Karnataka Lok Sabha Election 2024: ಏ.26ಕ್ಕೆ ಕರ್ನಾಟಕ ಮೊದಲ ಹಂತದ ಮತದಾನ: 14 ಕ್ಷೇತ್ರ, ಅಭ್ಯರ್ಥಿ, ಪೈಪೋಟಿ ಬಗ್ಗೆ ಮಾಹಿತಿ

WhatsApp Group Join Now
Telegram Group Join Now

ರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇನ್ನುಳಿದ 14 ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ.

ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಈ 14 ಕ್ಷೇತ್ರಗಳಲ್ಲಿ ಯಾರು ಯಾರ ವಿರುದ್ಧ ಸ್ಪರ್ಧಿಸಲಿದ್ದಾರೆ? ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಬಲ ಹೆಚ್ಚಿದೆ? ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಇಲ್ಲಿದೆ.

14 ಕ್ಷೇತ್ರಗಳಲ್ಲಿ ಯಾರ ವಿರುದ್ಧ ಯಾರು ಸ್ಪರ್ಧೆ?

ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ + ಜೆಡಿಎಸ್ ಅಭ್ಯರ್ಥಿ

ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ + ಜೆಡಿಎಸ್ ಅಭ್ಯರ್ಥಿ
1 ಉಡುಪಿ-ಚಿಕ್ಕಮಗಳೂರು ಜಯಪ್ರಕಾಶ್ ಹೆಗ್ಡೆ ಕೋಟ ಶ್ರೀನಿವಾಸ್ ಪೂಜಾರಿ
2 ಹಾಸನ ಶ್ರೇಯಸ್ ಪಟೇಲ್ ಪ್ರಜ್ವಲ್ ರೇವಣ್ಣ
3 ದಕ್ಷಿಣ ಕನ್ನಡ ಪದ್ಮರಾಜ್ ಕ್ಯಾಪ್ಟನ್ ಬ್ರಿಜೇಶ್ ಚೌಟ
4 ಚಿತ್ರದುರ್ಗ ಚಂದ್ರಪ್ಪ ಗೋವಿಂದ ಕಾರಜೋಳ
5 ತುಮಕೂರು ಮುದ್ದಹನುಮೇಗೌಡ ವಿ.ಸೋಮಣ್ಣ
6 ಮಂಡ್ಯ ಸ್ಟಾರ್ ಚಂದ್ರು ಹೆಚ್​​ಡಿ ಕುಮಾರಸ್ವಾಮಿ
7 ಮೈಸೂರು-ಕೊಡಗು ಎಂ ಲಕ್ಷ್ಮಣ್ ಯದುವೀರ್ ಒಡೆಯರ್
8 ಚಾಮರಾಜನಗರ ಸುನೀಲ್ ಬೋಸ್ ಎಸ್​ ಬಾಲರಾಜ್
9 ಬೆಂಗಳೂರು ಗ್ರಾಮಾಂತರ ಡಿಕೆ ಸುರೇಶ್ ಡಾ.ಸಿಎನ್ ಮಂಜುನಾಥ್
10 ಬೆಂಗಳೂರು ಉತ್ತರ ಪ್ರೊ.ರಾಜೀವ್ ಗೌಡ ಶೋಭಾ ಕರಂದ್ಲಾಜೆ
11 ಬೆಂಗಳೂರು ಕೇಂದ್ರ ಮನಸೂರ್ ಅಲಿಖಾನ್ ಪಿಸಿ ಮೋಹನ್
12 ಬೆಂಗಳೂರು ದಕ್ಷಿಣ ಸೌಮ್ಯಾ ರೆಡ್ಡಿ ತೇಜಸ್ವಿ ಸೂರ್ಯ
13 ಚಿಕ್ಕಬಳ್ಳಾಪುರ ರಕ್ಷಾ ರಾಮಯ್ಯ ಡಾ.ಕೆ ಸುಧಾಕರ್
14 ಕೋಲಾರ ಕೆ.ವಿ.ಗೌತಮ್‌ ಮಲ್ಲೇಶ್‌ ಬಾಬು

ಈ ಬಾರಿ ಲೋಕಸಭಾ ಚುನಾವಣೆ ಭಾರೀ ಕುತೂಹಲವನ್ನು ಮೂಡಿಸಿದೆ. ವಿಶೇಷವಾಗಿ ಕರ್ನಾಟಕದಲ್ಲಿ ನೋಡುವುದಾದರೆ ಕೆಲ ಕ್ಷೇತ್ರಗಳನ್ನು ಹಾಟ್ ಸೀಟ್ ಅಂತಲೇ ಹೇಳಬಹುದು. ಅವುಗಳಲ್ಲಿ ಮೊದಲನೇಯ ಕ್ಷೇತ್ರ ಮಂಡ್ಯ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಜೊತೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್​​ಡಿ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ.

