ಸಮಸ್ತ ನಾಡಿನ ಜನತೆಗೆ ವಿಶ್ವ ಕಾರ್ಮಿಕ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.

ಕಾಯಕವೇ ಕೈಲಾಸ ದುಡಿಮೆಯ ದೇವರು..! ವಿಶ್ವದಲ್ಲಿ ಕಾರ್ಮಿಕ ಸಂಪನ್ಮೂಲ ಅತೀ ದೊಡ್ಡ ಶಕ್ತಿ.

WhatsApp Group Join Now
Telegram Group Join Now

ನಮ್ಮ ಸುಖಕ್ಕಾಗಿ ತಮ್ಮ ಜೀವವನ್ನು ಒತ್ತೆ ಇಟ್ಟು ದುಡಿಯುವ ಅಸಂಖ್ಯಾತ ದುಡಿಮೆಯ ಕೈಗಳಿಗೊಂದು ಗೌರವ ಈ ‘ಮೇ ದಿನದಂದು’.

‘ಮೇ ದಿನ’ – ದುಡಿಯುವ ಜೀವಿಗಳಿಗೊಂದು ಮಿಡಿತ

ಮೇ 1 ಅಂದರೆ ಅದೊಂದು ರಜಾದಿನ! ಕೆಲವರಿಗೆ ರಜಾ ಸಿಕ್ಕಿತು, ಈ ರಜಾ ಭಾಗ್ಯ ನಮಗಿಲ್ಲವಲ್ಲ ಎಂಬ ಅತೃಪ್ತಿ ನಮ್ಮಲ್ಲಿ ಅಡ್ಡಾಡುವುದುಂಟು.

ಅಂದಿನ ಮೇ ದಿನದ ಅಶೋತ್ತರಗಳಿಗೂ ನಮ್ಮೀ ರಜಾವಾದಕ್ಕೂ ಅಜಗಜಾಂತರವಿದೆ. ಅಂದಿನ ಕಾರ್ಮಿಕರಲ್ಲಿ ಇಷ್ಟೇ ನಿಯಮಿತ ಅವಧಿಯ ಕೆಲಸ ಎಂಬುದಾಗಲೀ, ಕಾರ್ಮಿಕ ಕಲ್ಯಾಣದ ಯಾವುದೇ ಭದ್ರತೆಗಳಾಗಲಿ ಇರಲಿಲ್ಲ. ಅಂತಹ ನೆಲೆಯಲ್ಲಿ ಬಂಡವಾಳಷಾಹಿ ಜನರಿಂದ ಶೋಷಿತರಾದ ಜನ ರೊಚ್ಚಿಗೆದ್ದು ತಮಗೆ ಅರ್ಹವಾಗಿ ದೊರಕಬೇಕಿದ್ದ ಕೂಲಿ ಮತ್ತು ಮಾನವೀಯ ಪ್ರತಿಸ್ಪಂದನೆಗಳಿಗಾಗಿ ಬೀದಿಗಿಳಿದ ಸಂದರ್ಭವನ್ನು ನೆನಪಿಸುವಂತ ದಿನವಾಗಿದೆ – ಈ ‘ಮೇ ದಿನ’ ಅಥವಾ ‘ಕಾರ್ಮಿಕರ ದಿನ’. ಅಂದು ಎಂಟು ಗಂಟೆಗಳ ಕೆಲಸ ಮಾತ್ರ ಎಂಬುದು ಕಲ್ಪನೆಗೂ ಸಾಧ್ಯವಿಲ್ಲದ ವಿಷಯವಾಗಿತ್ತು.

