ರಾಜ್ಯದ 5 ಬೇಡಿಕೆ 675 ಕೋಟಿ ರೂ. ಅನುದಾನ ನೀಡಿ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಪ್ರಧಾನಿಯನ್ನು ಸಿದ್ದರಾಮಯ್ಯ ಭೇಟಿ
ರಾಜ್ಯದ ಬರ ಪರಿಹಾರ ಮನವಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಮಾತುಕತೆ ನಡೆಸಿ, ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ನವದೆಹಲಿ: ರಾಜ್ಯದ ಬರ ಪರಿಹಾರ ಮನವಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಮಾತುಕತೆ ನಡೆಸಿ, ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಸಂಸತ್ ಭವನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಪ್ರಧಾನಿಯನ್ನು ಸಿದ್ದರಾಮಯ್ಯ ಭೇಟಿ ಮಾಡಿ, ರಾಜ್ಯದ ಬರ ಪರಿಸ್ಥಿತಿ ಮತ್ತು ಪರಿಹಾರ ಕೋರಿ ಸಲ್ಲಿಸಲಾಗಿರುವ ಮನವಿ ಬಗ್ಗೆ ಗಮನಸೆಳೆದಾಗ ಪಿಎಂ ಈ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಬೆಳಗ್ಗೆ ಅಮಿತ್ ಷಾ ಭೇಟಿಗೂ ಸಮಯ ಸಿಕ್ಕಿದ್ದು, ಬರ ಪರಿಹಾರದ ಬಗ್ಗೆ ಶೀಘ್ರ ಕ್ರಮ ಕೈಗೊಂಡು, ಹಣ ಬಿಡುಗಡೆಗೆ ಸಿಎಂ ಒತ್ತಾಯಿಸಲಿದ್ದಾರೆ.
ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರ ಜತೆ ಮಾಹಿತಿ ಹಂಚಿಕೊಂಡ ಸಿದ್ದರಾಮಯ್ಯ, ಅಮಿತ್ ಷಾ ನೇತೃತ್ವದ ಹೈ ಪವರ್ ಸಮಿತಿ ಸಭೆಯನ್ನು ತುರ್ತಾಗಿ ನಡೆಸಿ, ಶೀಘ್ರ ಬರ ಪರಿಹಾರ ಒದಗಿಸಲು ಪ್ರಧಾನಿ ಅವರಿಗೆ ಒತ್ತಾಯಿಸಿದ್ದೇವೆ. ರಾಜ್ಯಕ್ಕೆ ಬರ ಪರಿಹಾರ ಸಿಗಬೇಕು ಎಂದರೆ ಹೈ ಪವರ್ ಕಮಿಟಿ ಸಭೆ ನಡೆಯಬೇಕು. ನಾವು ಇದುವರೆಗೂ ಮೂರು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಾಥಮಿಕ ಸಭೆಯನ್ನೇ ನಡೆಸಿಲ್ಲ. ಆದ್ದರಿಂದ ತುರ್ತಾಗಿ ಸಭೆ ನಡೆಸಿ ಪರಿಹಾರ ಬಿಡುಗಡೆಗೆ ಸೂಚಿಸಬೇಕು ಎಂದು ಪಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಮುಖ್ಯವಾಗಿ ಐದು ಒತ್ತಾಯಗಳನ್ನು ಮುಂದಿಟ್ಟಿದ್ದೇವೆ. ನಮ್ಮ ಮನವಿಯನ್ನು ಸಮಾಧಾನದಿಂದ ಕೇಳಿ ಸ್ಪಂದಿಸಿದ್ದಾರೆ. ಸ್ಪಂದನೆಗೆ ತಕ್ಕಂತೆ ಶೀಘ್ರ ಪರಿಹಾರವನ್ನೂ ನಿರೀಕ್ಷಿಸಿದ್ದೇವೆ ಎಂದರು. ಬರ ಪರಿಸ್ಥಿತಿಯಲ್ಲಿ ನರೇಗಾ ಕೆಲಸವನ್ನು 100ರಿಂದ 150 ದಿನಗಳಿಗೆ ಕಡ್ಡಾಯವಾಗಿ ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಬಗ್ಗೆ 3 ತಿಂಗಳ ಹಿಂದೆಯೇ ಕೇಂದ್ರಕ್ಕೆ ಮನವಿ ಕೊಟ್ಟಿದ್ದು, ತುರ್ತಾಗಿ ತೀರ್ಮಾನ ತೆಗೆದುಕೊಳ್ಳುವಂತೆಯೂ ಒತ್ತಾಯಿಸಿದ್ದೇವೆ ಎಂದು ಹೇಳಿದರು.
