10.66 ಕೋಟಿ ರೂ. ದಂಡ ವಸೂಲಿ | ಹೆಚ್ಚಿನ ಬೆಲೆಗೆ ಮದ್ಯ ಮಾರಾಟ 118 ಮದ್ಯಂಗಡಿಗಳ ಲೈಸೆನ್ಸ್ ರದ್ದು

ಬೆಂಗಳೂರು, ಬೆಳಗಾವಿ, ಕೋಲಾರ, ಕಲಬುರಗಿ, ವಿಜಯಪುರ, ತುಮಕೂರು, ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಅತಿಹೆಚ್ಚು ಕೇಸ್​ಗಳು ದಾಖಲಾಗಿವೆ.

WhatsApp Group Join Now
Telegram Group Join Now

10.66 ಕೋಟಿ ರೂ. ದಂಡ ವಸೂಲಿ | ಹೆಚ್ಚಿನ ಬೆಲೆಗೆ ಮದ್ಯ ಮಾರಾಟ

ನಿಗದಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಕಾರಣಕ್ಕಾಗಿ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 118 ಮದ್ಯದಂಗಡಿಗಳ ಪರವಾನಗಿ (ಲೈಸೆನ್ಸ್) ಅಮಾನತುಗೊಳಿಸಲಾಗಿದೆ. ಜತೆಗೆ, 6,207 ಕೇಸ್ ದಾಖಲಿಸಿ 10.66 ಕೋಟಿ ರೂ.

ದಂಡ ವಸೂಲಿ ಮಾಡಲಾಗಿದೆ. ಬೆಂಗಳೂರು, ಬೆಳಗಾವಿ, ಕೋಲಾರ, ಕಲಬುರಗಿ, ವಿಜಯಪುರ, ತುಮಕೂರು, ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಅತಿಹೆಚ್ಚು ಕೇಸ್​ಗಳು ದಾಖಲಾಗಿವೆ.

ಎಂಆರ್​ಪಿ ಉಲ್ಲಂಘನೆ ಹಿನ್ನೆಲೆಯಲ್ಲಿ 2020-21ರಲ್ಲಿ 1,962 ಕೇಸ್ ದಾಖಲಿಸಿ 25 ಪರವಾನಗಿ, 2021-22ರಲ್ಲಿ 2,231 ಕೇಸ್ ದಾಖಲಿಸಿ 46 ಪರವಾನಗಿ ಹಾಗೂ 2022-23ರಲ್ಲಿ 2,014 ಕೇಸ್ ದಾಖಲಿಸಿ 47 ಲೈಸೆನ್ಸ್ ಅಮಾನತುಪಡಿಸಲಾಗಿದೆ. ರಾಜ್ಯದಲ್ಲಿ ವಿವಿಧ ಬಗೆಯ 12,614 ಮದ್ಯದಂಗಡಿಗಳಿವೆ. ಇತರ ಜಿಲ್ಲೆಗಳಿಗಿಂತ ಬೆಂಗಳೂರಲ್ಲೇ ಅತಿಹೆಚ್ಚು ಶೇ.45 ಮದ್ಯದಂಗಡಿಗಳಿವೆ. 3,988 ವೈನ್​ಶಾಪ್ (ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ (ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7), 68 ಮಿಲಿಟರಿ ಕ್ಯಾಂಟೀನ್ ಮಳಿಗೆ (ಸಿಎಲ್8), 3,634 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್​ಐಎಲ್ (ಸಿಎಲ್11ಸಿ) ಮತ್ತು 745 ಆರ್​ವಿಬಿ ಸೇರಿವೆ. ವೈನ್​ಶಾಪ್, ಎಂಎಸ್​ಐಎಲ್ ಮದ್ಯದಂಗಡಿಗಳಲ್ಲಿ ನಿಗದಿತ ದರದಲ್ಲೇ ಗ್ರಾಹಕರಿಗೆ ಮದ್ಯ ಮಾರಾಟ ಮಾಡಬೇಕು. ಆದರೆ, ಇತರ ಶುಲ್ಕ ವಿಧಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಅಧಿಕಾರಿಗಳು, ದಾಳಿ ನಡೆಸಿ ಕೇಸ್ ದಾಖಲಿಸಿ ಪರವಾನಗಿ ಅಮಾನತು ಮಾಡಿದ್ದರು. ಬಳಿಕ, ಮಾಲೀಕರಿಂದ ಸೂಕ್ತ ದಂಡ ವಸೂಲಿ ಮಾಡಿ ಎಲ್ಲ ಕೇಸ್​ಗಳನ್ನು ಇತ್ಯರ್ಥಪಡಿಸಲಾಗಿದೆ.