ಮನುಷ್ಯ ಮಹಾಯುದ್ಧಗಳಲ್ಲಿ ಪ್ರಾಣಬಿಡುವಂತೆ ಹೋರಾಡುವುದಕ್ಕೂ, ಕಾರ್ಖಾನೆಗಳಲ್ಲಿ ಪ್ರಾಣಿಗಳಂತೆ ಬದುಕುತ್ತೇನೋ ಇಲ್ಲವೋ ಎಂದು ಗೊತ್ತುಗುರಿ ಇಲ್ಲದೆ ದುಡಿಯುವುದಕ್ಕೂ ಯಾವುದೇ ವೆತ್ಯಾಸವಿಲ್ಲದಂತಹ ದಿನಗಳವು. ಇಂತಹ ದಿನಗಳಲ್ಲಿ ಅಧಿಕಾರಶಾಹಿಗಳ ಗಮನ ಸೆಳೆಯುವ ಒಂದು ಚಳುವಳಿ ನಡೆಯಿತು. ಪೊಲೀಸ್ ಗುಂಪಿನ ಮೇಲೆ ಯಾರೋ ಒಂದು ಪುಡಿಬಾಂಬೆಸೆದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪೋಲಿಸ್ ಶಕ್ತಿ ದಮನಕಾರಿ ರೂಪತಾಳಿ ಹಲವಾರು ಪ್ರದರ್ಶಕರನ್ನು ಮಾರಣಾಂತಿಕ ಹೋಮ ನಡೆಸಿದ ‘ಚಿಕಾಗೋ ಹೇ ಮಾರ್ಕೆಟ್ ಮಾರಣ ಹೋಮ’ ಎಂಬ ಘಟನೆ ಚರಿತ್ರೆಯಲ್ಲಿ ರಕ್ತಸಿಕ್ತವಾಗಿ ದಾಖಲಾಗಿಬಿಟ್ಟಿತು. ಈ ಅಳಿಸಲಾರದ ರಕ್ತದ ಕಲೆಯಿಂದ ಬರೆಯಲ್ಪಟ್ಟಿರುವ ಈ ಚರಿತ್ರೆಯ ದಿನವೇ ‘ಮೇ ದಿನ’ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕ ದಿನ’ದ ರೂಪ ತಾಳಿ ನಿಂತಿದೆ.

 

 

ಅದು ಅಂದು ಅಮೇರಿಕದಲ್ಲಿ ಪ್ರಾರಂಭಗೊಂಡರೂ ಅದನ್ನು ರಷ್ಯಾದಂತಹ ಕಮ್ಯುನಿಸ್ಟ್ ದೇಶಗಳು ಅಳವಡಿಸಿಕೊಳ್ಳತೊಡಗಿದ ಮೇಲೆ ಅಮೆರಿಕನ್ನರು ‘ಅಯ್ಯೋ ರಷ್ಯಾದವರು ಮಾಡಿದ್ದನ್ನೇ ನಾವು ಮಾಡುವುದು ಉಂಟೆ’ ಎಂಬ ಪ್ರತಿಷ್ಠೆಯಲ್ಲಿ ಅದನ್ನು ಸೆಪ್ಟೆಂಬರ್ ತಿಂಗಳಿಗೆ ಬದಲಿಸಿಕೊಂಡರು. ಅನೇಕ ದೇಶಗಳಲ್ಲಿ ಈ ದಿನವು ಕಾರ್ಮಿಕ ಸಂಘಟನೆಗಳ ಮೆರವಣಿಗೆಗಳಿಗಾಗಿಯೂ, ಪ್ರದರ್ಶನಗಳಿಗಾಗಿಯೂ ಮತ್ತು ಹೆಚ್ಚಿನ ದೇಶಗಳಲ್ಲಿ ಒಂದು ರಜೆಯಾಗಿಯೂ ಉಳಿದುಕೊಂಡಿದೆ.

