ಸಾಸ್‌ನಲ್ಲೂ ಈಗ ನಾನಾ ವೆರೈಟಿಯ ಸಾಸ್‌ಗಳು ಇದೆ. ಸಾಸ್ ಹಾಕಿ ತಿನ್ನಲು ರುಚಿ ಆದರೆ ದೇಹದ ಮೇಲೆ ಇದು ಬೀರುವ ಪ್ರಭಾವ ಗೊತ್ತೇ?
ಕೆಲವರು ಚಪಾತಿಯಿಂದ ಹಿಡಿದು ಫ್ರೈಡ್‌ರೈಸ್, ಪಿಜ್ಜಾ ಮೇಲೆಲ್ಲಾ ಟೊಮ್ಯಾಟೋ ಸಾಸ್ ಸುರಿದುಕೊಂಡು ತಿಂದುಬಿಡುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಟೊಮ್ಯಾಟೋ ಸಾಸ್ ಒಳ್ಳೆಯದಲ್ಲ ಎಂದು ಹೇಳುವುದನ್ನು ಕೇಳಿಸಿಕೊಂಡರೂ, ಸಾಸ್ ಇಲ್ಲದೇ ಫಾಸ್ಟ್‌ಫುಡ್‌ಗಳು ಯಾವುದೂ ಹೊಟ್ಟೆ ಸೇರಲ್ಲ.
ಸಾಸ್‌ನಲ್ಲೂ ಈಗ ನಾನಾ ವೆರೈಟಿಯ ಸಾಸ್‌ಗಳು ಇದೆ.
ಹಾಟ್ ಸಾಸ್, ಸ್ವೀಟ್ ಸಾಸ್, ಟ್ಯಾಂಗಿ ಹೀಗೆ ಆಹಾರದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ ಎನ್ನುವ ಕಾರಣಕ್ಕಾಗಿ ಇವೆಲ್ಲಾ ನಮ್ಮ ತಟ್ಟೆಯಲ್ಲೊಂದು ಜಾಗಮಾಡಿಕೊಂಡಿದೆ. ಕೆಲವರು ಹಾಟ್ ಸಾಸ್ ಒಳ್ಳೆಯದೇ ಎಂದರೂ ಕೆಲವರು ಆರೋಗ್ಯಕ್ಕೆ ಒಳ್ಳೆಯದಲ್ಲವೆನ್ನುತ್ತಾರೆ. ಹಾಗಾದರೆ ಹಾಟ್ ಸಾಸ್ ತಿನ್ನಲೇಬಾರದಾ..? ತಿಂದರೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.
ಹಾಟ್ ಸಾಸ್ ಸ್ವೀಟ್ ಸಾಸ್‌ಗಿಂತ ಒಳ್ಳೆಯದು..
ಸಕ್ಕರೆ ಬೆರೆಸಿದ ಸ್ವೀಟ್‌ಸಾಸ್‌ಗಿಂತ, ಮಸಾಲೆ ಬೆರೆಸಿದ ಹಾಟ್ ಸಾಸ್ ಉತ್ತಮ. ಇದರಿಂದ ಕೆಲವೊಂದು ಆರೋಗ್ಯ ಪ್ರಯೋಜನಗಳೂ ಇದೆ. ಆದರೆ ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆ ಬರೋದಂತು ಖಂಡಿತಾ.
ಮೆಣಸಿನ ಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೆಸಿನ್ ಎನ್ನುವ ರಾಸಾಯನಿಕ ಖಾರದ ಅನುಭವ ನೀಡುತ್ತದೆ. ಹಾಗಾಗಿ ಮೆಣಸಿನಿಂದ ತಯಾರಿಸಿದ ಹಾಟ್ ಸಾಸ್ ತಿಂದಾಗ ನಾಲಗೆಯ ಗ್ರಂಥಿಗಳಿಗೆ ಖಾರ ತಗಲುತ್ತದೆ, ಬಾಯಿ ಉರಿದಂತೆ ಅನುಭವವಾದರೂ ಇದರಿಂದ ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ.
ಆರೋಗ್ಯ ಪ್ರಯೋಜನಗಳು
ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಹೆಚ್ಚಿನ ಮಟ್ಟದ ಆಂಟಿ ಆಕ್ಸಿಡೆಂಟ್ಸ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣವನ್ನು ಹೊಂದಿರುತ್ತದೆ. ಆದ್ದರಿಂದ ಹಾಟ್‌ಸಾಸ್‌ನ ನಿಯಮಿತ ಸೇವನೆ ರಕ್ತದೊತ್ತಡ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಂಧಿವಾತವನ್ನು ಗುಣಪಡಿಸಲು, ಮೈಗ್ರೈನ್ ಮತ್ತು ಕೀಲುನೋವಿನ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೇ ಇದು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲೂ ಸಹಾಯ ಮಾಡುತ್ತದೆ.
