ಬೆಳಗಾವಿಯಲ್ಲಿ 5 ತಿಂಗಳಿಂದ ಪಿಂಚಣಿ ಬಾರದೇ ಫಲಾನುಭವಿಗಳ ಪರದಾಟ
ವೃದ್ಧಾಪ್ಯ ವೇತನ, ವಿಧವಾ ವೇತನ, ಹಿರಿಯ ನಾಗರಿಕರ ವಿಕಲಚೇತನರ ವೇತನ ಹೀಗೆ ಬಹುತೇಕ ಎಲ್ಲ ರೀತಿಯ ಪಿಂಚಣಿಗಳ ಸ್ವೀಕೃತಿ 4 ತಿಂಗಳಿನಿಂದ ಸ್ಥಗಿತಗೊಂಡಿರುವುದರಿಂದ ಫಲಾನುಭವಿಗಳು ಪರದಾಡುವಂತಾಗಿದೆ. ಹೀಗಾಗಿ ಬೆಳಗಾವಿ ಒನ್ ಕೇಂದ್ರದಲ್ಲಿ ಹಾಗೂ ಅಂಚೆ ಹಾಗೂ ಬ್ಯಾಂಕ್ ಖಾತೆ ಮರು ಲಿಂಕ್ ಮಾಡಲು ಫಲಾನುಭವಿಗಳು ಪರದಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸರಕಾರದ ನಾನಾ ಯೋಜನೆಗಳ ಫಲಾನುಭವಿಗಳಿಗೆ ಕಳೆದ 4-5 ತಿಂಗಳಿಂದ ಪಿಂಚಣಿ ಸ್ಥಗಿತವಾಗಿದೆ. ಹೀಗಾಗಿ ಬಡ ಫಲಾನುಭವಿಗಳ ಮೇಲೆ ಪರಿಣಾಮ ಬಿದ್ದಿದ್ದು, ಈಗ ಬದುಕುವುದು ಹೇಗೆ? ಎಂಬ ಪ್ರಶ್ನೆ ಅವರಿಗಿದೆ. ಯೋಜನೆ ಮೊತ್ತ ಮತ್ತು ಪಿಂಚಣಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸರ್ಕಾರ ಆರಂಭಿಸಿರುವುದರಿಂದ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಈ ಕಾಮಗಾರಿಗೆ ಇದೀಗ ಫಲಾನುಭವಿಗಳು ಬೆಳಗಾವಿ ಒನ್ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಲ್ಲಲು ಆರಂಭಿಸಿದ್ದಾರೆ.
ಈ ಕುರಿತು ಮಾತನಾಡಿದ ಆನಗೋಳದ ವೃದ್ಧಾಪ್ಯ ವೇತನ ಯೋಜನೆಯ ಫಲಾನುಭವಿ ಅನಂತ ಸಂಗೋ ರಾಮ್, ನನಗೆ 75 ವರ್ಷ ವಯಸ್ಸಾಗಿದೆ ಮತ್ತು ಪ್ರತಿ ತಿಂಗಳು 1,200 ರೂಪಾಯಿ ವೃದ್ಧಾಪ್ಯ ವೇತನವನ್ನು ಪಡೆಯುತ್ತಿದ್ದೇನೆ. ನನ್ನ ಔಷಧಿ ವೆಚ್ಚವು ಅದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಕಳೆದ 4 ತಿಂಗಳಿಂದ ನನ್ನ ಅಂಚೆ ಖಾತೆಗೆ ಪಿಂಚಣಿ ಮೊತ್ತ ಜಮಾ ಆಗಿಲ್ಲ. ಅದು ನನ್ನ ಸಮಸ್ಯೆಗೆ ಕಾರಣವಾಗುತ್ತಿದೆ. ಆಧಾರ್ ಕಾರ್ಡ್, ಕೆವೈಸಿ ಎಲ್ಲವೂ ಲಿಂಕ್ ಆಗಿದೆ. ಆದರೂ ಪಿಂಚಣಿ ಬರದ ಕಾರಣ ತಹಸೀಲ್ದಾರ್ ಸಾಹೇಬರನ್ನು ಭೇಟಿ ಮಾಡಲು ಬಂದಿದ್ದೆ. ಆದರೆ ಅವರು ಇಲ್ಲದ ಕಾರಣ ಭೇಟಿಯಾಗಲಿಲ್ಲ. ಎಂದರು
