ವೋಟರ್ ಐಡಿ ಇಲ್ಲದೆಯೇ ವೋಟ್ ಮಾಡ್ಬಹುದು! ಆದರೆ ಈ ದಾಖಲೆಗಳಲ್ಲೊಂದು ಇರಲೇಬೇಕು
ಇಂದಿನಿಂದ 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಗಳು (Lokasabha Election 2024) ಶುರುವಾಗಲಿದ್ದು, 7 ಹಂತಗಳಲ್ಲಿ ನಡೆಯಲಿರುವ ಈ ಬಾರಿಯ ಲೋಕಸಭಾ ಚುನಾವಣೆಯ ಮೊದಲನೇ ಹಂತ ಕೆಲವು ರಾಜ್ಯಗಳಲ್ಲಿ ಇಂದು ಶುರುವಾಗಿದೆ. ಈಗಾಗಲೇ ಆಯಾ ರಾಜ್ಯಗಳಲ್ಲಿರುವ ಮತದಾರ ಪ್ರಭುಗಳು ತಮ್ಮ ನೆಚ್ಚಿನ ರಾಜಕೀಯ ಪಕ್ಷಕ್ಕೆ ಮತ ಚಲಾಯಿಸಲು ತುಂಬಾನೇ ಕಾತುರರಾಗಿರುತ್ತಾರೆ.
ಮತದಾರರ ಗುರುತಿನ ಚೀಟಿ ಎಂದರೆ ವೋಟರ್ ಐಡಿ ಕಾರ್ಡ್ (Voter ID Card) ಈ ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಅಷ್ಟೇ ಅಲ್ಲದೆ ನಿಮ್ಮ ಗುರುತು, ವಾಸಸ್ಥಳ, ದೃಢೀಕರಿಸಲು ಮಹತ್ವದ ಅಧಿಕೃತ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತದೆ.
ಮತದಾನ ಮಾಡುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ
ಪ್ರತಿ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಮತದಾನವು ಮೂಲಭೂತ ಹಕ್ಕು ಮತ್ತು ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಈ ಪ್ರಕ್ರಿಯೆಯಲ್ಲಿ ವೋಟರ್ ಐಡಿ ಕಾರ್ಡ್ ತುಂಬಾನೇ ಮುಖ್ಯವಾದ ದಾಖಲೆಯಾಗಿದೆ, ಅಕಸ್ಮಾತ್ ಮತಗಟ್ಟೆಗೆ ಹೋಗುವ ಗಡಿಬಿಡಿಯಲ್ಲಿ ನೀವು ಮನೆಯಲ್ಲಿಯೇ ನಿಮ್ಮ ವೋಟರ್ ಐಡಿ ಕಾರ್ಡ್ ಅನ್ನು ಮರೆತು ಹೋಗಿದ್ದರೆ, ನೀವು ಅದರ ಬದಲಿಗೆ ಈ ಕೆಳಗೆ ಸೂಚಿಸಿರುವಂತಹ 11 ಪರ್ಯಾಯ ದಾಖಲೆಗಳಲ್ಲಿ ಒಂದನ್ನು ಜೊತೆಗೆ ಇರಿಸಿಕೊಂಡರೆ ನೀವು ಮತ ಚಲಾಯಿಸಿ ಬರಬಹುದು.
ವೋಟರ್ ಐಡಿ ಕಾರ್ಡ್ ಇಲ್ಲದೆ ಹೇಗೆ ಮತ ಚಲಾಯಿಸುವುದು?
ಮತ ಚಲಾಯಿಸಲು ಭಾರತೀಯ ಚುನಾವಣಾ ಆಯೋಗ (ಇಸಿಐ) ನೀಡಿದ ನಿಮ್ಮ ಮತದಾರರ ಗುರುತಿನ ಚೀಟಿ ಅಥವಾ ಅಧಿಕೃತ ಗುರುತಿನ ಯಾವುದೇ ಕಾರ್ಡ್ ಅನ್ನು ಸಹ ನೀವು ಒದಗಿಸಬಹುದು.