ನಮ್ಮ ಏರ್ ಇಂಡಿಯಾ ಪೈಲಟ್ಟುಗಳು ಹೂಡುವ ಮುಷ್ಕರಗಳು, ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ಮಾಡುವ ದಿನದ ಬೆಳಿಗ್ಗೆ ಮುಷ್ಕರ ಪ್ರಾರಂಭಿಸುವ ನಮ್ಮ ಶಾಲಾ ಕಾಲೇಜುಗಳ ಅಧ್ಯಾಪಕರು, ನೀವು ಯಾವುದೇ ಬೋರ್ಡ್ ತಗಲಿಸುವ ಮುಂಚೆಯೇ ಕೆಂಪು ಬಾವುಟ ಇಡುವ ಕೇರಳದ ಯೂನಿಯನ್ನುಗಳು, ರಾಜಕೀಯಕ್ಕೆ ಗೇಟ್ ಪಾಸ್ ಎಂಬಂತೆ ಕಾರ್ಮಿಕ ಸಂಘಟನೆಗಳ ಸ್ಥಾನಗಳನ್ನು ಕಬಳಿಸುವ ಪುಡಾರಿಗಳು, ಉದ್ಯಮಿಗಳಿಂದ ಹಣ ದೋಚುವುದಕ್ಕಾಗಿ ಇದೊಂದು ಮಾಫಿಯಾ ಆಗಿ ಮಾಡಿಕೊಂಡಿರುವ ಡಾನ್ ಗಳು, ಕಲ್ಕತ್ತೆಯಲ್ಲಿ ಟಾಟಾದವರು ಒಂದು ಕಾರ್ಖಾನೆ ಹಾಕ್ತೀನಿ ಅಂದ್ರೆ ತಮ್ಮ ಸಿಡುಕಿನ ಮೂತಿಯನ್ನು ಇನ್ನಷ್ಟು ಊದಿಸಿಕೊಳ್ಳುವ ಮಮತಾಗಳು, ಇನ್ನೊಂದು ದಿನ ರಜೆ ಇದ್ದಿದ್ರೆ ಸ್ವಲ್ಪ ಫೇಸ್ ಬುಕ್ಕಲ್ಲಿ ಹೆಚ್ಚು ಹೊತ್ತು ಇರಬಹುದಿತ್ತು ಎನ್ನುವ ನನ್ನಂತಹವರು ಇಂದಿನ ಕಾರ್ಮಿಕ ಸಂಘಟನೆಯ ಮಾತುಗಳಿಗಿರುವ ಕೆಲವೊಂದು ಅಣಕಗಳು.

ವೈಯಕ್ತಿಕವಾಗಿ ನಾನು ಕಾರ್ಮಿಕ ಸಂಘಟನೆಯಲ್ಲಿದ್ದಾಗಿನ ಅನುಭವದಲ್ಲಿ ಹೇಳಬೇಕೆಂದರೆ ನಮ್ಮಲ್ಲಿ ಬಹಳಷ್ಟು ಕಾರ್ಮಿಕ ನಾಯಕರಿಗೆ ನಾಯಕತ್ವ ಎಂದು ದೊರಕುವ ಚುನಾವಣೆಯ ಜಯವು, ತಮಗೆ ಮತ್ತು ತಮ್ಮ ಚೇಲಾಗಳಿಗೆ ಹಣ ಮಾಡುವ, ಕೆಲಸದಿಂದ ವಿಮುಖವಾಗುವ, ಕೆಟ್ಟ ಚಟಗಳಿಗೆ ಬಲಿಯಾಗುವ, ವಿತಂಡವಾದಕರಾಗುವ, ದರ್ಪಿಷ್ಟರಾಗುವ, ಯಾರನ್ನೂ ಬೇಕಾದರೂ ಹಿಡಿದು ತದುಕುವ, ಮತ್ತು ಗೆದ್ದ ದಿನದಿಂದಲೇ ಮುಂದಿನ ಚುನಾವಣೆಗೆ ಸಿದ್ಧಗೊಳ್ಳುವ ಅಥವಾ ಅದಕ್ಕಾಗಿ ತಲೆಕೆಡಿಸಿಕೊಂಡು ಕೆಟ್ಟ ಕೆಟ್ಟ ಕೆಲಸಗಳಲ್ಲಿ ತೊಡಗುವ ಒಂದು ದುರ್ವೇದಿಕೆಯಾಗಿ ಏರ್ಪಟ್ಟಿದೆ. ಒಳ್ಳೆಯ ಕಾರ್ಮಿಕ ನಾಯಕರಿಲ್ಲವೇ? ಇದ್ದಾರೆ. ಒಳ್ಳೆಯ ರಾಜಕಾರಣಿಗಳು ಮತ್ತು ಒಳ್ಳೆಯ ಪ್ರಜೆಗಳು ಎಂಬ ರತ್ನಗಳು ಎಲ್ಲೆಲ್ಲೋ ಚಿಪ್ಪಿನಲ್ಲಿ ಅಡಗಿ ಕುಳಿತಿರುವ ಹಾಗೆ! ನಾನು ಅಂತಹವರನ್ನೂ ಕಂಡದ್ದಿದೆ.

