Bengaluru metro ಪ್ರಯಾಣ ನಿರಾಕರಿಸಿ ರೈತನಿಗೆ ಅವಮಾನ: ಅಧಿಕಾರಿ ವಜಾ
ಬೆಂಗಳೂರು: ಈ ರೀತಿ ಬಟ್ಟೆಗಳನ್ನು ಧರಿಸಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ರೈತರೊಬ್ಬರಿಗೆ ಅವಮಾನ ಮಾಡಿದ ಬೆಂಗಳೂರು ಮೆಟ್ರೋ ಭದ್ರತಾ ಮೇಲ್ವಿಚಾರಕರನ್ನು ವಜಾ ಮಾಡಲಾಗಿದೆ.
ಪ್ರಯಾಣಕ್ಕೆ ಸೂಕ್ತವಲ್ಲದ ಬಟ್ಟೆಗಳನ್ನು ಕಂಡು ನಮ್ಮ ಮೆಟ್ರೋ ಭದ್ರತಾ ಸಿಬಂದಿ ರೈತನನ್ನು ತಡೆದು ಪ್ರಯಾಣಿಸಲು ಅನುಮತಿ ನೀಡಲಿಲ್ಲ.
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಉಂಟುಮಾಡಿದ ನಂತರ ಭದ್ರತಾ ಮೇಲ್ವಿಚಾರಕನನ್ನು ವಜಾಗೊಳಿಸಲಾಗಿದೆ.
ಬಿಳಿ ಅಂಗಿ ಧರಿಸಿ ತಲೆಯ ಮೇಲೆ ಬಟ್ಟೆಯ ಮೂಟೆ ಹೊತ್ತು ಬಂದಿದ್ದ ರೈತನನ್ನು ರಾಜಾಜಿನಗರ ಮೆಟ್ರೋ ನಿಲ್ದಾಣದ ಭದ್ರತಾ ತಪಾಸಣಾ ಕೇಂದ್ರದ ಬಳಿ ಟಿಕೆಟ್ ಹೊಂದಿದ್ದರೂ ತಡೆದು ನಿಲ್ಲಿಸಲಾಯಿತು.
ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಲಗೇಜ್ ಸ್ಕ್ಯಾನರ್ ಬಳಿ ಹಿಂದಿ ಮಾತನಾಡುತ್ತ ರೈತ ನಿಂತಿರುವುದು ಕಂಡುಬಂದಿದೆ. ಕಾರ್ತಿಕ್ ಸಿ ಐರಾನಿ ಎಂಬ ವ್ಯಕ್ತಿ ರೈತನ ಮೆಟ್ರೋ ಪ್ರಯಾಣವನ್ನು ತಡೆದ ಕ್ರಮದ ಬಗ್ಗೆ ಸಿಬಂದಿಯೊಂದಿಗೆ ವಿಚಾರಿಸುತ್ತಿರುವುದನ್ನು ಕಾಣಬಹುದಾಗಿದೆ.
ಐರಾನಿ ಮತ್ತು ಇನ್ನೊಬ್ಬರು ಭದ್ರತಾ ಸಿಬಂದಿ ಬಳಿ ರೈತನಿಂದ ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದರು. ಅವರು ಬಟ್ಟೆಗಳನ್ನು ಮಾತ್ರ ಸಾಗಿಸುತ್ತಿದ್ದು, ಇದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿಯಮಗಳ ಉಲ್ಲಂಘನೆಯಲ್ಲ ಎಂದು ಹೇಳಿದರು.
ಇದರ ಬೆನ್ನಲ್ಲೇ ರೈತನಿಗೆ ಮೆಟ್ರೋ ಹತ್ತಲು ಅವಕಾಶ ನೀಡಲಾಯಿತು. ಘಟನೆಯ ಹಿನ್ನೆಲೆಯಲ್ಲಿ ಭದ್ರತಾ ಮೇಲ್ವಿಚಾರಕರನ್ನು ವಜಾಗೊಳಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್, ರೈತರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿ ನಮ್ಮ ಮೆಟ್ರೊ ಸಮಗ್ರ ಸಾರಿಗೆ ವಿಧಾನವಾಗಿದೆ ಎಂದು ಹೇಳಿದೆ.