ಮಹದಾಯಿ ವಿಚಾರದಲ್ಲಿ ಈಗಾಗಲೆ ಗೆಜೆಟ್ ನೋಟಿಫಿಕೇಶನ್ ಆಗಿದೆ. ಬೇರೆ ಅಡೆ ತಡೆ ಏನೂ ಇಲ್ಲ. ಪರಿಸರ ಸಮ್ಮತಿ ಮಾತ್ರ ಬಾಕಿ ಇದ್ದು, ಇನ್ನೂ ಸಮ್ಮತಿ ಸಿಕ್ಕಿಲ್ಲ. ಟೆಂಡರ್ ಕರೆಯಲಾಗಿದ್ದು, ಕೇಂದ್ರ ಕ್ಲಿಯರೆನ್ಸ್ ಕೊಟ್ಟ ಕೂಡಲೇ ಕೆಲಸ ಶುರು ಮಾಡಬಹುದು ಎಂದು ವಿವರಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ನಲ್ಲಿ 5300 ಕೋಟಿ ರೂ. ಘೊಷಿಸಿದ್ದರು. ಅದರ ಆಧಾರದಲ್ಲಿ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರೂ 5300 ಕೋಟಿ ರೂ. ಘೊಷಿಸಿದ್ದರು. ಆದರೆ ಇವತ್ತಿನವರೆಗೂ ಒಂದು ರೂಪಾಯಿ ಕೂಡ ಬಂದಿಲ್ಲ. ಇದು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಬದ್ಧತೆ ಎಂದು ಅಸಮಾಧಾನ ಹೊರಹಾಕಿದ ಸಿಎಂ, ನೀವೇ ಕೊಟ್ಟಿರುವ ಮಾತಿನಂತೆ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು. ಮೇಕೆದಾಟು, ಕುಡಿಯುವ ನೀರಿನ ಯೋಜನೆ. ನಮಗೆ ಕುಡಿಯುವ ನೀರಿನ ಜತೆಗೆ 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಬಳಿಕ ಈ ನೀರು ಕೂಡ ತಮಿಳುನಾಡಿಗೇ ಹೋಗಲಿದ್ದು. ಇದರಿಂದಲೂ ಅವರಿಗೇ ಅನುಕೂಲ. ಮೇಕೆದಾಟು ಸಾಧ್ಯವಾದರೆ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗೆ ಕುಡಿಯುವ ನೀರಿಗೆ ಅನುಕೂಲ. ಆದ್ದರಿಂದ ಬೇಗ ಅನುಮತಿ ಕೊಡಿಸುವಂತೆ ಕೇಳಿದ್ದೇವೆ ಎಂದರು.
ಮಹದಾಯಿ, ಮೇಕೆದಾಟು, ಭದ್ರಾ ಮೇಲ್ಸಂಡೆ ಯೋಜನೆಗಳಿಗಾಗಿ ನಾವು ಸರ್ವ ಪಕ್ಷ ನಿಯೋಗದ ಜತೆ ಕೇಂದ್ರಕ್ಕೆ ಬರಲು ಸಿದ್ಧರಿದ್ದೇವೆ ಎಂದೂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡರು.
ರಾಜ್ಯದ 5 ಬೇಡಿಕೆ
* ಬರ ಪರಿಹಾರ ಶೀಘ್ರ ಬಿಡುಗಡೆ ಮಾಡಬೇಕು.
* ನರೇಗಾ ಕೆಲಸವನ್ನು 150 ದಿನಗಳಿಗೆ ಹೆಚ್ಚಿಸಬೇಕು.
* ಭದ್ರಾ ಮೇಲ್ದಂಡೆಗೆ ಕೊಟ್ಟ ಮಾತಿನಂತೆ ಹಣ ಬಿಡುಗಡೆ ಮಾಡಬೇಕು.