ಇವೆಲ್ಲವುಗಳ ಆಚೆ ನಾವು ಯೋಚಿಸಬೇಕಾದ ಒಂದು ದೊಡ್ಡ ಸಂಗತಿ ಇದೆ. ಅದೆಂದರೆ ಭಾರತಂದತಹ ದೇಶದಲ್ಲಿ ಹಾಗೂ ವಿಶ್ವದೆಲ್ಲೆಡೆ ತುಂಬಿರುವ ಅಸಂಘಟಿತ ಕಾರ್ಮಿಕರು ಮತ್ತು ನಾಮಕಾವಸ್ತೆ ಸಂಘಟನೆಯಲ್ಲಿದ್ದು ದುರ್ನೀತಿಯ ನಾಯಕತ್ವದಲ್ಲಿ ನಲುಗುತ್ತಿರುವ ದುರ್ಬಲ ಕಾರ್ಮಿಕರು, ಸ್ತ್ರೀ ಮತ್ತು ಬಾಲ ಕಾರ್ಮಿಕರು ಮುಂತಾದವರು. ನಾವು ವಿಹಾರಕ್ಕೆಂದು, ಪಾರ್ಟಿಗೆಂದು ಹೋಗುವ ಹೋಟೆಲ್ಲುಗಳಲ್ಲಿ ಕೆಲಸ ಮಾಡುವ ಹುಡುಗರನ್ನು ನೋಡಿದರೆ ಸಾಕು ಇದರ ಸೂಕ್ಷ್ಮ ಎಳೆ ಕಾಣಸಿಗುತ್ತದೆ. ಬಿಸಿಲು ಚಳಿ ಬಿರುಗಾಳಿ ಏನೇ ಬಂದರೂ ಪೊಲೀಸರಿಗೆ ಲಂಚ ಕೊಟ್ಟು ಫುಟ್ ಪಾತನ್ನು ಅನಧಿಕೃತವಾಗಿ ಆಕ್ರಮಿಸಿ ಪುಡಿಗಾಸಿಗಾಗಿ ತರಕಾರಿ ಮಾರುವ ಜನ, ತಿಂಡಿ ತಿನಿಸುಗಳನ್ನು ಮಾರುವ ಜನ ಮುಂತಾದವರನ್ನು ಕಂಡರೆ ಸಾಕು ಅದರ ವ್ಯಾಪ್ತಿ ಎಷ್ಟು ದೊಡ್ಡದು ಎಂಬುದು ತಿಳಿಯುತ್ತದೆ. ನಾವು ತರಕಾರಿಗೆ ಅದೆಷ್ಟೊಂದು ಬೆಲೆ ಎಂದು ನಿಟ್ಟುಸಿರುಬಿಡುತ್ತೇವೆ. ಆದರೆ ಅದನ್ನು ಬೆಳೆದ ಬೆಳೆಗಾರನಿಗೆ ನಾವು ಕೊಡುವ ಒಂದಂಶದ ಬೆಲೆಯೂ ತಲುಪದೆ ಅದನ್ನು ಯಾವುದೋ ದಲ್ಲಾಳಿ ಹಾಗೂ ಆತನನ್ನು ಸಾಕುವ ವ್ಯವಸ್ಥೆಗಳು ನುಂಗಿ ನೀರುಕುಡಿಯುತ್ತಿರುತ್ತವೆ. ಪತ್ರಕರ್ತ ರಾಮ್ ಅವರು ಎಂಭತ್ತರ ದಶಕದಲ್ಲಿ ಬರೆದ ‘India: The People Betrayed’ ಎಂಬ ಪುಸ್ತಕದಲ್ಲಿ ಪ್ಲಾಸ್ಟಿಕ್ ಉದ್ಯಮಗಳಲ್ಲಿ 400 ಡಿಗ್ರಿ ಶಾಖ ಉಪಯೋಗಿಸುವ ಗಾಜು ಮತ್ತು ಪ್ಲಾಸ್ಟಿಕ್ ಉತ್ಪಾದನಾ ಘಟಕಗಳಲ್ಲಿ ಎಷ್ಟೆಷ್ಟು ಸಣ್ಣ ಮಕ್ಕಳು ಕಾರ್ಯ ನಿರ್ವಹಿಸುತ್ತಾರೆ ಎಂಬ ಮಾತಿದೆ. ದುಃಸ್ಥಿತಿಯ ಬದುಕು, ಸಂಚಾರ ವ್ಯವಸ್ಥೆಗಳ ಜೊತೆ ಅದೆಷ್ಟೆಷ್ಟೋ ಹೆಣ್ಣು ಮಕ್ಕಳು ಬಟ್ಟೆ ಉದ್ಯಮ, ಊದುಬತ್ತಿ ಉದ್ಯಮ, ಕೆಮಿಕಲ್ ಉದ್ಯಮಗಳಲ್ಲಿ ಅತೀ ಕಡಿಮೆ ಸಂಭಳಕ್ಕೆ ಜೀವ ತೇಯುವುದು ನಡೆದೇ ಇದೆ. ಎಷ್ಟೆಷ್ಟೋ ಊರುಗಳಲ್ಲಿ ಸೈಕಲ್ ರಿಕ್ಷಾ ಅಂತಹ ಒಬ್ಬ ಮನುಷ್ಯ ಹಲವರನ್ನು ಹೊರುವ ಬಾರ ನಡೆದೇ ಇದೆ.