ಪ್ರಯೋಜನಕಾರಿ ವಿಟಮಿನ್‌ಗಳು
ಮೆಣಸಿನಕಾಯಿ ಖನಿಜಗಳ ಉತ್ತಮ ಮೂಲವೆಂದು ಸಾಬೀತಾಗಿದೆ ಮತ್ತು ವಿಟಮಿನ್ ಎ, ಸಿ, ಬಿ 6, ಕೆ, ಫೋಲೇಟ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಜೀವಸತ್ವಗಳು ಇದರಲ್ಲಿ ಹೇರಳವಾಗಿರುತ್ತದೆ. ವಿಟಮಿನ್ ಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಶೀತಗಳು, ವೈರಲ್ ಜ್ವರ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ತಡೆಯುತ್ತದೆ.
ತೂಕವನ್ನೂ ಇಳಿಸುತ್ತೆ..!
ನಿಮ್ಮ ಆಹಾರಕ್ಕೆ ಯಾವುದೇ ಅನಗತ್ಯ ಕ್ಯಾಲೋರಿಗಳು, ಪ್ರೋಟೀನ್ಗಳು, ಕೊಬ್ಬುಗಳು ಅಥವಾ ಕಾರ್ಬೋಹೈಡ್ರೇಟ್ಗಳನ್ನು ಸೇರಿಸದ ಕೆಲವೇ ಮಸಾಲೆಗಳಲ್ಲಿ ಪದಾರ್ಥಗಳಲ್ಲಿ ಹಾಟ್ ಸಾಸ್ ಒಂದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಕ್ಯಾಲೊರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸಲೀಸಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಇತರ ಪ್ರಯೋಜನಗಳು
* ಅಲರ್ಜಿಗಳು ಮತ್ತು ಇತರ ಅಲರ್ಜಿ ಲಕ್ಷಣಗಳನ್ನು ತಡೆಯುತ್ತದೆ.
* ಗಾಯಗಳನ್ನು ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ
*ಕೊಲಾಜೆನ್ ಅನ್ನು ಉತ್ಪಾದಿಸುತ್ತದೆ ಮತ್ತು ಮುಪ್ಪಾಗುವುದನ್ನು ನಿಧಾನಗೊಳಿಸುತ್ತದೆ.
* ಬಾಯಿ ವಾಸನೆಯನ್ನು ಕಡಿಮೆ ಮಾಡುತ್ತದೆ.
* ಎಂಡಾರ್ಫಿನ್ ಮತ್ತು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ
ಹಾಟ್ ಸಾಸ್‌ನ ದುಷ್ಪರಿಣಾಮಗಳು
ಯಾವುದೇ ಆಗಲಿ ಮಿತಿಯಲ್ಲಿ ತಿನ್ನಬೇಕು ಎನ್ನುತ್ತಾರೆ. ಹಾಟ್ ಸಾಸ್ ಕೂಡಾ ಮಿತಿ ಮೀರಿ ತಿಂದರೆ ಅದರಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳೂ ಉಂಟಾಗುತ್ತವೆ. ಅತಿಯಾದ ಹಾಟ್ ಸಾಸ್ ಸೇವನೆಯಿಂದಾಗುವ ದುಷ್ಪರಿಣಾಮಗಳೆಂದರೆ,
ಹಾಟ್ ಸಾಸ್‌ನಲ್ಲಿರುವ ಹೆಚ್ಚಿನ ಪ್ರಮಾಣದ ಸೋಡಿಯಂ ರಕ್ತಹೆಪ್ಪುಟ್ಟುವುದಕ್ಕೆ ಕಾರಣವಾಗಬಹುದು. ಇದರಿಂದಾಗಿ ನೀವು ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಒಳಗಾಗಬಹುದು.
ಗ್ಯಾಸ್ಟ್ರಿಕ್
ಹೆಚ್ಚಿನ ಹಾಟ್ ಸಾಸ್ ಸೇವಿಸುವುದರಿಂದ ಖಾರಕ್ಕೆ ಹೊಟ್ಟೆಯಲ್ಲಿ ಆಮ್ಲವು ಉತ್ಪತ್ತಿಯಾಗುತ್ತದೆ. ಇದು ಗ್ಯಾಸ್ಟ್ರೋಸೋಫೇಜಿಲ್ ರಿಫ್ಲೆಕ್ಸ್ ಉಂಟುಮಾಡುವುದಲ್ಲದೇ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ.
ಯಾವಾಗ ಹಾಟ್ ಸಾಸ್ ತಿನ್ನಬಹುದು..?
