ಹುಬ್ಬಳ್ಳಿ: ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ಹಾಗೂ ಬಾದಾಮಿಯ ಬನಶಂಕರಿ ದೇವಿ ಜಾತ್ರೆ ಅಂಗವಾಗಿ ವಿಶೇಷ ಬಸ್ ವ್ಯವಸ್ಥೆ
ಹುಬ್ಬಳ್ಳಿ: ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ಹಾಗೂ ಬಾದಾಮಿಯ ಬನಶಂಕರಿ ದೇವಿ ಜಾತ್ರೆ ಅಂಗವಾಗಿ ಭಕ್ತರ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಜ.23ರಿಂದ ಜ.30ರ ತನಕ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಜಾತ್ರಾ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.
‘ದೇವಿ ಜಾತ್ರೆ ಪ್ರಯುಕ್ತ ಹುಬ್ಬಳ್ಳಿಯಿಂದ 25, ನವಲಗುಂದದಿಂದ 10 ಬಸ್‌ಗಳನ್ನು ನಿಯೋಜಿಸಲಾಗಿದೆ. 100ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, ಮೇಲ್ವಿಚಾರಣೆಗಾಗಿ 10 ಅಧಿಕಾರಿಗಳು ಹಾಗೂ 20 ಮೇಲ್ವಿಚಾರಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಯಾಣಿಕರ ಒತ್ತಡಕ್ಕೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುವುದು’ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಜಾತ್ರೆ ವಿಶೇಷ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹುಬ್ಬಳ್ಳಿ – ಯಲ್ಲಮ್ಮನ ಗುಡ್ಡ: ಈ ಬಸ್ಸುಗಳು ಧಾರವಾಡ, ಸವದತ್ತಿ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಸಂಚರಿಸುತ್ತವೆ.
ಹುಬ್ಬಳ್ಳಿ- ಬನಶಂಕರಿ: ಈ ಬಸ್ಸುಗಳು ನವಲಗುಂದ, ನರಗುಂದ, ಕೊಣ್ಣೂರು, ಕುಳಗೇರಿ, ಬಾದಾಮಿ ಮಾರ್ಗವಾಗಿ ಸಂಚರಿಸುತ್ತವೆ.
ನವಲಗುಂದ – ಯಲ್ಲಮ್ಮನ ಗುಡ್ಡ: ಈ ಬಸ್ಸುಗಳು ನವಲಗುಂದ ಬಸ್ ನಿಲ್ದಾಣದಿಂದ ಹೊರಡುತ್ತವೆ. ಗೊಬ್ಬರ ಗುಂಪಿ ಕ್ರಾಸ್, ಅಳಗವಾಡಿ ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ.