ಕೋಳಿ ಮಾಂಸ ದುಬಾರಿ: ಹಿಂದಿನ ವಾರ ಏರಿಕೆ ಕಂಡಿದ್ದ ತರಕಾರಿ ಬೆಲೆ ಈ ವಾರ ಅಲ್ಪ ಪ್ರಮಾಣದಲ್ಲಿ ಕಡಿಮೆ
ಹಿಂದಿನ ವಾರ ಏರಿಕೆ ಕಂಡಿದ್ದ ತರಕಾರಿ ಬೆಲೆ ಈ ವಾರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದರೆ, ಬೀನ್ಸ್ ಮತ್ತಷ್ಟು ದುಬಾರಿಯಾಗಿದೆ. ಸೊಪ್ಪಿನ ದರವೂ ಏರಿಕೆಯತ್ತ ಸಾಗಿದೆ. ಕೋಳಿ ಮಾಂಸದ ಧಾರಣೆ ಆಕಾಶದತ್ತ ಮುಖ ಮಾಡಿದೆ.
ಬೀನ್ಸ್ ಗಗನಮುಖಿ: ಕಳೆದ ಕೆಲವು ವಾರಗಳಿಂದ ಏರಿಕೆತ್ತ ಮುಖ ಮಾಡಿರುವ ಬೀನ್ಸ್ ಮತ್ತಷ್ಟು ದುಬಾರಿಯಾಗಿದೆ.
ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹60-70ಕ್ಕೆ ಜಿಗಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹100 ವರೆಗೂ ಮಾರಾಟವಾಗುತ್ತಿದೆ. ಬಿರು ಬೇಸಿಗೆಯಲ್ಲಿ ಬೀನ್ಸ್ ಗಿಡ ಒಣಗುತ್ತಿದ್ದು, ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಕಷ್ಟಕರವಾಗಿದೆ. ಎಷ್ಟೇ ನೀರು ಕೊಟ್ಟು, ತಂಪಾಗಿಟ್ಟರೂ ಗಿಡ ಬಾಡುತ್ತಿದ್ದು, ಇಳುವರಿ ಕುಸಿತವಾಗಿದೆ. ಹಾಗಾಗಿ ಆವಕ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿದೆ.
ಹಸಿರು ಮೆಣಸಿನ ಕಾಯಿ ಸಹ ದುಬಾರಿಯಾಗಿದ್ದರೂ ಈ ವಾರ ಕೆ.ಜಿಗೆ ₹10 ಕಡಿಮೆಯಾಗಿ, ₹60-70ಕ್ಕೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ ಧಾರಣೆ ಮತ್ತೆ ಇಳಿಕೆ ದಾಖಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಬಳಸುವ ಸೌತೆಕಾಯಿ, ನಿಂಬೆ ಹಣ್ಣು ಬೆಲೆಯೂ ಏರಿಕೆಯತ್ತಲೇ ಸಾಗಿದೆ.
ಈವರೆಗೂ ಏರಿಕೆಯನ್ನೇ ಕಾಣದಿದ್ದ ಟೊಮೆಟೊ ದರ ಅಲ್ಪ ಚೇತರಿಕೆ ಕಂಡಿದೆ. ಎಲೆಕೋಸು, ಹಾಗಲಕಾಯಿ, ನುಗ್ಗೇಕಾಯಿ ಬೆಲೆ ಅಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಕಳೆದ ವಾರ ದುಬಾರಿಯಾಗಿದ್ದ ಕ್ಯಾರೇಟ್, ಬೀಟ್ರೂಟ್, ಗೆಡ್ಡೆಕೋಸು, ಬೆಂಡೆಕಾಯಿ, ತೊಂಡೆಕಾಯಿ ಬೆಲೆ ಇಳಿಕೆ ಕಂಡಿದೆ. ಎರಡು ವಾರದಿಂದ ಶುಂಠಿ ದರ ಸಹ ಕಡಿಮೆಯಾಗುತ್ತಿದೆ.