* ಮಹದಾಯಿ ಯೋಜನೆಗೆ ಪರಿಸರ ಅನುಮತಿ ಶೀಘ್ರವಾಗಿ ನೀಡಬೇಕು.
* ಮೇಕೆದಾಟು ಯೋಜನೆ ಕಾರ್ಯಾರಂಭಕ್ಕೆ ಅನುಮತಿಸಬೇಕು
ವಿಪಕ್ಷ ಸಂಸದರ ಅಮಾನತು ಸರ್ವಾಧಿಕಾರಿ ಧೋರಣೆಗೆ ಸಾಕ್ಷಿ. ಪ್ರಜಾಪ್ರಭುತ್ವದಲ್ಲಿ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಸರ್ಕಾರಕ್ಕೆ ವಿಪಕ್ಷಗಳ ಟೀಕೆ ಟಿಪ್ಪಣಿ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಇರಲು ಸಾಧ್ಯ. ಕೇವಲ ತಮ್ಮ ಪಾರ್ಟಿಯವರನ್ನು ಇಟ್ಟುಕೊಂಡು ಸದನ ನಡೆಸಿದರೆ ಅದು ಸರ್ವಾಧಿಕಾರ.
| ಸಿದ್ದರಾಮಯ್ಯ ಸಿಎಂ
ರಾಜ್ಯದ ಮನವಿ ಎಷ್ಟು?
ಬರ ಪರಿಹಾರಕ್ಕೆ 18,177.44 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಇದರಲ್ಲಿ 4663.12 ಕೋಟಿ ರೂ. ಇನ್ಪುಟ್ ಸಬ್ಸಿಡಿ, 12,7577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ.ರಾಜ್ಯದಲ್ಲಿ 236 ತಾಲೂಕುಗಳಲ್ಲಿ 223 ಬರಪೀಡಿತವಾಗಿದ್ದು, 196ರಲ್ಲಿ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಷ್ಟವಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎನ್.ಡಿ.ಆರ್.ಎಫ್. ನಿಂದ 4663.12 ಕೋಟಿ ರೂ. ಇನ್ಪುಟ್ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಿದೆ. ರೈತರಿಗೆ ಇನ್ಪುಟ್ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿ ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫೂ›ಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶ ಪರಿಗಣಿಸುವಂತೆ ಮನವಿ ಮಾಡಲಾಗಿದೆ.
ಕೇಂದ್ರ ಸಚಿವರಿಗೆ ಮನವಿ
ಕೇಂದ್ರ ಪುರಸ್ಕೃತ ಯೋಜನೆಗಳಾದ ಸಖಿ ಒನ್ ಸ್ಟಾಪ್ ಸೆಂಟರ್, ಸಖಿ ನಿವಾಸ್, ಶಕ್ತಿ ಸದನ್, ಉಜ್ವಲ್ ಹಾಗೂ ಸ್ವಾಧಾರ ಗೃಹ ಯೋಜನೆಗಳ ಅನುದಾನ ಬಿಡುಗಡೆಗೊಳಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃ ಇರಾನಿ ಅವರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ. ಐಸಿಡಿಎಸ್ಯೊಜನೆಯಡಿ ಅಂಗನವಾಡಿಗಳಿಗೆ ನೀಡಬೇಕಿರುವ ಅಕ್ಕಿ ಮತ್ತು ಗೋಧಿ ಕಳೆದ 1 ವರ್ಷದಿಂದ ಬಿಡುಗಡೆಯಾಗದೆ ಬಾಕಿ ಉಳಿದಿದೆ. ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 51 ತಾಲೂಕುಗಳಿಗೆ ಶಿಶು ಅಭಿವೃದ್ಧಿ ಕಚೇರಿ ಮಂಜೂರು ಮಾಡಿ, ಸಿಬ್ಬಂದಿ ನೀಡಬೇಕು. ಸಕ್ಷಮ್ ಯೋಜನೆಯಡಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಮಾರ್ಟ ಕ್ಲಾಸ್ ರೂಂ ಆಗಿ ಪರಿವರ್ತಿಸಬೇಕೆಂದು ಕೋರಿದರು.