ನೀವು ಉಪ್ಪಿನಂಶ ಅತೀ ಕಡಿಮೆ ಇರುವ ಪ್ರೋಟಿನ್‌ಯುಕ್ತ ಆಹಾರ ಮತ್ತು ತಾಜಾ ಆಹಾರಗಳಿಗೆ ಹಾಟ್ ಸಾಸ್ ಬೆರೆಸಿ ತಿನ್ನಬಹುದು. ಆದರೆ ನಿಮ್ಮ ಆಹಾರದಲ್ಲಿ ಸೋಡಿಯಂ ಅಂಶವನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿದ್ದರೆ, ಹಾಟ್ ಸಾಸ್ ತಿನ್ನಬೇಡಿ. ಹೆಚ್ಚಿನ ಸೋಡಿಯಂ ಸೇವನೆ ಅಂದರೆ ಹಾಟ್ ಸಾಸ್ ಆಗಿರಲಿ, ಸೋಯಾ ಸಾಸ್ ಆಗಿರಲಿ ಇದು ಈಗಾಗಲೇ ಹೃದಯದ ಸಮಸ್ಯೆ ಹೊಂದಿರುವ ಜನರ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ.
ಅಧಿಕ ರಕ್ತದೊತ್ತಡ, ಹೃದಯಾಘಾತ, ಮೂತ್ರಪಿಂಡ ಅಥವಾ ಪಿತ್ತಜನಕಾಂಗದ ವೈಫಲ್ಯದಂತಹ ಸೂಕ್ಷ್ಮ ಅಸ್ವಸ್ಥತೆಗಳಿರುವ ರೋಗಿಗಳು ಎಷ್ಟು ಪ್ರಮಾಣದ ಉಪ್ಪು ಸೇವಿಸಬಹುದು ಎನ್ನುವುದನ್ನು ವೈದ್ಯರಲ್ಲಿ ಕೇಳಿ ತಿಳಿದುಕೊಂಡು ಹೆಚ್ಚು ಉಪ್ಪಿನಂಶವಿರುವ ಆಹಾರ ತಿನ್ನಬೇಕಾ ಬೇಡವೇ ಎನ್ನುವುದನ್ನು ಕೇಳಿದರೆ ಉತ್ತಮ. ನೀವು ಗ್ಯಾಸ್ಟ್ರಿಕ್ ಸಮಸ್ಯೆ ಹೊಂದಿದ್ರೆ, ಕಿಬ್ಬೊಟ್ಟೆ ನೋವು, ಅತಿಸಾರದ ಸಮಸ್ಯೆ ಹೊಂದಿದ್ದಲ್ಲಿ ಸ್ವಲ್ಪವೇ ಸ್ವಲ್ಪ ಹಾಟ್ ಸಾಸ್ ಸೇವಿಸಬಹುದು.
ಎಷ್ಟು ಪ್ರಮಾಣದಲ್ಲಿ ಹಾಟ್ ಸಾಸ್ ತಿನ್ನಬಹುದು..?
ಪ್ರತಿಯೊಂದು ಆಹಾರವೂ ಎಲ್ಲರ ದೇಹಕ್ಕೆ ಒಗ್ಗುವುದಿಲ್ಲ. ಇದರಂತೆ ಮೊದಲು ಹಾಟ್‌ಸಾಸ್ ತಿಂದಾದ ಬಳಿಕ ಏನಾದ್ರೂ ಆರೋಗ್ಯ ಸಮಸ್ಯೆ ಕಂಡು ಬಂತಾ ಎನ್ನುವುದನ್ನು ತಿಳಿದುಕೊಳ್ಳಿ. ಯಾವುದೇ ರೀತಿಯಲ್ಲಿ ಪ್ರತಿಕೂಲ ಪರಿಣಾಮ ಬೀರದಿದ್ದರೆ ನೀವು ಸಹಿಸಿಕೊಳ್ಳುವಷ್ಟು ತಿನ್ನಬಹುದು. ಆದರೆ ಹಾಟ್ ಸಾಸ್ ನಿಯಮಿತವಾಗಿ ತಿಂದರಷ್ಟೇ ಒಳ್ಳೆಯದು.
ಎದೆಯುರಿ, ಹೊಟ್ಟೆ ನೋವು, ಅತಿಸಾರ ಅಥವಾ ಅನೋರೆಕ್ಟಲ್ ಅಸ್ವಸ್ಥತೆಯಂತಹ ಪ್ರತಿಕೂಲ ಪರಿಣಾಮಗಳನ್ನು ನೀವು ಗಮನಿಸಿದರೆ, ಹಾಟ್ ಸಾಸ್ ತಿನ್ನಬೇಡಿ.ನೀವು ಅದನ್ನು ಇಷ್ಟಪಟ್ಟರೆ ಮತ್ತು ಯಾವುದೇ ಪ್ರಮುಖ ಅಡ್ಡ ಪರಿಣಾಮಗಳನ್ನು ಹೊಂದಿಲ್ಲದಿದ್ದರೆ, ಅದನ್ನು ಮಿತವಾಗಿ ಆನಂದಿಸಿ. ಯಾವುದೇ ಆಗಲಿ ಮಿತಿಗಿಂತ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಉತ್ತಮವಲ್ಲ.