ಬಿಡುಗಡೆಯಾಗುತ್ತಿದ್ದಂತೆ ಕರವೇ ನಾರಾಯಣಗೌಡ ಮತ್ತೆ ಪೊಲೀಸರ ವಶಕ್ಕೆ !

WhatsApp Group Join Now
Telegram Group Join Now

ಬೆಂಗಳೂರು, ಜನವರಿ 09: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ (ಕರವೇ)ನಾರಾಯಣಗೌಡ(Narayangouda) ಅವರಿಗೆ ಜಾಮೀನು‌ ಮಂಜೂರು ಆದ ಹಿನ್ನೆಲೆಯಲ್ಲಿ ಮಂಗಳವಾರ (ಜ.09) ಬಿಡುಗಡೆಯಾಗಿದ್ದಾರೆ.

 

ನಾರಯಣಗೌಡ ಅವರು ಬಿಡುಗಡೆಯಾಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು (Police) ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಇದೀಗ ಮಾರ್ಥಾಸ್ ಆಸ್ಪತ್ರೆಯಲ್ಲಿ ನಾರಾಯಣಗೌಡ ಅವರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಬಳಿಕ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. 2017ರ ಹಳೇ ಕೇಸ್ ಸಂಬಂಧ ಪೊಲೀಸರು ನಾರಾಯಣಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ.

 

ಇನ್ನು ನಾರಾಯಣಗೌಡ ಅವರ ಜೊತೆ ಬಿಡುಗಡೆಯಾದ 28 ಮಂದಿ ಕರವೇ ಕಾರ್ಯಕರ್ತರನ್ನು ಬಿಎಂಟಿಸಿ ಬಸ್ ಮೂಲಕ ಮನೆಗಳಿಗೆ ಕಳುಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

 

ನಾರಾಯಣಗೌಡ ಮತ್ತೆ ಪೊಲೀಸರ ವಶಕ್ಕೆ ಏಕೆ?

2017ರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ‌ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ‌ ಲೇಔಟ್ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಕೊರೊನಾ ಸಮಯದಲ್ಲಿ ರಾಷ್ಟ್ರೀಯ ವಿಪ್ಪತ್ತು ನಿರ್ವಹಣ ಕಾಯ್ದೆಯಡಿ ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ವಿಚಾರಣಗೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಹಲಸೂರ್ ಗೇಟ್ ಠಾಣೆ ಪೊಲೀಸರು ನಾರಾಯಣಗೌಡ ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ನಾರಾಯಣಗೌಡ ಜೈಲು ಸೇರಿದ್ದೇಕೆ

 

ಕಳೆದ ವರ್ಷ ಡಿಸೆಂಬರ್ 27 ರಂದು ಮಾಲ್, ಹೋಟೆಲ್‌ಗಳೂ ಸೇರಿದಂತೆ ವಾಣಿಜ್ಯ ಕಟ್ಟಡಗಳ ನಾಮಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ನಗರದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಾರ್ಯಕರ್ತರು ಮಾಲ್, ಹೋಟೆಲ್‌ಗಳ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಿ, ಒಳ ನುಗ್ಗಲು ಯತ್ನಿಸಿದ್ದರು. ಅಲ್ಲದೆ, ಅನ್ಯ ಭಾಷೆಯ ನಾಮಲಕಗಳು, ಫ್ಲೆಕ್ಸ್​, ಬ್ಯಾನರ್, ಹೋರ್ಡಿಂಗ್‌ಗಳನ್ನು ಕಿತ್ತೆಸೆದಿದ್ದರು. ಈ ಸಂಬಂಧ ನಗರದ ಹಲವು ಠಾಣೆಗಳಲ್ಲಿ ನಾರಾಯಣಗೌಡ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದವು.

 

ಪೊಲೀಸರ ಮೇಲೆ ಹಲ್ಲೆ, ಕರ್ತವ್ಯ ನಿರ್ವಹಣೆಗೆ ಅಡ್ಡಿ, ಸಾರ್ವಜನಿಕ ಆಸ್ತಿಗೆ ಹಾನಿ, ದೊಂಬಿ, ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಆರೋಪದಡಿ ಪೊಲೀಸರು ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದರು.

WhatsApp Group Join Now
Telegram Group Join Now
Back to top button