ನನ್ನ ತಾಯಿಗೆ 85 ವರ್ಷ ವಯಸ್ಸಾಗಿದೆ ಮತ್ತು ಅವರ ಪಿಂಚಣಿ ನಿಂತಿದೆ ಎಂದು ಮತ್ತೊಬ್ಬರು ಹೇಳಿದರು. ಜೊತೆಗೆ ಉದ್ಯೋಗ ನಷ್ಟದಿಂದ ಹಣದ ಸಮಸ್ಯೆ ಎದುರಿಸುತ್ತಿದ್ದೇನೆ. ತಾಯಿಯ ಔಷಧಿಯ ಖರ್ಚು ನಿಭಾಯಿಸುವುದೇ ದುಸ್ತರವಾಗಿದೆ. ಜೊತೆಗೆ ಪಾರ್ಶ್ವವಾಯುವಿಗೆ ತುತ್ತಾಗಿ ಕೆಲಸ ಮಾಡಲು ಸಾಧ್ಯವಾಗದೆ ನನ್ನ ಸ್ಥಿತಿ ಹದಗೆಟ್ಟಿದೆ. ನಾನು ಕೇವಲ ವೃದ್ಧಾಪ್ಯ ವೇತನದ ಮೇಲೆ ಅವಲಂಬಿತನಾಗಿದ್ದೇನೆ. ಆದರೆ ಕಳೆದ 4 ತಿಂಗಳಿಂದ ನನಗೆ ಪಿಂಚಣಿ ಹಣ ಸಿಗುತ್ತಿಲ್ಲ, ಹೇಗೆ ಬದುಕಬೇಕು ಎಂದು ತಿಳಿಯುತ್ತಿಲ್ಲ. ಸರಕಾರ ಆದಷ್ಟು ಬೇಗ ನನ್ನ ಪಿಂಚಣಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಮಹಿಳೆ ರಾಜಶ್ರೀ ಸಹದೇವ ಹಂಚಿನಮನಿ ಮಾತನಾಡಿ, ‘ನನ್ನ ಮಗಳು ಅಂಗವಿಕಲಳಾಗಿದ್ದು, ಆಕೆಗೆ ಮಾಸಿಕ 1400 ರೂಪಾಯಿ ವಿಕಲಚೇತನ ಪಿಂಚಣಿ, ನನಗೆ 1200 ರೂಪಾಯಿ ವಿಧವಾ ಪಿಂಚಣಿ ದೊರೆಯುತ್ತಿದೆ. ಆದರೆ ಕಳೆದ 4 ತಿಂಗಳಿನಿಂದ ಎರಡೂ ಪಿಂಚಣಿ ಸ್ಥಗಿತಗೊಂಡಿದ್ದು, ನಮಗೆ ಜೀವನ ನಡೆಸುವುದು ಕಷ್ಟಕರವಾಗಿದೆ. ಸರಕಾರ ಕೂಡಲೇ ನಮಗೆ ಪಿಂಚಣಿ ಆರಂಭಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಬೆಳಗಾವಿ ಒನ್ ಕಂಪೂಟರ್ ಡಾಟಾ ಆಪರೇಟರ್ ಜಾಹ್ನವಿ ಮಾತನಾಡಿ, ಸರಕಾರ ಎಲ್ಲ ಪಿಂಚಣಿ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ನಿರ್ಧರಿಸಿರುವುದರಿಂದ ಆಧಾರ್ ಕಾರ್ಡ್, ದಾಖಲೆಗಳು ಮತ್ತು ಬ್ಯಾಂಕ್ ಖಾತೆಯನ್ನು ಮರುಲಿಂಕ್ ಮಾಡುವ ಮೂಲಕ ಕೆವೈಸಿ ಮಾಡಬೇಕು. ಕೆಲವು ತಾಂತ್ರಿಕ ತೊಂದರೆಗಳಿಂದ ಪಿಂಚಣಿ ಸ್ಥಗಿತಗೊಂಡಿರಬಹುದು. ಆದರೆ ಎಲ್ಲರಿಗೂ ಸಿಗುತ್ತದೆ ಎಂದರು.
ಒಟ್ಟಾರೆ 4-5 ತಿಂಗಳಿಂದ ಪಿಂಚಣಿ ಪಾವತಿಯಾಗದೆ ಎಲ್ಲ ಕಲ್ಯಾಣ ಯೋಜನೆಗಳ ಪಿಂಚಣಿದಾರರು ಸಂಕಷ್ಟಕ್ಕೆ ಸಿಲುಕಿರುವುದು ವಾಸ್ತವ. ಸರಕಾರ ಈ ಸಮಸ್ಯೆಗಳನ್ನು ಹೋಗಲಾಡಿಸಿ ಪಿಂಚಣಿದಾರರಿಗೆ ಪರಿಹಾರ ನೀಡಬೇಕು ಎಂಬುದು ಎಲ್ಲರ ಆಶಯ.