ಬೆಳಗಾವಿ-ಪಣಜಿ ಹೆದ್ದಾರಿ ಕಾಮಗಾರಿ ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ

WhatsApp Group Join Now
Telegram Group Join Now

ಖಾನಾಪುರ: ‘ಮುಂದಿನ ಮೂರು ತಿಂಗಳ ಒಳಗಾಗಿ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಪೈಕಿ ಕಾಮಗಾರಿ ಬಾಕಿ ಇರುವ ಖಾನಾಪುರ ತಾಲ್ಲೂಕಿನ ಹೊಣಕಲ್ ಕ್ರಾಸ್ ದಿಂದ ಉತ್ತರ ಕನ್ನಡ ಜಿಲ್ಲೆಯ ಅನಮೋಡ ಬಳಿಯ ಕರ್ನಾಟಕ-ಗೋವಾ ಗಡಿವರೆಗಿನ  ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭುವನೇಶ್ವರ ಕುಮಾರ ಹೇಳಿದರು.

ಅನಮೋಡ-ಹೊಣಕಲ್ ಮಾರ್ಗದ ರಸ್ತೆ ಕಾಮಗಾರಿಯನ್ನು ಗುರುವಾರ ತಮ್ಮ ಕಚೇರಿಯ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳ ತಂಡದೊಂದಿಗೆ ವೀಕ್ಷಿಸಿದ ಅವರು, ಬಳಿಕ ಸುದ್ದಿಗಾರನ್ನುದ್ದೇಶಿಸಿ ಮಾತನಾಡಿ, ಈ ಹೆದ್ದಾರಿಯನ್ನು ಮಹಾರಾಷ್ಟ್ರ ಮೂಲದ ಸಂಸ್ಥೆಯೊಂದು ಗುತ್ತಿಗೆ ಪಡೆದಿದೆ. ಆದರೆ ಪ್ರಾಧಿಕಾರದಿಂದ ಗುತ್ತಿಗೆ ಪಡೆದ ಸಂಸ್ಥೆ ಸ್ವತಃ ಕಾಮಗಾರಿ ನಿರ್ವಹಿಸದೇ ಬೇರೊಬ್ಬ ಗುತ್ತಿಗೆದಾರರಿಗೆ ಉಪ ಗುತ್ತಿಗೆ ನೀಡಿದೆ. ಕಾಮಗಾರಿ ಪೂರ್ಣಗೊಳಿಸಬೇಕಾದ ಇಬ್ಬರೂ ಗುತ್ತಿಗೆದಾರರ ನಡುವೆ ಹೊಂದಾಣಿಕೆ ಮತ್ತು ಸಮನ್ವಯತೆ ಇಲ್ಲದ್ದರಿಂದ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸುವತ್ತ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಇದರಿಂದ ಈ ಮಾರ್ಗದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ಸಂಗತಿ ಕೇಂದ್ರ ಸಾರಿಗೆ ಸಚಿವ ನಿತೀನ ಗಡಕರಿ ಅವರ ಗಮನಕ್ಕೆ ಬಂದಿದೆ.

ಸಚಿವರ ಸೂಚನೆಯಂತೆ ತಾವು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ದಿನಗಳಲ್ಲಿ ಹೆದ್ದಾರಿ ಕಾಮಗಾರಿಯನ್ನು ಯಾವುದೇ ವಿಳಂಬವಿಲ್ಲದೇ ಮುಗಿಸಿಕೊಡುವ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ‘ಹೊಣಕಲ್-ಅನಮೋಡ ರಸ್ತೆಯ ಕಾಮಗಾರಿ ಅಪೂರ್ಣಗೊಂಡಿದ್ದು, ರಸ್ತೆಯೂ ಬಹುತೇಕ ಹಾಳಾಗಿದ್ದರಿಂದ ತಾಲ್ಲೂಕಿನ ಗುಂಜಿ ಹೋಬಳಿಯ 40ಕ್ಕೂ ಹೆಚ್ಚು ಗ್ರಾಮಗಳ ಜನರು ಅದರಲ್ಲೂ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಅವಶ್ಯಕತೆ ಇದ್ದಲ್ಲಿ ಈ ಭಾಗದ ವಾಹನ ಸವಾರರಿಗೆ ಪೂರ್ವಸೂಚನೆ ನೀಡಿ ಕೆಲದಿನಗಳ ಮಟ್ಟಿಗೆ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಯಂತ್ರಿಸಿ ಕಾಮಗಾರಿ ನಡೆಸಬೇಕು ಮತ್ತು ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಬೇಕು’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಗಳು, ಅಧಿಕಾರಿಗಳು, ಸಿಬ್ಬಂದಿ ಮತ್ತು ಸ್ಥಳೀಯರು ಇದ್ದರು.

WhatsApp Group Join Now
Telegram Group Join Now
Back to top button