ಮಂಡ್ಯ:

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮಾಡಿದ್ದರೆ, ಇತ್ತು ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಪರ ಪ್ರಚಾರ ಮಾಡಬೇಕಿದ್ದ ರೆಬಲ್ ಸ್ಟಾರ್ ಅಂಬರೀಷ್ ಪತ್ನಿ ಹಾಗೂ ಮಂಡ್ಯ ಸಂಸದೆ ಸುಮಲತಾ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಯಾವ ಪಕ್ಷ ಗೆಲುವು ಸಾಧಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

ಬೆಂಗಳೂರು ಗ್ರಾಮಾಂತರ:

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹಾಗೂ ಮೈತ್ರಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಕಣಕ್ಕಿಳಿದಿದ್ದಾರೆ. ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವನ್ನು ಹೊಂದಿದ್ದಾರೆ. ಮಂಜುನಾಥ್ ಕೂಡ ತಮ್ಮದೇ ಆದ ಮತಬ್ಯಾಂಕ್‌ ಅನ್ನು ಹೊಂದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹೋದರ ಡಿಕೆ ಸುರೇಶ್ ಅನ್ನು ಗೆಲ್ಲಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಭಾರೀ ಕುತೂಹಲವನ್ನು ಮೂಡಿಸಿದೆ.

ಬೆಂಗಳೂರು ಉತ್ತರ:

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಸ್ಪರ್ಥಿಸುತ್ತಿದ್ದರೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸ್ಪರ್ಧಿಸುತ್ತಿದ್ದಾರೆ. ಹಾಗೆ ನೋಡಿದರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬೇಕಿತ್ತು. ಆದರೆ ಅಲ್ಲಿ ಗೋ ಬ್ಯಾಕ್ ಅಭಿಯಾನದಿಂದಾಗಿ ಅವರಿಗೆ ಬೆಂಗಳೂರು ಉತ್ತರದಿಂದ ಸ್ಪರ್ಧಿಸಲು ಬಿಜೆಪಿ ಟಿಕಟ್ ನೀಡಿದೆ. ಹೀಗಾಗಿ ಅಲ್ಲಿ ಇಲ್ಲದವರು ಇಲ್ಲಿ ಗೆಲ್ಲುತ್ತಾರಾ? ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ಬೆಂಗಳೂರು ದಕ್ಷಿಣ:

ಇನ್ನೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನೋಡುವುದಾದರೆ ಕಾಂಗ್ರೆಸ್ ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡಿದ್ದರೆ ಬಿಜೆಪಿ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದೆ. ಸೌಮ್ಯಾ ರೆಡ್ಡಿ ಹಾಗೂ ತೇಜಸ್ವಿ ಸೂರ್ಯ ನಡುವೆ ಜಿದ್ದಿನ ಪ್ರಚಾರ ನಡೆದಿದೆ. ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಡಿಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಸೌಮ್ಯ ರೆಡ್ಡಿ ಗೆಲುವಿಗಾಗಿ ಮತ ನೀಡುವಂತೆ ಈಗಾಗಲೇ ಪ್ರಚಾರ ನಡೆಸಿದ್ದು, ಪ್ರಣಾಳಿಕೆ ಕೂಡ ಬಿಡುಗಡೆ ಮಾಡಲಾಗಿದೆ. ತೇಜಸ್ವಿ ಸೂರ್ಯ ಗೆಲುವಿಗಾಗಿ ಸಾಕಷ್ಟು ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಈ ಕ್ಷೇತ್ರ ಹಾಟ್‌ ಪ್ಲೇಸ್ ಆಗಿದೆ.

ಮೈಸೂರು-ಕೊಡಗು:

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಎಂ ಲಕ್ಷ್ಮಣ್ ಕಣದಲ್ಲಿದ್ದಾರೆ. ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹಾಲಿ ಸಂಸದ ಪ್ರತಾಪ್ ಸಿಂಹ ಮೂರನೇ ಬಾರಿ ಟಿಕೆಟ್ ನಿರೀಕ್ಷೆಯಲ್ಲಿದ್ದರು.

ಆದ್ರೆ ಹೈಕಮಾಂಡ್ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಒಡೆಯರ್ ಅವರಿಗೆ ಮಣೆ ಹಾಕಿದೆ. ಟಿಕೆಟ್ ತಪ್ಪಿದರೂ ಯದುವೀರ್ ಒಡೆಯರ್ ಪರವಾಗಿ ಪ್ರತಾಪ್ ಸಿಂಹ ಚುನಾವಣೆ ಪ್ರಚಾರ ನಡೆಸಿದ್ದಾರೆ. ಹೀಗಾಗಿ ರಾಜಮನೆತನದ ಯದುವೀರ್ ಅವರಿಗೆ ಮತದಾರರು ಮತ ಹಾಕಿ ಗೆಲ್ಲಿಸುತ್ತಾರಾ ಅನ್ನೋದನ್ನು ಜೂನ್ 4ರವರೆಗೆ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕೆಲ ಕ್ಷೇತ್ರಗಳು ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದು ಯಾರನ್ನು ಮತದಾರರು ಕೈ ಹಿಡಿಯುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

WhatsApp Group Join Now
Telegram Group Join Now
Back to top button