ಆದಾಗ್ಯೂ, ಇಸಿಐ ನೀಡಿದ ಸೂಚನೆಗಳ ಪ್ರಕಾರ ನೀವು ಮತದಾರರ ಗುರುತಿನ ಚೀಟಿ ಇಲ್ಲದೆ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಅಧಿಕೃತ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುವವರೆಗೆ ನೀವು ಮತ ಚಲಾಯಿಸಬಹುದು.
ಮತದಾನ ಪ್ರಕ್ರಿಯೆಯಲ್ಲಿ (ಇಸಿಐ) ಪಾಲ್ಗೊಳ್ಳುವ ಮೊದಲು ಭಾರತದ ಚುನಾವಣಾ ಆಯೋಗದ ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂದು ಪರಿಶೀಲಿಸಬೇಕು. ನಿಮ್ಮ ಮತಪತ್ರವನ್ನು ಚಲಾಯಿಸುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸುವುದು ನಿರ್ಣಾಯಕವಾಗಿದೆ, ಏಕೆಂದರೆ ಅದು ನಿಮ್ಮ ಮತ ಚಲಾಯಿಸುವ ಅರ್ಹತೆಯನ್ನು ದೃಢೀಕರಿಸುತ್ತದೆ.
ಮತದಾರರ ಗುರುತಿನ ಚೀಟಿಯನ್ನು ಹೊಂದಿಲ್ಲದಿದ್ದರೆ, ಚುನಾವಣಾ ಆಯೋಗವು ಗೊತ್ತುಪಡಿಸಿದ ಪರ್ಯಾಯ ದಾಖಲೆಗಳನ್ನು ಮತದಾರರು ಬಳಸಬಹುದು.
ಏಪ್ರಿಲ್ 2, 2024 ರ ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಾರ, ನೀವು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೊಂದಿದ್ದರೆ, ಆದರೆ ಅವರ ಗುರುತನ್ನು ಸ್ಥಾಪಿಸಲು ನಿಮ್ಮ ಎಪಿಕ್ ಅಥವಾ ಮತದಾರರ ಐಡಿ ಹೊಂದಿಲ್ಲದಿದ್ದರೆ, ನೀವು ಬಳಸಬಹುದಾದ ಪರ್ಯಾಯ ದಾಖಲೆಗಳು ಹೀಗಿವೆ ನೋಡಿ.
- ಆಧಾರ್ ಕಾರ್ಡ್
- ನರೆಗಾ ಜಾಬ್ ಕಾರ್ಡ್
- ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್ಬುಕ್
- ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
- ಚಾಲನಾ ಪರವಾನಿಗೆ
- ಪ್ಯಾನ್ ಕಾರ್ಡ್
- ಎನ್ಪಿಆರ್ ಅಡಿಯಲ್ಲಿ ಆರ್ಜಿಐ ನೀಡಿದ ಸ್ಮಾರ್ಟ್ ಕಾರ್ಡ್
- ಭಾರತೀಯ ಪಾಸ್ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ
- ಕೇಂದ್ರ/ರಾಜ್ಯ ಸರ್ಕಾರ/ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ
- ಎಂಪಿ/ಎಂಎಲ್ಎ/ಎಂಎಲ್ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ
- ವಿಶಿಷ್ಟ ಅಂಗವೈಕಲ್ಯ ಐಡಿ ಕಾರ್ಡ್
ಮತದಾರರ ನೋಂದಣಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ಮಾತ್ರ ನೀವು ಮತ ಚಲಾಯಿಸಬಹುದು. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಹೀಗೆ ಪರಿಶೀಲಿಸಿ.
- https://electoralsearch.eci.gov.in ಗೆ ಲಾಗಿನ್ ಮಾಡಿ
- ಮತದಾರರ ಸಹಾಯವಾಣಿ 1950 ಗೆ ಕರೆ ಮಾಡಿ (ದಯವಿಟ್ಟು ಡಯಲ್ ಮಾಡುವ ಮೊದಲು ನಿಮ್ಮ ಎಸ್ಟಿಡಿ ಕೋಡ್ ಸೇರಿಸಿ)