675 ಕೋಟಿ ರೂ. ಅನುದಾನ ನೀಡಿ
ರಾಜ್ಯಕ್ಕೆ ಹೊಸದಾಗಿ 19 ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ 50 ಮೆಟ್ರಿಕ್ ನಂತರದ ಹಾಸ್ಟೆಲ್ ನಿರ್ವಣಕ್ಕೆ 675 ಕೋಟಿ ರೂ. ಅನುದಾನ ಒದಗಿಸಲು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವೆ ಸ್ಮೃ ಇರಾನಿ ಅವರನ್ನು ಸಂಸತ್ ಭವನದಲ್ಲಿ ಮಂಗಳವಾರ ಭೇಟಿ ಮಾಡಿದ ಜಮೀರ್, 19 ಶಾಲೆಗಳಿಗೆ 475 ಕೋಟಿ ರೂ. ನೆರವು ಒದಗಿಸುವಂತೆ ಕೋರಿದರು. ಅದೇ ರೀತಿ 50 ಮೆಟ್ರಿಕ್ ನಂತರದ ಹಾಸ್ಟೆಲ್ಗಳ ನಿರ್ವಣಕ್ಕೆ 200 ಕೋಟಿ ರೂ.ಅನುದಾನ ಒದಗಿಸಬೇಕು. 2.93 ಲಕ್ಷ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ಎಂಸಿಎಂ ವಿದ್ಯಾರ್ಥಿವೇತನ ಮೊತ್ತ ಬಿಡುಗಡೆ ಬಾಕಿ ಇದ್ದು ತಕ್ಷಣ ಬಿಡುಗಡೆ ಮಾಡಬೇಕು. 2023-24 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ಬಾಕಿ ಪಾವತಿಗೆ ಕೋರಿಕೆ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಬಿಳಿ ಜೋಳ ಹಾಗೂ ಅಕ್ಕಿ ಪೂರೈಕೆ ಮಾಡಿರುವ ರಾಜ್ಯದ ಏಜೆನ್ಸಿಗಳಿಗೆ ಕೇಂದ್ರ ಸರ್ಕಾರ 2,040 ಕೋಟಿ ರೂ. ನೀಡಬೇಕಿದೆ. ತಕ್ಷಣವೇ ಅದನ್ನು ಬಿಡುಗಡೆ ಮಾಡಿ ಸಹಕರಿಸಬೇಕು ಎಂದು ಕೇಂದ್ರ ವಾಣಿಜ್ಯ, ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರಿಗೆ ಆಹಾರ ಮತ್ತು ನಾಗರಿಕ ವ್ಯವಹಾರ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಸಲ್ಲಿಸಿದರು. ಈ ವರ್ಷ ಮಾಲ್ಡಂಡಿ ಜೋಳಕ್ಕೆ ಕ್ವಿಂಟಾಲ್ಗೆ 3,225 ರೂ. ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ಬೆಂಬಲ ಬೆಲೆಯನ್ನು 4,500 ರೂ.ಗೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸುರ್ಜೆವಾಲಾ ಭೇಟಿ ಇಂದು
ನಿಗಮ-ಮಂಡಳಿಗಳಿಗೆ ಶೀಘ್ರ ನೇಮಕಾತಿ ಆಗಲಿದೆ. ಈಗಾಗಲೆ ಲಿಸ್ಟ್ ಕಳುಹಿಸಿದ್ದೇವೆ. ಮೊದಲ ಹಂತದಲ್ಲಿ ಶಾಸಕರು, ಎರಡನೇ ಹಂತದಲ್ಲಿ ಮಾಜಿ ಶಾಸಕರು, ಎಂಎಲ್ ಸಿ ಯವರನ್ನು ಮಾಡಲಾಗುತ್ತದೆ. ಲೋಕಸಭಾ ಚುನಾವಣೆಗೂ ಮುನ್ನ ನೇಮಕ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಟ್ಟು ಯಾರನ್ನೂ ಭೇಟಿ ಮಾಡಲ್ಲ. ಬುಧವಾರ ರಣದೀಪ್ ಸುರ್ಜೆವಾಲರನ್ನು ಭೇಟಿಯಾಗುತ್ತೇನೆ ಎಂದರು.