ಲೋಕಸಭೆಗೆ ಸಚಿವರ ಸ್ಪರ್ಧೆ: ಇಬ್ಬರು ಮಂತ್ರಿಗಳಿಗೆ ರಾಜ್ಯ ರಾಜಕಾರಣದಲ್ಲೇ ಮುಂದುವರಿಯಲು ಹೈಕಮಾಂಡ್ ಸೂಚನೆ

WhatsApp Group Join Now
Telegram Group Join Now

ಬೆಂಗಳೂರು:  ರಾಜ್ಯ ಕಾಂಗ್ರೆಸ್‌ ನಲ್ಲಿ ಸಚಿವರನ್ನ ಕಣಕ್ಕಿಳಿಸುವುದರ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ವರ್ಚಸ್ಸಿರುವ ಸಚಿವರನ್ನ ಕಣಕ್ಕಿಳಿಸಲು ಹೈಕಮಾಂಡ್‌ ನಿರ್ಧರಿಸಿದ್ದು, ಇಬ್ಬರು ಸಚಿವರಿಗೆ ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವಂತೆ ಹೈಕಮಾಂಡ್‌ ಸೂಚನೆ ನೀಡಿದೆ.

 

ಹೌದು, ರಾಜ್ಯದಲ್ಲಿ ಹಿರಿಯ ಸಚಿವರನ್ನ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿಭಿನ್ನ ನಿಲುವು ತಾಳಿದೆ.‌ ರಾಜ್ಯದಲ್ಲಿ 8 ಸಚಿವರನ್ನ ಚುನಾವಣೆ ಕಣಕ್ಕಿಳಿಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಎಐಸಿಸಿಗೆ ಸರ್ವೇ ರಿಪೋರ್ಟ್ ಸಲ್ಲಿಸಿದ್ದರು. ಮೊನ್ನೆಯಷ್ಟೇ ರಾಜ್ಯಕ್ಕೆ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಜೊತೆ ಈ ಬಗ್ಗೆ ಆಪ್ತವಾಗಿ ಚರ್ಚೆ ಕೂಡ ನಡೆಸಿದ್ದರು.

 

ಈ ನಿಟ್ಟಿನಲ್ಲಿ ಬಹುತೇಕ ಸಚಿವರು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನ ಭೇಟಿ ಮಾಡಿ ಲೋಕಸಭೆ ಸ್ಪರ್ಧೆಗೆ ನಿರಾಸಕ್ತಿ ವ್ಯಕ್ತಪಡಿಸಿದ್ದರು. ಪಕ್ಷ ಹೇಳಿದರೆ ಸ್ಫರ್ಧೆ ಮಾಡಬೇಕಾಗುತ್ತೆದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಚಿವರಿಗೆ ಸ್ಪಷ್ಟವಾಗಿ ಹೇಳಿ ಕಳಿಸಿದ್ದರು.
ಇದೀಗ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹೈಕಮಾಂಡ್ ವಿಭಿನ್ನ ನಿಲುವನ್ನ ತಳೆದಿದ್ದು, ಸಚಿವರ ಲೋಕಸಭೆ ಸ್ಪರ್ಧೆಯ ವಿಚಾರವನ್ನ ಆಡಳಿತಾತ್ಮಕ ದೃಷ್ಟಿಯಿಂದ ಚರ್ಚೆ ನಡೆಸಿದೆ. ವಿಶೇಷವಾಗಿ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಹಾಗೂ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡರನ್ನ ರಾಜ್ಯ ರಾಜಕಾರಣದಲ್ಲೇ ಮುಂದುವರಿಸಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ‌

ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಕಾರ್ಯವೈಖರಿ ಉತ್ತಮವಾಗಿದೆ. ಎರಡು ಮಹತ್ವದ ಇಲಾಖೆಗಳಾಗಿದ್ದು, ಇಬ್ಬರು ಸಚಿವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭೆಗೆ ಕಣಕ್ಕಿಳಿಸಿ ಅನಗತ್ಯ ಗೊಂದಲ ಸೃಷ್ಟಿ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ಕುರಿತಂತೆ ದೆಹಲಿಯಲ್ಲಿ ದಿನೇಶ್ ಗುಂಡೂರಾವ್, ಹಾಗೂ ಕೃಷ್ಣಬೈರೇಗೌಡರ ಜೊತೆ ಚರ್ಚೆ ನಡೆಸಿರುವ ಹೈಕಮಾಂಡ್ ನಾಯಕರು, ರಾಜ್ಯ ರಾಜಕಾರಣದಲ್ಲೇ ಮುಂದುವರಿಯುಂತೆ ಸಲಹೆ ನೀಡಿದ್ದಾರೆ. ಪ್ರಮುಖ ಖಾತೆ ಹೊಂದಿರುವ ಎಲ್ಲ ಸಚಿವರನ್ನ ಲೋಕಸಭೆಗೆ ಕಣಕ್ಕಿಳಿಸಿದರೆ ಆಡಳಿತಾತ್ಮಕವಾಗಿ ಸಮಸ್ಯೆಯಾಗಬಹುದು.

 

6 ತಿಂಗಳಿಗೆ ಸಚಿವರೆಲ್ಲ ಇಲಾಖೆ ಕಾರ್ಯ ಬಿಟ್ಟು ಚುನಾವಣೆಯಲ್ಲಿ ಧುಮುಕಿದರೆ ಜನರು ಸರ್ಕಾರದ ಬಗ್ಗೆ ಬೇರೆ ರೀತಿಯ ವ್ಯಾಖ್ಯಾನ ಮಾಡಬಹುದು. ಅಲ್ಲದೇ ಕೋವಿಡ್ ಉಲ್ಬಣಗೊಂಡರೆ, ಪ್ರತಿಪಕ್ಷಗಳಿಗೆ ಆಹಾರವಾಗಬೇಕಾಗುತ್ತೆ. ಹೀಗಾಗಿ ಜವಾಬ್ದಾರಿಯುತವಾಗಿ ಇಲಾಖೆ ಆಡಳಿತದ ಕಡೆ ಹೆಚ್ಚು ಗಮನ ಹರಿಸುವುದರೊಂದಿಗೆ, ಚುನಾವಣೆಗೆ ಸಹಾಕರ ನೀಡುವಂತೆ ಗುಂಡೂರಾವ್, ಹಾಗೂ ಕೃಷ್ಣಬೈರೇಗೌಡರಿಗೆ ಎಐಸಿಸಿ ನಾಯಕರು ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಲೋಕಸಭೆಗೆ ಕಣಕ್ಕಿಳಿಸುವ ಎಂಟು ಸಚಿವರ ಪಟ್ಟಿಯಿಂದ ಇಬ್ಬರು ಪ್ರಮುಖ ಖಾತೆಯ ಸಚಿವರನ್ನ ಕೈಬಿಟ್ಟಿರುವ ಕಾಂಗ್ರೆಸ್ ಹೈಕಮಾಂಡ್, ತುಮಕೂರು ಕ್ಷೇತ್ರದಲ್ಲೂ ಕೆ.ಎನ್ ರಾಜಣ್ಣ ಕಣಕ್ಕಿಳಿಸುವ ಬದಲು ಮುದ್ದಹನುಮೇಗೌಡರನ್ನ ಪಕ್ಷಕ್ಕೆ ಸೇರಿಸಿಕೊಂಡು ಕಣಕ್ಕಿಳಿಸುವ ಬಗ್ಗೆ ಚರ್ಚಿಸಿದೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
Back to top button