ಯಡಿಯೂರಪ್ಪ ನಮಗೆ ಮೋಸ ಮಾಡಿದ್ದಾರೆ: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: ಯಡಿಯೂರಪ್ಪ (BS Yediyurappa) ನಮಗೆ ಮೋಸ ಮಾಡಿದ್ದಾರೆಂದು ಬೇಸರವಿದೆ, ಮಾರ್ಚ್ 15ರ ನಂತರ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಕಿಡಿಕಾರಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಇ.ಕಾಂತೇಶ್ಗೆ ಹಾವೇರಿ (Haveri) ಬಿಜೆಪಿ (BJP) ಟಿಕೆಟ್ ಕೊಡಿಸುತ್ತೇನೆಂದು ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಹಾವೇರಿ ಭಾಗದಲ್ಲಿ ಕಾಂತೇಶ್ ಓಡಾಡಿ ಜನರ ವಿಶ್ವಾಸ ಗಳಿಸಿದ್ದ. ವಿವಿಧ ಮಠಾಧೀಶರು ನನ್ನ ಮಗ ಕಾಂತೇಶ್ ಬೆನ್ನಿಗೆ ನಿಂತಿದ್ದರು. ಆದರೆ, ಇಂದು ನನ್ನ ಮಗ ಕಾಂತೇಶ್ಗೆ ಟಿಕೆಟ್ ಕೈತಪ್ಪಿದೆ. ಯಡಿಯೂರಪ್ಪ ನಮಗೆ ಮೋಸ ಮಾಡಿದ್ದಾರೆಂದು ಬೇಸರವಿದೆ ಎಂದು ಅಸಮಾಧಾನ ಹೊರ ಹಾಕಿದರು.
ಕರ್ನಾಟಕದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಲುಕಿದೆ. ಕುಟುಂಬದ ಕೈಯಿಂದ ಪಕ್ಷ ರಕ್ಷಿಸಬೇಕೆಂಬ ಒತ್ತಾಯವಿದೆ. ಕರ್ನಾಟಕದಲ್ಲಿ ಬೇರೆ ಯಾರೂ ಲಿಂಗಾಯತ ನಾಯಕರಿಲ್ವಾ? ಬಿ.ಎಸ್.ಯಡಿಯೂರಪ್ಪ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ್ದಾರೆ. ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿಗೆ ಟಿಕೆಟ್ ಕೊಡಿಸಿದ್ದಾರೆ. ನನ್ನ ಮಗ ಕಾಂತೇಶ್ಗೆ ಯಾಕೆ ಬಿಎಸ್ವೈ ಟಿಕೆಟ್ ಕೊಡಿಸಲಿಲ್ಲ. ಯಡಿಯೂರಪ್ಪ ನಮಗೆ ಅನ್ಯಾಯ ಮಾಡಿದರು. ನಾನು 40 ವರ್ಷ ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಸಿ.ಟಿ.ರವಿ, ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹಗೆ ಅನ್ಯಾಯವಾಗಿದೆ ಎಂದು ಬೇಸರ ಹೊರಹಾಕಿದರು. ಈ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ನನಗೆ ಆರೋಗ್ಯ ಸರಿಯಿಲ್ಲ, ಲೋಕಸಭೆಗೆ ಸ್ಪರ್ಧಿಸಲ್ಲ ಎಂದು ಬೊಮ್ಮಾಯಿ ಚುನಾವಣಾ ಸಮಿತಿ ಸಭೆಯಲ್ಲಿ ಹೇಳಿದ್ದರು. ನಾನು ಮಾಜಿ ಸಿಎಂ, ಶಾಸಕನಾಗಿದ್ದೇನೆ ಲೋಕಸಭೆಗೆ ಸ್ಪರ್ಧಿಸಲ್ಲ. ಕಾಂತೇಶ್ಗೆ ಹಾವೇರಿ ಟಿಕೆಟ್ ನೀಡಿ ಎಂದು ಬೊಮ್ಮಾಯಿ ಹೇಳಿದ್ದರು. ಬಸವರಾಜ ಬೊಮ್ಮಾಯಿ ಹೀಗೆ ಹೇಳಿದ್ದರೂ ಸಹ ಟಿಕೆಟ್ ಕೊಡಿಸಿದ್ದಾರೆ. ಯಡಿಯೂರಪ್ಪ ಹಠಮಾಡಿ ಒತ್ತಾಯಪೂರ್ವಕವಾಗಿ ಬೊಮ್ಮಾಯಿಗೆ ಹಾವೇರಿ ಟಿಕೆಟ್ ಕೊಡಿಸಿದ್ದಾರೆ ಎಂದು ಕಿಡಿಕಾರಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ನೀವು ಸ್ಪರ್ಧಿಸಿದರೆ ಗೆಲ್ಲಿಸಿಕೊಂಡು ಬರುತ್ತೇವೆಂದು ಹೇಳುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ನಾನು ಬಯಸುತ್ತೇನೆ. ಪಕ್ಷೇತರವಾಗಿ ಗೆದ್ದು ಮೋದಿ ಬೆಂಬಲಿಸಿ ಎಂದು ಒತ್ತಾಯವಿದೆ. ಈ ಸಂಬಂಧ ಮಾರ್ಚ್ 15ರಂದು ಸಭೆ ಕರೆದಿದ್ದು, ಬೆಂಬಲಿಗರ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತಿಳಿಸುವೆ ಎಂದು ಸ್ಪಷ್ಟಪಡಿಸಿದರು.