ತಮ್ಮ ಮನೆ, ಮಡದಿ, ಮಕ್ಕಳನ್ನು ಎಂದು ನೋಡುತ್ತೇವೋ, ಅಥವಾ ನೋಡದೆಯೇ ಯಾವುದೋ ದಿಕ್ಕಿನಿಂದ ಬರುವ ಗುಂಡಿಗೋ, ಹಿಮಪಾತಕ್ಕೋ, ಸುಡುವ ಬಿಸಿಲಿಗೋ ತಮ್ಮ ಜೀವವನ್ನೇ ತೆತ್ತುಬಿಡುತ್ತೇವೇನೋ ಎಂಬ ಅನಿರ್ದಿಷ್ಟತೆಯಲ್ಲಿ ಹಿಮ ಪರ್ವತಗಳಲ್ಲಿ, ಗುಡ್ಡ ಗಾಡು ಮರುಭೂಮಿಗಳಲ್ಲಿ ಜೀವ ತೇಯುವ ಯೋಧರುಗಳನ್ನು ನಮ್ಮ ಮುಂದುವರೆದ ಸಮಾಜ ಇನ್ನೂ ಸೃಷ್ಟಿಸುತ್ತಲೇ ಇದೆ.

ನೀವು ಅರವಿಂದ್ ಅಡಿಗ ಅವರ ‘ಬಿಳಿ ಹುಲಿ – ದಿ ವೈಟ್ ಟೈಗರ್’ ಓದಿದಲ್ಲಿ ಅಲ್ಲಿ ಸಮಸ್ತ ಕಾರ್ಮಿಕ ಭಾರತದಲ್ಲಿನ ವಿವಿಧ ಶೋಷಣೆಗಳ ಸಮಗ್ರ ಚಿತ್ರಣವೇ ಇದೆ. ಇಂದಿನ ಕಾಲ್ ಸೆಂಟರುಗಳು ನಡೆಸುವ ಕಾರುಬಾರುಗಳಲ್ಲಿ ಮಾನಸಿಕವಾಗಿ, ದೈಹಿಕವಾಗಿ ನೊಂದ ಜೀವಗಳು ಎಷ್ಟೆಷ್ಟೋ. ಸಾಫ್ಟ್ ವೇರ್ ಅಂತಹ ಬಿಳಿ ಆನೆಯಂತಹ ಉದ್ಯೋಗಗಳಲ್ಲಿ ಕೂಡಾ ಅಲ್ಲಿರುವ ಅಪೇಕ್ಷೆಗಳನ್ನು ನಿರ್ವಹಿಸಲು ಕಷ್ಟಪಟ್ಟು ಆತ್ಮಹತ್ಯೆಗೊಳಗಾಗುತ್ತಿರುವವರು ಅದೆಷ್ಟೋ ಮಂದಿ. ನೀವು ಮಧ್ಯಪ್ರಾಚ್ಯ ದೇಶಗಳ ಮರುಭೂಮಿಗಳಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ಥಾನ ಮುಂತಾದೆಡೆಗಳಿಂದ ಬಂದು ಬಿಸಿಲ ಜಳದಲ್ಲಿ, ವರ್ಷಗಟ್ಟಲೆ ಸಂಸಾರ ಸುಖ, ಪ್ರೀತಿ ವಿಶ್ವಾಸಗಳಿಂದ ವಂಚಿತರಾಗಿ ಕೋಳಿ ಗೂಡುಗಳಂತಹ ಬೆಡ್ ಸ್ಪೇಸುಗಳಲ್ಲಿ ಬದುಕುವ ಜನರನ್ನು ನೋಡಬೇಕು. ಚರಿತ್ರೆಯಲ್ಲಿ ಮಾತ್ರ ಈ ದೇಶಗಳು ಸುವ್ಯವಸ್ಥಿತ ಮುಂದುವರೆದ ನಾಗರೀಕ ದೇಶಗಳು!