ವೈನ್​ಶಾಪ್, ಎಂಎಸ್​ಐಎಲ್ ಮದ್ಯದಂಗಡಿಗಳಲ್ಲಿ ಗ್ರಾಹಕರು ಪಾರ್ಸೆಲ್ ಮೂಲಕ ಮದ್ಯ ಪಡೆಯಬೇಕು. ಯಾವುದೇ ಕಾರಣಕ್ಕೂ ಕುಳಿತು ಮದ್ಯ ಸೇವಿಸುವಂತಿಲ್ಲ. ಹೀಗಾಗಿ, ಎಂಆರ್​ಪಿ ದರದಲ್ಲೇ ಮದ್ಯ ಮಾರಾಟ ಮಾಡಬೇಕು. ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದರೆ ಗ್ರಾಹಕರು, ಗ್ರಾಹಕರ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಬಹುದು. ಒಂದು ವೇಳೆ ದೂರು ದಾಖಲಿಸಿದರೆ ಸಂಬಂಧಪಟ್ಟ ನ್ಯಾಯಾಲಯ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತದೆ. ಬಾರ್ ಆಂಡ್ ರೆಸ್ಟೋರೆಂಟ್, ಹೋಟೆಲ್ ಮತ್ತು ವಸತಿ ಗೃಹ ಮದ್ಯದಂಗಡಿಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ಇರುವುದರಿಂದ ಸೇವಾ ಶುಲ್ಕ ಸೇರಿ ಇತರ ವೆಚ್ಚದ ಹೆಸರಲ್ಲಿ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮದ್ಯ ಮಾರಾಟ ಮಾಡಲಾಗುತ್ತದೆ.

ಮದ್ಯಪಾನಿಗಳ ಸಂಖ್ಯೆ ಹೆಚ್ಚಳ: ವರ್ಷದಿಂದ ವರ್ಷಕ್ಕೆ ಮದ್ಯ ಆದಾಯ ರಾಜಸ್ವ ಸಂಗ್ರಹ ಗುರಿ ಹೆಚ್ಚಳವಾಗುತ್ತಿದೆ. ಇದರ ನಡುವೆ ಮದ್ಯ ಸೇವಿಸುತ್ತಿರುವವರ ಸಂಖ್ಯೆಯೂ ಏರುಗತಿಯಲ್ಲಿದೆ. 21 ವರ್ಷಗಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿರ್ಬಂಧ ಇದ್ದರೂ ಮದ್ಯದಂಗಡಿಗಳಲ್ಲಿ ಹದಿಹರೆಯವರು ಮದ್ಯ ಚಟ ಬೆಳೆಸಿಕೊಂಡಿದ್ದಾರೆ. ಬಿಯರ್ ಕುಡಿಯವರಗಿಂತ ವಿಸ್ಕಿ ಕುಡಿಯವರ ಸಂಖ್ಯೆಯೂ ಹೆಚ್ಚಳಗೊಂಡಿದೆ. ಬಿಯರ್ ದರ ಹೆಚ್ಚು ಇರುವ ಹಿನ್ನೆಲೆಯಲ್ಲಿ ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ವಿಸ್ಕಿ ಕುಡಿಯುತ್ತಿದ್ದಾರೆ. ಮದ್ಯ ಮಾರಾಟದಲ್ಲಿ ಬಿಯರ್ಕ್ಕಿಂತ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಮುಂದಿದೆ.

32 ಮದ್ಯ ತಯಾರಿಕೆಗೆ ಅನುಮತಿ

ಕರ್ನಾಟಕ ಅಬಕಾರಿ ಡಿಸ್ಟಿಲರಿ ಮತ್ತು ವೇರ್​ಹೌಸ್, ಬಾಟ್ಲಿಂಗ್ ಆಫ್ ಲಿಕ್ಕರ್ ನಿಯಮದಂತೆ ಇಲಾಖೆಯಿಂದ ಪರವಾನಗಿ ಪಡೆದು ಮದ್ಯ ತಯಾರಿಕಾ ಘಟಕ ಪ್ರಾರಂಭಿಸಲು ಅವಕಾಶ ಇದೆ. ರಾಜ್ಯದಲ್ಲಿ ಒಟ್ಟು 32 ಮದ್ಯ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 1992ರಿಂದ ಹೊಸದಾಗಿ ‘ಸಿಎಲ್ 2’, ‘ಸಿಎಲ್ 9’ ಮದ್ಯದಂಗಡಿ ಪರವಾನಗಿ ನೀಡಲು ಸರ್ಕಾರ ನಿರ್ಬಂಧಿಸಿದೆ. ಅಂದಿನಿಂದ ಹೊಸ ‘ಸಿಎಲ್2’, ‘ಸಿಎಲ್9’ ಪರವಾನಗಿ ನೀಡಲಾಗುತ್ತಿಲ್ಲ. ‘ಸಿಎಲ್ 7’, ‘ಸಿಎಲ್ 4’, ‘ಸಿಎಲ್6ಎ’ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲಾಗುತ್ತಿದೆ. ರಾಜ್ಯಾದ್ಯಂತ ಇದುವರೆಗೆ ‘ಸಿಎಲ್7’ ಮದ್ಯದಂಗಡಿ ಆರಂಭಿಸಲು ಕೋರಿ ಇಲಾಖೆಗೆ 250 ಅರ್ಜಿಗಳು ಸಲ್ಲಿಕೆಯಾಗಿವೆ.

WhatsApp Group Join Now
Telegram Group Join Now
Back to top button