ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ; 21ರಂದು ಕಾನೂನು ತಜ್ಞರ ಜೊತೆ ಸಭೆ

WhatsApp Group Join Now
Telegram Group Join Now

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ಸಂಬಂಧ ಮುಂಬೈನಲ್ಲಿ ಫೆಬ್ರುವರಿ 21ರಂದು ಕಾನೂನು ಪರಿಣತರ ತಂಡದೊಂದಿಗೆ ಸಭೆ ನಡೆಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನಿರ್ಧರಿಸಿದ್ದಾರೆ. ಕೊಲ್ಹಾಪುರದಲ್ಲಿ ಅವರನ್ನು ಶುಕ್ರವಾರ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಯೋಗ ಭೇಟಿಯಾಗಿದೆ.

 

‘ಗಡಿ ತಕರಾರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆ ಹೇರುತ್ತಿರುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಸಂಬಂಧ ಪರಿಶೀಲಿಸುವುದಾಗಿ ಶಿಂದೆ ತಿಳಿಸಿದ್ದಾರೆ’ ಎಂದು ಎಂಇಎಸ್‌ ಮುಖಂಡರು ಹೇಳಿದರು.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2022ರ ಡಿಸೆಂಬರ್ 22ರಂದು ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಿದ್ದರು. ಪ್ರತಿ ರಾಜ್ಯದಿಂದ ಮೂವರು ಸಚಿವರ ಸಮಿತಿ ರಚಿಸಿ, ನ್ಯಾಯಾಲಯದಲ್ಲಿರುವ ಮೊಕದ್ದಮೆ ಇತ್ಯರ್ಥ ಆಗುವವರೆಗೆ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಿ ಎಂದು ಸೂಚಿಸಿದ್ದರು. ಆದರೆ, ಯಾವುದೇ ಪ್ರಗತಿಯಾಗಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಫೆಬ್ರುವರಿ 21ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಶಿಂದೆ ಅವರು ವಕೀಲರಾದ ವೈದ್ಯನಾಥನ್ ಮತ್ತು ಶಿವಾಜಿ ಜಾಧವ್ ಅವರೊಂದಿಗೆ ಚರ್ಚಿಸುವರು. ಎಂಇಎಸ್ ನಿಯೋಗವೂ ಹಾಜರಾಗಬಹುದು. ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಂದ ಮಾರ್ಗದರ್ಶನ ಪಡೆಯಲು ಪ್ರಯತ್ನಿಸುತ್ತೇವೆ’ ಎಂದರು.

ಗಡಿ ಸಮನ್ವಯ ಸಚಿವ ಶಂಭುರಾಜ ದೇಸಾಯಿ, ಎಂಇಎಸ್ ಪ್ರಧಾನ ಕಾರ್ಯದರ್ಶಿ ಮಾಲೋಜಿ ಅಷ್ಟೇಕರ, ಖಜಾಂಚಿ ಪ್ರಕಾಶ ಮರಗಾಲೆ, ಎಂ.ಜಿ.ಪಾಟೀಲ, ಗೋಪಾಲ ದೇಸಾಯಿ, ವಿಲಾಸ ಬೆಳಗಾಂವಕರ ಇದ್ದರು.

WhatsApp Group Join Now
Telegram Group Join Now
Back to top button