ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕಾರವಾರ: ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ವಿವೇಕ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಅವರು ವಿವೇಕ್ ಹೆಬ್ಬಾರ್ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ನೂರಾರು ಬೆಂಬಲಿಗರ ಜೊತೆ ವಿವೇಕ್ ಹೆಬ್ಬಾರ್ ‘ಕೈ’ ಹಿಡಿದಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ವಿವೇಕ್ ಹೆಬ್ಬಾರ್, ಕಾರ್ಯಕರ್ತರ ವಲಯದಲ್ಲಿ ಬಹಳ ದಿನದಿಂದ ವ್ಯತ್ಯಾಸಗಳು, ತಾರತಮ್ಯಗಳು ಇತ್ತು. ಹೀಗಾಗಿ ನಮ್ಮ ಕಾರ್ಯಕರ್ತರಲ್ಲಿ ಆಕ್ರೋಶ ಇತ್ತು. ಯಾರ ಹತ್ರ ಹೇಳಬೇಕು ಯಾರ ಹತ್ರ ಕೇಳಬೇಕು ಎಲ್ಲಾ ಕೇಳಿದ ನಂತರವೂ ನಮ್ಮ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನಮ್ಮ ಬಳಿ ಆಗದ ಕಾರಣ ಅನಿವಾರ್ಯ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರ ಹಿತದೃಷ್ಟಿಯಿಂದ ಕಾಂಗ್ರೆಸ್ಗೆ ಸೇರುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಬಿಜೆಪಿ ಪಕ್ಷದಲ್ಲಿ ಸ್ಥಾನಮಾನ, ಬೇರೆ ರೀತಿಯಲ್ಲಿ ನೋಡುವುದು ಹಲವು ವಿಚಾರಗಳಿವೆ. ನಾವು ಮನೆ ಬಿಟ್ಟು ಹಳೆ ಮನೆಗೆ ಬಂದಾಗಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಸೇರ್ಪಡೆ ಕಾರ್ಯ ಇವತ್ತಿಗೆ ಮಾತ್ರ ಮುಗಿದಿಲ್ಲ. ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕರ್ತರು ಸೇರ್ಪಡೆಗೊಳ್ಳುತ್ತಾರೆ.
ಬಿಜೆಪಿ ಕಾರ್ಯಕರ್ತರು ಸಹ ನಮ್ಮ ಜೊತೆ ಬರುತ್ತಿದ್ದಾರೆ. ಹೆಬ್ಬಾರ್ ಸ್ಪೋಕ್ಸ್ಪರ್ಸನ್, ನಾನಲ್ಲ. ನನ್ನ ನಿರ್ಣಯ ನಾನು ಹೇಳಿದ್ದೇನೆ. ಅವರು ಯಾವಾಗ ಕಾಂಗ್ರೆಸ್ಗೆ ಸೇರುತ್ತಾರೆ ಎಂದು ಅವರ ಬಳಿಯೇ ಕೇಳಬೇಕು ಎಂದರು.
ಬಿಜೆಪಿಯಿಂದ ದೂರ ಉಳಿದಿದ್ದ ಶಿವರಾಮ್ ಹೆಬ್ಬಾರ್ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಸೈಲೆಂಟ್ ಆಗಿದ್ದರು. ಅಲ್ಲದೇ ಆಗಾಗ ಸಿಎಂ ಸಿದ್ದರಾಮಯ್ಯ ಸೇರಿದಂತೆ ‘ಕೈ’ ನಾಯಕರನ್ನು ಶಿವರಾಮ್ ಹೆಬ್ಬಾರ್ ಹಾಡಿ ಹೊಗಳುತ್ತಿದ್ದರು. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡದೆ ಹೆಬ್ಬಾರ್ ತಟಸ್ಥರಾಗಿದ್ದಾರೆ. ಇಂದು ಯಲ್ಲಾಪುರ ಕ್ಷೇತ್ರದ ಪ್ರಮುಖ ಮುಖಂಡರ ಜೊತೆ ಹೆಬ್ಬಾರ್ ಪುತ್ರ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.