ಬೆಳಗಾವಿ: ರಾಯಬಾಗ ಬಿಜೆಪಿ ಶಾಸಕ- ಗೋಕಾಕ ಉಪ ಅರಣ್ಯ ಅಧಿಕಾರಿ ಮಧ್ಯೆ ಏಕವಚನದಲ್ಲಿ ಮಾತಿನ ಚಕಮಕಿ
ಬೆಳಗಾವಿ: ರಾಯಬಾಗ ಬಿಜೆಪಿ ಶಾಸಕ ದುರ್ಯೋದನ ಐಹೊಳೆ ಅವರೊಂದಿಗೆ ಗೋಕಾಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅವರು ಏಕವಚನದಲ್ಲೇ ಗದರಿಸಿದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
‘ನಾನು ರಾಯಬಾಗ ಎಂಎಲ್‌ಎ ಮಾತನಾಡುತ್ತಿದ್ದೇನೆ. ರಾಯಬಾಗದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅರಣ್ಯ ಭವನ ಮಂಜೂರಾಗಿ, ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಈಗ ಸ್ಥಳೀಯ ಅಧಿಕಾರಿಗಳು ಅದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ನೀವು ಸಮಸ್ಯೆ ಬಗೆಹರಿಸಿ ಕಾಮಗಾರಿ ಚಾಲೂ ಮಾಡಿಸಬೇಕು ಸಾಹೇಬರೆ’ ಎಂದು ಐಹೊಳೆ ಕೇಳಿದ್ದಾರೆ.
ಮೊಬೈಲ್‌ನಲ್ಲಿ ಇನ್ನೊಂದು ಕಡೆಯಿಂದ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ, ‘ನೀವ್ ಯಾರು? ಶಾಸಕ ಎಂದು ನನಗೆ ಹೇಗೆ ಗೊತ್ತಾಗಬೇಕು’ ಎಂದು ಕೇಳುತ್ತಾರೆ.
‘ನಾನೇ ಶಾಸಕ ಮಾತನಾಡುತ್ತಿದ್ದೇನೆ, ನಿಮಗೇನು ಫೋಟೊ ಕಳಿಸಬೇಕೇ?’ ಎಂದು ಶಾಸಕ ಕೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್‌ಒ, ‘ಎಲ್ಲಿ ಕಟ್ಟುತ್ತಿದ್ದಾರೆ? ಅದರಿಂದ ಏನಾಗಬೇಕು ಈಗ? ಅದೇನು ನಮ್ಮಪ್ಪನ ಜಾಗ ಅಲ್ಲ. ಸರ್ಕಾರದಿಂದ ಮಂಜೂರಾಗಬೇಕು. ಅನಧಿಕೃತ ಇದ್ದ ಕಾರಣ ಬಂದ್ ಮಾಡಿದ್ದಾರೆ’ ಎನ್ನುತ್ತಾರೆ.
ಇದಕ್ಕೆ ಕೋಪಗೊಂಡ ಶಾಸಕ, ‘ಏಯ್ ನೆಟ್ಟಗೆ ಮಾತಾಡ್ರಿ. ಯಾಕ್ ಏಕವಚನದಾಗ ಮಾತಾಡತಿ’ ಎಂದು ಹೇಳುತ್ತಾರೆ.
ಅದಕ್ಕೆ ಸಿಟ್ಟಾದ ಅಧಿಕಾರಿ, ‘ನೀನು ಏಕವಚನದಲ್ಲಿ ಮಾತಾಡಿದರೆ ನಡೆಯೋದಿಲ್ಲ. ನೀನು ಎಂಎಲ್‌ಎ ಇದ್ದರೆ ನಿನಗೆ ಇರಬೇಕು. ನನಗೇನಲ್ಲ. ನಿಂದ ಗೊತ್ತಿದೆ ಹೋಗೋ ನನಗೆ. ನೀ ಯಾಂವ…’ ಎಂದು ಅಧಿಕಾರಿ ಏರುದನಿಯಲ್ಲಿ ರೇಗುತ್ತಾರೆ.
‘ಏಯ್ ನಿನ್ನಾಪ್ಪನ ಹೆಂಗ್ ಮಾತಾಡತಿ’ ಎಂದು ಐಹೊಳೆ ಹೇಳುತ್ತಾರೆ.
‘ನೀ ಹಿಂಗ್ ಮಾತಾಡಿದರೆ ನನ್ನ ಹತ್ತಿರ ನಡೆಯುವುದಿಲ್ಲ. ನೀನೇನು ಮನವಿ ಬರೆದು ಕೊಟ್ಟಿದ್ದೀಯಾ ನನಗೆ? ಹೀಗೆ ಮಾತಾಡಿದರೆ ಸುಮ್ಮನೇ ಬಿಡುವುದಿಲ್ಲ. ಈಗಲೇ ನಿನ್ನ ಮೇಲೆ ಕಂಪ್ಲೆಂಟ್ ಕೊಡುತ್ತೇನೆ’ ಎಂದೂ ಅಧಿಕಾರಿ ರೇಗುತ್ತಾರೆ.
‘ನಾನು ಸಾಹೇಬರೆ ಎಂದೇ ಮಾತಾಡಿದ್ದೇನೆ. ನಾನೇನು ನಿಮ್ಮದು ಹೊಲ ಕಸಗೊಂಡಿಲ್ಲ’ ಎನ್ನುತ್ತಾರೆ ಶಾಸಕ.
‘ಹಿಂಗ್ ರಿಕ್ವೆಸ್ಟ್ ಮಾಡಿಕೊಳ್ಳಿ. ಈಗಲೇ ಕೆಲಸ ಮಾಡಿ ಕೊಡುತ್ತೇನೆ. ಯಾರನ್ನೂ ಎದುರು ಹಾಕಿಕೊಳ್ಳಬೇಡಿ’ ಎಂದೂ ಅಧಿಕಾರಿ ಹೇಳಿ ಫೊನ್ ಕಟ್ ಮಾಡಿದ್ದು ಆಡಿಯೊದಲ್ಲಿದೆ.
-ದುರ್ಯೋದನ ಐಹೊಳೆ ಶಾಸಕ ರಾಯಬಾಗಡಿಸಿಎಫ್‌ಒ ಶಿವಾನಂದ ನಾಯಕವಾಡಿ ಅವರು ನನ್ನೊಂದಿಗೆ ಅವಮಾನಕಾರಿ ಆಗಿ ಮಾತನಾಡಿದ್ದಾರೆ. ಈ ಬಗ್ಗೆ ವಿಧಾನಸಭಾಧ್ಯಕ್ಷರು ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕಕ್ಕೆ ದೂರು ನೀಡುತ್ತೇನೆ -ಶಿವಾನಂದ ನಾಯಕವಾಡಿ ಡಿಸಿಎಫ್‌ಒ ಗೋಕಾಕಶಾಸಕರೇ ಮೊದಲು ಏಕವಚನದಲ್ಲಿ ನಿಂದಿಸಿದ್ದಾರೆ. ಅದಕ್ಕೆ ನಾನು ಹಾಗೆಯೇ ಪ್ರತ್ಯುತ್ತರ ನೀಡಿದ್ದೇನೆ. ರಾಯಬಾಗದ ಕಟ್ಟಡ ಅನಧಿಕೃತವಾಗಿದೆ. ಶಾಸಕರು ಒತ್ತಡ ಹೇರಿ ಕೆಲಸಕ್ಕೆ ಅಡ್ಡಿಪಡಿಸಬಾರದು