ಲಿ ಜಾರಿ ಆದಾಗ ಮಾತ್ರ ಸಮಾನ ಅವಕಾಶಗಳು ಸೃಷ್ಟಿಯಾಗಲು ಸಾಧ್ಯ ಎಂದರು.

ಶಿವಕುಮಾರ ಸ್ವಾಮಿಗಳು ಬದುಕಿನುದ್ದಕ್ಕೂ ಅಕ್ಷರ ಸಂಸ್ಕೃತಿ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ‌ ಬದಲಾವಣೆ ತರಲು ಶ್ರಮಿಸಿದರು‌. ಹೀಗಾಗಿ ಶ್ರೀಗಳ ಕಾರ್ಯ, ಕಾಳಜಿ ಮತ್ತು ಅವರ ನಡೆ-ನುಡಿ ಈ ಮಣ್ಣಿನಲ್ಲಿ ಅಜರಾಮರ ಆಗಿ ಉಳಿಯಲಿದೆ ಎಂದರು.

ಬಸವಾದಿ ಶರಣರ ಆಶಯದಂತೆ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಇದಕ್ಕಾಗಿ ವಾರ್ಷಿಕ 58 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಇವೆಲ್ಲವೂ ಸಮಸಮಾಜದ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ನಮ್ಮ ಸರ್ಕಾರ ಇಟ್ಟ ದಿಟ್ಟ ಹೆಜ್ಜೆಗಳಾಗಿವೆ ಎಂದು ವಿವರಿಸಿದರು.

ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಸಮೀಜಿ, ತೋಂಟದಾರ್ಯ ಸಂಸ್ಥಾನ ಮಠದ ಡಾ.ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಸಿದ್ಧಗಂಗಾ ಮಠದ ಉತ್ತರಾಧಿಕಾಧಿಕಾರಿಗಳಾದ ಶಿವ ಸಿದ್ಧೇಶ್ವರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆದವು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವರಾದ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ರಾಜಣ್ಣ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರುಗಳಾದ ಜ್ಯೋತಿಗಣೇಶ್, ಸುರೇಶ್ ಗೌಡ, ಶ್ರೀನಿವಾಸ್ ಹಾಗೂ KRIDL ನ ಮಾಜಿ ಅಧ್ಯಕ್ಷ ಎಂ. ರುದ್ರೇಶ್ ಸೇರಿ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Back to top button