ಚಿಕ್ಕೋಡಿ ಶಾಲೆ ಬಳಿ ಕಿಡ್ನ್ಯಾಪ್‌ಗೆ ಯತ್ನ: ವ್ಯಕ್ತಿಯ ಕೈಗೆ ಕಚ್ಚಿ ಬಚಾವ್ ಆದ ವಿದ್ಯಾರ್ಥಿನಿ
ಬೆಳಗಾವಿ: ಶಾಲೆ ಬಳಿ ವಿದ್ಯಾರ್ಥಿ ಅಪಹರಣಕ್ಕೆ ಯತ್ನ ಮಾಡಲಾಗಿದ್ದು, ಅದೃಷ್ಟವಶಾತ್ ವಿದ್ಯಾರ್ಥಿನಿ ಬಚಾವ್ ಆಗಿರುವ ಘಟನೆ ಚಿಕ್ಕೋಡಿ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.
ವಿದ್ಯಾರ್ಥಿನಿ ಶಾಲೆಯಿಂದ ಹೊರಗಡೆ ಬರುತ್ತಿದ್ದಂತೆ ಮುಖಕ್ಕೆ ಬಟ್ಟಿ ಕಟ್ಟಿ 200 ಮೀಟರ್ ಎಳೆದೊಯ್ದಾಗ, ವ್ಯಕ್ತಿಯ ಕೈಗೆ ಕಚ್ಚಿ ವಿದ್ಯಾರ್ಥಿನಿ ಬಚಾವ್ ಆಗಿದ್ದಾಳೆ. ಸರ್ಕಾರಿ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ನಡೆದಿದೆ. ಶಾಲೆಯ ಕಾಂಪೌಂಡ್ ಬಳಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕುಳಿತ ಆಸಾಮಿ, ವಿದ್ಯಾರ್ಥಿನಿ ಹೊರಗೆ ಬರುತ್ತಿದ್ದಂತೆ ಮುಖಕ್ಕೆ ಬಟ್ಟೆ ಕಟ್ಟಿ ಎಳೆದೊಯ್ದಿದ್ದಾನೆ. ಈ ವೇಳೆ ವ್ಯಕ್ತಿಯ ಕೈಗೆ ಕಚ್ಚಿ ವಿದ್ಯಾರ್ಥಿನಿ ಅಪಾಯದಿಂದ ಪಾರಾಗಿದ್ದಾಳೆ.
ಎಳೆದೊಯ್ಯುತ್ತಿದ್ದಾಗ ವಿದ್ಯಾರ್ಥಿನಿ ಕಿರುಚಾಟದಿಂದ ಸ್ಥಳದಿಂದ ವ್ಯಕ್ತಿ ಓಡಿ ಹೋಗಿದ್ದಾನೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಶಾಲಾ ಆವರಣದ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು, ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುವುದು ಕಂಡುಬಂದಲ್ಲಿ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ಪೊಲೀಸರು ತಿಳಿಸಿದ್ದಾರೆ.