ಸೊಪ್ಪು ಏರಿಕೆ: ಏರಿಳಿತ ಕಂಡಿದ್ದ ಸೊಪ್ಪು ಧಾರಣೆ ಹೆಚ್ಚಳವಾಗಿದ್ದು, ಸಬ್ಬಕ್ಕಿ ಸೊಪ್ಪು ಒಮ್ಮೆಲೆ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹40-50, ಸಬ್ಬಕ್ಕಿ ಕೆ.ಜಿ ₹50-60, ಮೆಂತ್ಯ ಸೊಪ್ಪು ಕೆ.ಜಿ ₹30-40, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಹಣ್ಣು: ಏಲಕ್ಕಿ ಬಾಳೆ ಹಣ್ಣು ದರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಜೂಸ್ಗೆ ಬಳಸುವ ಹಣ್ಣುಗಳು ದುಬಾರಿಯಾಗಿವೆ. ಕರಬೂಜ, ದ್ರಾಕ್ಷಿ ಮತ್ತೆ ಏರಿಕೆಯಾಗಿವೆ.
ಅಡುಗೆ ಎಣ್ಣೆ: ಅಡುಗೆ ಎಣ್ಣೆ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹108-110, ಪಾಮಾಯಿಲ್ ಕೆ.ಜಿ ₹92, ಕಡಲೆಕಾಯಿ ಎಣ್ಣೆ ಕೆ.ಜಿ ₹150-155ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಅಕ್ಕಿ ಇಳಿಕೆ: ಮಾರುಕಟ್ಟೆಗೆ ಬರುವ ಅಕ್ಕಿ ಪ್ರಮಾಣ ಹೆಚ್ಚುತ್ತಿದ್ದು, ಧಾರಣೆ ಇಳಿಕೆಯತ್ತ ಸಾಗಿದೆ. ಕಳೆದ ವಾರ ಸಹ ಕೆ.ಜಿಗೆ ₹5ರಷ್ಟು ಕಡಿಮೆಯಾಗಿದ್ದು, ಈ ವಾರವೂ ಅದೇ ದಾರಿಯಲ್ಲಿ ಸಾಗಿದೆ. ಬೇಳೆ, ಧಾನ್ಯಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.
ಮಸಾಲೆ ಪದಾರ್ಥ: ಹಿಂದಿನ ವಾರ ಮಸಾಲೆ ಪದಾರ್ಥಗಳು, ಮೆಣಸಿನಕಾಯಿ ದರ ಇಳಿಕೆಯಾಗಿದ್ದರೆ, ಈ ವಾರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ.
ಧನ್ಯ ಕೆ.ಜಿ ₹100-150, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240-260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹200-210, ಹುಣಸೆಹಣ್ಣು ₹120-140, ಕಾಳುಮೆಣಸು ಕೆ.ಜಿ ₹620-630, ಜೀರಿಗೆ ಕೆ.ಜಿ ₹320-340, ಸಾಸಿವೆ ಕೆ.ಜಿ ₹85-90, ಮೆಂತ್ಯ ಕೆ.ಜಿ ₹90-95, ಚಕ್ಕೆ ಕೆ.ಜಿ ₹250-260, ಲವಂಗ ಕೆ.ಜಿ ₹950-1,050, ಗುಣಮಟ್ಟದ ಗಸಗಸೆ ಕೆ.ಜಿ ₹1,200-1,300, ಬಾದಾಮಿ ಕೆ.ಜಿ ₹620-650, ಗೋಡಂಬಿ ಕೆ.ಜಿ ₹570-680, ಒಣದ್ರಾಕ್ಷಿ ಕೆ.ಜಿ ₹180-200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಮಾಂಸ ದುಬಾರಿ: ಕೋಳಿ ಮಾಂಸದ ಬೆಲೆ ವಾರದಿಂದ ವಾರಕ್ಕೆ ಏರಿಕೆಯಾಗುತ್ತಲೇ ಸಾಗಿದ್ದು, ಈ ವಾರ ಮತ್ತಷ್ಟು ಗಗನ ಮುಖಿಯಾಗಿದೆ. ಒಮ್ಮೆಲೆ ಕೆ.ಜಿಗೆ ₹20ರಿಂದ ₹40ರ ವರೆಗೂ ಏರಿಕೆಯಾಗಿದೆ. ಬಿಸಿಲ ಝಳಕ್ಕೆ ಕೋಳಿಗಳು ಸಾಯುವುದು ಹೆಚ್ಚುತ್ತಿದ್ದು, ಉತ್ಪಾದನೆ ಕಡಿಮೆಯಾಗಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದೆ.
ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹260, ಸ್ಕಿನ್ಲೆಸ್ ಕೆ.ಜಿ ₹280, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಹೆಚ್ಚಳವಾಗಿದೆ.