ವಕೀಲರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದ್ದು, 40 ಜನ ವಕೀಲರ ವಿರುದ್ಧ ದೂರು ದಾಖಲಿಸಿದ್ದ ಪಿಎಸ್ಐ ಅಮಾನತು

WhatsApp Group Join Now
Telegram Group Join Now

ರಾಮನಗರ: ವಕೀಲರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದ್ದು, ಐಜೂರು ಠಾಣೆ ಪಿಎಸ್ಐ ಸೈಯದ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಲಾಗಿದೆ.

ರಾಮನಗರ ಜಿಲ್ಲಾಡಳಿತ ಕಚೇರಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ ಬಳಿಕ ಗುರುವಾರ ವಿಧಾನಸೌಧ ಚಲೋಗೆ ವಕೀಲರು ಕರೆ ನೀಡಿದ್ದರು. ವಕೀಲರ ಪ್ರತಿಭಟನೆಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಮುಜುಗರ ತಪ್ಪಿಸಿಕೊಳ್ಳಲು ಪಿಎಸ್ಐ ಸೈಯದ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿದೆ.

ಅಮಾನತು ಆದೇಶದ ಬಗ್ಗೆ ಇಂದು ಸದನದಲ್ಲಿ ಗೃಹ ಸಚಿವ ಪರಮೇಶ್ವರ್‌ ಅವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

40 ವಕೀಲರ ವಿರುದ್ಧ ಸುಳ್ಳು ಎಫ್‌ಐಆರ್‌ ದಾಖಲಿಸಿದ ಸೈಯದ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ರಾಮನಗರ ವಕೀಲರು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಗೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಅಶೋಕ್‌ ಬೆಂಬಲ ನೀಡಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದರು.

ಪಿಎಸ್ಐ ಅಮಾನತು ಯಾಕೆ?: ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಎಸ್​ಡಿಪಿಐ ಕಾರ್ಯಕರ್ತ, ವಕೀಲ ಚಾಂದ್ ಪಾಷಾ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಿದ್ದ.

ನ್ಯಾಯಾಧೀಶರ ವಿರುದ್ಧವೇ ಪೋಸ್ಟ್‌ ಹಾಕಿದ್ದಕ್ಕೆ ಹಿಂದೂಪರ ಕಾರ್ಯಕರ್ತರು ಎಸ್‌ಪಿ ಹಾಗೂ ವಕೀಲರ ಸಂಘಕ್ಕೆ ದೂರು ನೀಡಿದ್ದರು. ಈ ಸಂಬಂಧ ವಕೀಲ ಚಾನ್ ಪಾಷಾ ಮೇಲೆ ಎಫ್‌ಐಆರ್‌ ದಾಖಲಾಗಿ ಬಂಧಿಸಲಾಗಿತ್ತು. ನ್ಯಾಯಾಂಗ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಚಾನ್ ಪಾಷಾ ಮೇಲೆ ವಕೀಲರ ಸಂಘ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಈ ವೇಳೆ ಚಾನ್ ಪಾಷಾ ಬೆಂಬಲಿಗರು ವಕೀಲರ ಸಂಘಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದರು.

ಮನವಿ ನೀಡುವ ವೇಳೆ ವಕೀಲರ ಸಂಘದ ಆವರಣದಲ್ಲಿ ಚಾನ್ ಪಾಷಾ ಬೆಂಬಲಿಗರು ಹಾಗೂ ವಕೀಲರ ನಡುವೆ ಗಲಾಟೆ ನಡೆದಿದೆ. ಗಲಾಟೆ ಬಳಿಕ ಚಾನ್ ಪಾಷಾ ಬೆಂಬಲಿಗರ ವಿರುದ್ಧ ವಕೀಲರು ದೂರು ನೀಡಿದ್ದರು. ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು. ನಂತರ ಚಾನ್ ಪಾಷಾ ಬೆಂಬಲಿಗರಿಂದ ಪ್ರತಿ ದೂರು ದಾಖಲಾಯಿತು.

ವಕೀಲರ ಸಂಘಕ್ಕೆ ನಾವು ಮನವಿ ಮಾಡಿಕೊಡಲು ಹೋದ ವೇಳೆ ನಮ್ಮ‌ ಮೇಲೆ ಹಲ್ಲೆ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಫೀಕ್‌ ಖಾನ್‌ ಎಂಬವರು ದೂರು ನೀಡಿದ್ದರು. ದೂರು ಸ್ವೀಕರಿಸಿ 40 ವಕೀಲರ ಮೇಲೆ ಐಜೂರು ಪಿಎಸ್ ಐ ತನ್ವೀರ್ ಎಫ್ಐಆರ್ ದಾಖಲಿಸಿದ್ದರು.

ಗಲಾಟೆ ವೇಳೆ ಸ್ಥಳದಲ್ಲಿ ಇಲ್ಲದ ವಕೀಲರ ಮೇಲೂ ಸುಳ್ಳು ಎಫ್‌ಐಆರ್‌ ದಾಖಲು ಮಾಡಲಾಗಿದೆ ಎನ್ನುವುದು ವಕೀಲರ ವಾದ. ನಂತರ ಸುಳ್ಳು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಆರೋಪಿಸಿ ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಈ ಪ್ರತಿಭಟನೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದೇ ಇದ್ದಾಗ ಈಗ ಅಹೋರಾತ್ರಿ ಡಿಸಿ ಕಚೇರಿ ಮುಂದೆ ವಕೀಲರು ಪ್ರತಿಭಟನೆ ನಡೆಸಿದ್ದರು.

WhatsApp Group Join Now
Telegram Group Join Now
Back to top button