ಹಾಗೆಂದ ಮಾತ್ರಕ್ಕೆ ಉದ್ಯಮಗಳನ್ನು ನಡೆಸುತ್ತಿರುವವರೆಲ್ಲಾ ಶೋಷಕ ಮನೋಭಾವವನ್ನೇ ಹೊಂದಿರುತ್ತಾರೆ ಎಂದು ನಿಷ್ಕರ್ಷಿಸುವುದು ಕೂಡಾ ಅಷ್ಟೇ ಅಪಾಯಕಾರಿ. ಇಲ್ಲದಿದ್ದರೆ ಸರ್ಕಾರವೇ ಉದ್ಯೋಗ ಸೃಷ್ಟಿಸಿ ನಮ್ಮನ್ನು ನೋಡಿಕೊಳ್ಳಲಿ ಎಂಬ ನಿಸ್ತೇಜ ಯುಗಕ್ಕೆ ಮತ್ತೆ ಮರಳಬೇಕಾದೀತು. ಬಂಡವಾಳಷಾಹಿಗಳ ಆಸೆಬರುಕುತನಕ್ಕೆ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿರುವುದು ಎಷ್ಟು ಸತ್ಯವೋ, ಭ್ರಷ್ಟ ಕಾರ್ಮಿಕರಿಂದ ಬದುಕು ಆಸ್ತಿ ಪಾಸ್ತಿಗಳಿರಲಿ ತಮ್ಮ ಬದುಕನ್ನೇ ದುಸ್ಥಿತಿಗಿಳಿಸಿಕೊಂಡಿರುವ ಬಹಳಷ್ಟು ನಿಸ್ಸಾಹಯಕ ಉದ್ದಿಮೆ ಪ್ರಯೋಗಶೀಲರನ್ನು ಕೂಡಾ ಈ ಲೋಕ ಸಾಕಷ್ಟು ಕಂಡಿದೆ. ದಿನಂಪ್ರತಿ ನಾವು ಹೋಟೆಲ್ಲಿಗೆ ಹೋದಾಗ, ವಾಹನಗಳಲ್ಲಿ ಚಲಿಸುವಾಗ, ಆಟೋಟ್ಯಾಕ್ಸಿಗಳನ್ನು ಹಿಡಿಯುವಾಗ, ಸರ್ಕಾರಿ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ ನಮ್ಮ ಕೆಲಸ ಮಾಡಿಕೊಳ್ಳಲು ಹೋದಾಗ ಕಾರ್ಮಿಕರಾಗಿ ಅಲ್ಲಿ ದುಡಿಯುವ ಜನ ನಮಗೆ ನೀಡುವ ಮಾನಸಿಕ ಹಿಂಸೆ ಖಂಡಿತವಾಗಿ ಸುಸಂಸ್ಕೃತ ಕಾರ್ಮಿಕತ್ವದ ಪ್ರಾತಿನಿಧಿಕತ್ವವಲ್ಲ.

 

 

ಮನುಷ್ಯನಿಗೆ ತನ್ನ ಮನೆಯಲ್ಲಿ, ತನ್ನ ಕೆಲಸದ ಪರಿಸರದಲ್ಲಿ, ಜೊತೆಗೆ ಮನೆ ಮತ್ತು ಕೆಲಸದ ಮಧ್ಯದ ರಸ್ತೆ ಸಂಪರ್ಕೋಪಾದಿಗಳ ಸಮಾಜವೆಂಬ ಪ್ರಪಂಚದಲ್ಲಿ, ಸಹ್ಯವಾದ, ಪ್ರೀತಿ ವಿಶ್ವಾಸ, ಗೌರವ, ನೆಮ್ಮದಿಗಳನ್ನು ಕೊಡುವ; ಅಯ್ಯೋ ನಾಳೆ ಹೇಗಪ್ಪಾ ಎಂಬ ಭಯ ಸೃಷ್ಟಿಸದ; ಆ ಭಯದ ಹಿನ್ನಲೆಯಲ್ಲಿ ಸಿಕ್ಕಷ್ಟನ್ನು ಪೇರಿಸಿಕೊಂಡುಬಿಡುವ ಹಾಹಾಕಾರವಿಲ್ಲದ; ಮತ್ತೊಬ್ಬನೂ ನನ್ನಂತೆಯೇ ಎಂಬ ಸುಸಂಸ್ಕೃತ ಬದುಕು, ನಮ್ಮ ಮತ್ತು ಈ ಪ್ರಪಂಚದ ಕಾಯಕದ ಗುರಿಯಾಗಬೇಕು.

ಇದನ್ನು ಮೇ ದಿನದ ‘May be’ ಆಶಯವೆನ್ನುತ್ತೀರ? ಒಂದು ರೀತಿಯಲ್ಲಿ ನಾವುಗಳು ಯಾವಾಗಲೂ ಸುಮ್ಮನಿರದೆ ಗುಂಯ್ ಗುಡುತ್ತಾ ದುಂಬಿಗಳಂತೆ ಅತ್ತಿದಿಂತ್ತ ಹಾರುತ್ತಾ ಎಲ್ಲೋ ಕಣಜವೆಂಬ ನೆಲೆಯನ್ನು ಕಟ್ಟಲು ನಿರಂತರ ಪ್ರಯತ್ನಿಸುತ್ತಿರುತ್ತೇವೆ, ಅದು ಅಶಾಶ್ವತ ಎಂದು ಗೊತ್ತಿದ್ದರೂ ಕೂಡಾ. ಹಾಗಾಗಿ ನಾವುಗಳೆಲ್ಲ ‘ಮೇ’ ಎಂಬ ಕಾಯಕ ಸೂಚಕದ ‘Bee’ ಎಂಬ ದುಂಬಿಗಳೇ. ಹಾಗಾಗಿ ನಾವು ‘May’ Beeಗಳು ಕೂಡಾ.

ಪ್ರಪಂಚದಲ್ಲಿ ನಮ್ಮಂಥಹ ಮುಂದೆ ಹುಟ್ಟಿದ ಜನಾಂಗಕ್ಕೆ ಉಪಯೋಗವಾಗುವ ಹಾಗೆ, ಅಂದಿನ ದಿನದಲ್ಲೇ ಹೋರಾಡಿದ, ಪ್ರಾಣ ತೆತ್ತ; ಇಂದು ಕೂಡಾ ತಮ್ಮ ನಿಷ್ಠ ಶ್ರಮ ಭರಿತ ದುಡಿಮೆಗಳಿಂದ, ನಾವು ಮೂಗು ಮುಚ್ಚಿ ಅಸಹ್ಯಿಸುವ ವಾತಾವರಣಗಳಲ್ಲಿ ಕೂಡಾ ನಮಗಾಗಿ ದುಡಿಯುತ್ತಿರುವ; ನಮಗಾಗಿ ತಾವು ಕಸದಲ್ಲಿದ್ದು ನಮಗೆ ಶುಭ್ರ ವಾತಾವರಣ ನೀಡುವ; ತಾವು ಗುಡಿಸಲಲ್ಲಿದ್ದು ನಮಗಾಗಿ ಮಹಲುಗಳನ್ನು ಕಟ್ಟುವ; ತಾವು ಮಳೆ, ಬಿಸಿಲುಗಳನ್ನು ಲೆಕ್ಕಿಸದೆ ಒಣ ಚೂರು ರೊಟ್ಟಿ ತಿಂದು ನಮಗಾಗಿ ಪುಷ್ಕಳ ಆಹಾರ ಒದಗಿಸುವ; ನಾವು ಪಾರ್ಟಿ ಮಾಡಿ ತಿಂದು ತೇಗಿದ್ದನ್ನು ಬಳಿಯಲು ಅದೆಷ್ಟೇಷ್ಟೋ ಹೊತ್ತು ಅನಿಯಮಿತವಾಗಿ ದುಡಿಯುವ ಕೈಗಳು; ನಾವು ಸುಖವಾಗಿ ನಿದ್ರೆ ಮಾಡುವಾಗ ನಮಗಾಗಿ ನಮ್ಮ ದೇಶ ಮತ್ತು ಮನೆಗಳ ಸುತ್ತ ಕಾಯುವ ಕಂಗಳು, ಮನಗಳು, ಹೃದಯಗಳು ಎಷ್ಟೆಷ್ಟೋ. ಅವರೆಲ್ಲರಿಗೂ ಒಂದು ಕ್ಷಣ ಗೌರವ.

WhatsApp Group Join Now
Telegram Group Join Now
Back to top button