ರಾಜ್ಯದಲ್ಲಿ ಕಾಂಗ್ರೆಸ್ 15 ರಿಂದ 20 ಸ್ಥಾನ ಗೆಲ್ಲಲಿದೆ: ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 15ರಿಂದ 20 ಸ್ಥಾನ ಗೆಲ್ಲುವ ಗುರಿ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರು ವಿವಿಧ ರಾಜಕೀಯ ಪಕ್ಷಗಳಿಗೆ ಮತ ಚಲಾಯಿಸುತ್ತಾರೆ. ಹಾಗಾಗಿ ಎಲ್ಲ ಕ್ಷೇತ್ರಗಳಲ್ಲೂ ನಾವೇ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಕ್ಷೇತ್ರಗಳನ್ನು ನಾವೇ ಗೆಲ್ಲುತ್ತೇವೆ ಎಂದು ಹೇಳಿಕೆ ನೀಡುವುದಿಲ್ಲ. ಬಿಜೆಪಿ ಎದುರಿಸಲು ಮತ್ತು ನಮ್ಮ ಶಕ್ತಿಗೆ ಅನುಗುಣವಾಗಿ ಸ್ಥಾನ ಗೆಲ್ಲಲು ತಂತ್ರ ಹೆಣೆಯುತ್ತಿದ್ದೇವೆ’ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀರಾಮ ಇದ್ದಾರೆ. ಶ್ರೀರಾಮನು ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿಯವರು ರಾಮನ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಹೆಚ್ಚಿನ ಪ್ರಯತ್ನ ನಡೆಸಿದ್ದಾರೆ. ಆದರೆ, ಎಲ್ಲ ಪಕ್ಷದವರೂ ರಾಮನನ್ನು ಪೂಜಿಸುತ್ತಾರೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಫನೆ ವೇಳೆ, ಅನೇಕ ಮನೆಗಳ ಮೇಲೆ ಕೇಸರಿ ಧ್ವಜ ಅಳವಡಿಸಲಾಗಿತ್ತು. ಅವರೆಲ್ಲರೂ ಬಿಜೆಪಿಯ ಮತದಾರರು ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಮೋದಿ ಗೆಲ್ಲಿಸಿ, ದೇಶ ಉಳಿಸಿ ಎಂಬ ಕೆಲವರು ಅಭಿಯಾನ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್, ನಾವು ಕೂಡ ಚುನಾವಣೆ ತಂತ್ರ ಅನುಸರಿಸಿ ರಾಜ್ಯದಲ್ಲಿ ಹೆಚ್ಚಿನ ಸೀಟು ಗೆಲ್ಲುತ್ತೇವೆ. ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪಕ್ಷಗಳು ತಂತ್ರ ರೂಪಿಸುವುದು ಸಾಮಾನ್ಯ, ನಾವು ಕೂಡ ಚುನಾವಣೆ ವೇಳೆ ಸಂವಿಧಾನ ಉಳಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು ಹೇಳುತ್ತೇವೆ ಎಂದರು.
ಚಿಕ್ಕೋಡಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದೆಂದು ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಅಲ್ಲಿನ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಈಗಾಗಲೇ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಾಕಿ ಇದೆ. ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ, ಮಾ.20ರಂದು ಅಭಿಪ್ರಾಯ ಸಂಗ್ರಹ ಸಭೆ ನಡೆಯಲಿದೆ’ ಎಂದರು.
ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿನ ಅಸಮಾಧಾನ ಮುನ್ನೆಲೆಗೆ ಬಂದಿತ್ತು. ಈಗಲೂ ಅದು ಮುಂದುವರಿದಿದೆ. ಆ ಪಕ್ಷದಿಂದ ದೂರ ಸರಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೆ ಸ್ವಾಗತಿಸುತ್ತೇವೆ’ ಎಂದು ಅವರು, ರಮೇಶ ಕತ್ತಿ ನಮ್ಮ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬರಲು ಯಾವುದೇ ಅಡೆತಡೆ ಇಲ್ಲ. ಆದರೆ, ಅವರಿಗೆ ಟಿಕೆಟ್ ಕೊಡುವ ಕುರಿತು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿಳಿಸಿದರು.