ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ನೂತನ ಅಧ್ಯಕ್ಷರಾಗಿ ಕಾಶಪ್ಪನವರ ನೇಮಕ
ಬೆಂಗಳೂರು: ಕರ್ನಾಟಕ ಕ್ರೀಡಾ ಪ್ರಾಧಿಕಾರ ಅಧ್ಯಕ್ಷರಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ನೇಮಿಸಿದ್ದ ಸರಕಾರ ಇದೀಗ ಈ ಆದೇಶವನ್ನು ಹಿಂದಕ್ಕೆ ಪಡೆದು ಅವರನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಿಸಿದೆ.
ಶ್ರೀ ಕಾಶಪ್ಪನವರ್ ವಿಜಯಾನಂದ ಶಿವಶಂಕರಪ್ಪ, ಮಾನ್ಯ ಶಾಸಕರು, ಹುನಗುಂದ ವಿಧಾನಸಭಾ ಕ್ಷೇತ್ರ ಇವರನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ರದ್ದುಪಡಿಸಿ, ಮಾನ್ಯ ಶಾಸಕರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ಸಚಿವ ಸಂಪುಟ ದರ್ಜೆಯ ಸ್ನಾನಮಾನದೊಂದಿಗೆ ನೇಮಿಸಿ, ಸಚಿವ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ನೀಡಿ ಆದೇಶ ಹೊರಡಿಸಲು ಸೂಚಿಸಿದೆ.
ವಿಜಯಾನಂದ ಕಾಶಪ್ಪನವರ್ ನೇಮಕಕ್ಕೆ ಶಿಫಾರಸು ಮಾಡಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಕಳೆದ ಜನವರಿ 27ರಂದು ರಾಜ್ಯ ಸರ್ಕಾರವು 35 ಮಂದಿ ಶಾಸಕರನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಅದರಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನರನ್ನಾಗಿ ಮಾಡಿತ್ತು. ಆದರೆ ಕ್ರೀಡಾ ಪ್ರಾಧಿಕಾರದ ಬೈಲಾದಲ್ಲಿ ಇದಕ್ಕೆ ಅವಕಾಶವಿಲ್ಲ. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಬೈಲಾದ ನಿಯಮದ ಪ್ರಕಾರ ಸಚಿವರೇ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗುತ್ತಾರೆ. ಅಂದರೆ ಈಗ ಕ್ರೀಡಾ ಸಚಿವರಾಗಿರುವ ನಾಗೇಂದ್ರ ಅವರೇ ಅಧ್ಯಕ್ಷರು. ಬೇಕಿದ್ದರೆ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಬಹುದು. ಎಡವಟ್ಟನ್ನು ಅರ್ಥ ಮಾಡಿಕೊಂಡ ಸರ್ಕಾರ ವಿಜಯಾನಂದ ಕಾಶಪ್ಪನವರ್ ಅವರನ್ನು ಈಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನೇಮಕ ಮಾಡಿದೆ.