ಜೆಡಿಎಸ್ ಶಾಸಕಿ ಪುತ್ರನ ವಿರುದ್ಧ FIR ದಾಖಲು
ಕರ್ತವ್ಯನಿರತ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಪುತ್ರ ಸೇರಿದಂತೆ 8 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್, ಶಾಸಕಿ ಪಿಎ ಇಲಿಯಾಸ್ ಸೇರಿದಂತೆ 8 ಜನರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ತವ್ಯ ನಿರತ ಕಾನ್ಸ್ ಟೇಬಲ್ ಹನುಮಂತರಾಯ ಮೇಲೆ ಹಲ್ಲೆ ನಡೆಸಿದ್ದ ಆರೋಪ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.
ಕಾನ್ಸ್ ಟೇಬಲ್ ಹನುಮಂತರಾಯ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನ್ನು ತಡೆದಿದ್ದರು. ಈ ವೇಳೆ ಶಾಸಕಿ ಪುತ್ರ ಸಂತೋಷ್ ಕರೆ ಮಾಡಿ ಟ್ರ್ಯಾಕ್ಟರ್ ಬಿಟ್ಟು ಕಳಿಸುವಂತೆ ಹೇಳಿದ್ದಾರೆ. ಒತ್ತಡಕ್ಕೆ ಮಣಿಯದ ಕಾನ್ಸ್ಟೇಬಲ್ ಟ್ರ್ಯಾಕ್ಟರ್ ಪೊಲೀಸ್ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಸಂತೋಷ್ ದೇವದುರ್ಗ ಪ್ರವಾಸಿ ಮಂದಿರಕ್ಕೆ ಕಾನ್ಸ್ಟೇಬಲ್ ಹನುಮಂತರಾಯಪ್ಪನನ್ನು ಕರೆಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಗಾಯಾಳು ಪೊಲೀಸ್ ಕಾನ್ಸ್ ಟೇಬಲ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ದೇವದುರ್ಗ ಠಾಣೆಯಲ್ಲಿ ಶಾಸಕಿ ಪುತ್ರ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.