ಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ

WhatsApp Group Join Now
Telegram Group Join Now

ಬೆಳಗಾವಿ : ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಪ್ರಧಾನಮಂತ್ರಿಗಳ 15 ಹೊಸ ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ವಿನಾಕಾರಣ ನೆಪವೊಡ್ಡದೆ ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು.

ಅಲ್ಪಸಂಖ್ಯಾತರ ಸಮುದಾಯಕ್ಕೆ ಶಿಕ್ಷಣ, ಕೌಶಲ್ಯ ಹಾಗೂ ಇತರೆ ಉದ್ಯೋಗಗಳಿಗೆ ತರಬೇತಿ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ (ಜ.20) ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು.

ವಿವಿಧ ಇಲಾಖೆಗಳು ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ನೀಡಬೇಕಾದರೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಬೇಕು. ಇದರಿಂದ ಹೆಚ್ಚಿನ ಇಲಾಖಾ ಯೋಜನೆಗಳು ಪ್ರಾಚರವಾಗಲಿವೆ. ಅದರಂತೆ ಉಸ್ತುವಾರಿ ಸಚಿವರ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಚಿವರ ಮೂಲಕ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಹೇಳಿದರು.

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ವಿವಿಧ ಯೋಜನೆಗಳನ್ನು ಅರ್ಹರಿಗೆ ಸುಲಭ ರೀತಿಯಲ್ಲಿ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.

ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ:

ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಹೆಸ್ಕಾಂ ಚಿಕ್ಕೋಡಿ ವಿಭಾಗ ಸೇರಿದಂತೆ ಕೆಲವು ಇಲಾಖೆಯ ಅಧಿಕಾರಿಗಳು ಸಭೆಗಳಿಗೆ ಹಾಜರಾಗುತಿಲ್ಲ. ಸಭೆಗಳಿಗೆ ಹಾಜರಾಗದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.

ಗುರಿ ಸಾಧನೆಗೆ ಸೂಚನೆ:

ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳು ಸಮರ್ಪಕ ಬಳಕೆ ಆಗುತ್ತಿಲ್ಲ. ಯೋಜನೆಗಳ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯ ತೋರಬಾರದು. ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು ಎಂದು ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ಸೂಚಿಸಿದರು.

ಮೀನುಗಾರಿಕೆ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ಬಲೆ ಹಾಗೂ ಇತ್ಯಾದಿ ಅಗತ್ಯ ಉಪಕರಣಗಳನ್ನು ನೀಡಲಾಗಿದೆ ಅದರ ಮಾಹಿತಿ ಕೂಡ ಇಲಾಖಾ ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲು, ಜಿಲ್ಲೆಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ. ಸುಮಾರು 30 ಅಲ್ಪಸಂಖ್ಯಾತರ ಯುವಕ ಯುವತಿಯರಿಗೆ ಈಗಾಗಲೇ ಉದ್ಯೋಗ ದೊರೆತಿವೆ. ವೃತಿ ಮಾರ್ಗದರ್ಶನ ಯೋಜನೆಯಡಿ ಸ್ಥಳೀಯ ಕಾಲೇಜುಗಲ್ಲಿ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ವಿವರಿಸಿದರು.

ಬೆಳಗಾವಿಯಲ್ಲಿ ಮಹಿಳಾ ಮತ್ತು ಪುರುಷರ ಐಟಿಐ ಕಾಲೇಜುಗಳಲ್ಲಿ ಮೀಸಲಾತಿ ಅನ್ವಯ ಈಗಾಗಲೇ ಪ್ರವೇಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತಿದೆ. ಮಹಿಳಾ ಐಟಿಐ ಕಾಲೇಜಿನಲ್ಲಿ ಕೂಡ ಈಗಾಗಲೇ 8 ಮುಸ್ಲಿಂ ಹಾಗೂ 13 ಜೈನ್ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಬಹಳಷ್ಟು ಅರ್ಜಿ ಬಂದಿವೆ. ಸ್ಥಳೀಯ ಶಾಸಕರಿಂದ ಮಾಹಿತಿ ನೀಡಿ, ಕೂಡಲೇ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಹರಿಗೆ ಸಾಲ ಸೌಲಭ್ಯ ಒದಗಿಸಿ:

ಡೇ-ನಲ್ಮ್ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಈಗಾಗಲೇ ವಿವಿಧ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಗಳಿಗೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಆದರೆ 4 ಅರ್ಜಿಗಳಿಗೆ ಮಾತ್ರ ಬ್ಯಾಂಕ್ ನಿಂದ ಅಪ್ರೂವಲ್ ಆಗಿವೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಬ್ಯಾಂಕ್ ಗಳಿಗೆ ಖುದ್ದಾಗಿ ಸಂಪರ್ಕಿಸಿ ಅರ್ಜಿಗಳನ್ನು ಅಪ್ರೂವಲ್ ನೀಡಲು ಸೂಚಿಸಬೇಕು.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತರ ಸ್ವ ಸಹಾಯ ಗುಂಪುಗಳಿಗೆ ನೇರವಾಗಿ ಸಾಲ ಒದಗಿಸಬೇಕು.

ಸ್ವ-ಸಹಾಯ ಗುಂಪಿನ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುವವರೆಗೂ ಪಾಲಿಕೆ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.

ರೈತರಿಗೆ ಸಾಲ ಸೌಲಭ್ಯ:

ಡಿಸಿಸಿ ಬ್ಯಾಂಕ್ ಮೂಲಕ 4 ಎಕರೆ ನೀರಾವರಿ ಜಮೀನು ಹೊಂದಿದ ರೈತರಿಗೆ 3% ಬಡ್ಡಿ ದರದಲ್ಲಿ ಟ್ರ್ಯಾಕ್ಟರ್ ಖರೀದಿಸಲು ಸಾಲ ನೀಡಲಾಗುವದು.

5 ಲಕ್ಷದ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲ ನೀಡಲಾಗುವದು ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಕಲಂದಾರ ತಿಳಿಸಿದರು.

ಸಹಕಾರ ಇಲಾಖೆಯಿಂದ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ 53 ಜನರಿಗೆ ಈಗಾಗಲೇ ದೀರ್ಘಾವಧಿ ಸಾಲ ನೀಡಲಾಗಿದೆ. ನೀರಾವರಿ ಜಮೀನು ಹೊಂದಿದ ರೈತರಿಗೆ ಶೇಕಡಾ 3% ಬಡ್ಡಿ ದರದಲ್ಲಿ 15 ಲಕ್ಷದ ವರೆಗೆ ಸಾಲ ನೀಡಲಾಗುವದು ಎಂದು ಸಹಕಾರ ಇಲಾಖೆ ಅಧಿಕಾರಿಗಳು ಹೇಳಿದರು.

ಅದೇ ರೀತಿಯಲ್ಲಿ ಪಶುಪಾಲನಾ ಇಲಾಖೆಯಿಂದ ಮುಖ್ಯಮಂತ್ರಿ ಅಮೃತ್ ಜೀವನ ಯೋಜನೆಯಡಿ ಹೈನುಗಾರಿಕೆ ಘಟಕ ಸ್ಥಾಪಿಸಲು ಈಗಾಗಲೇ ಸಹಾಯಧನ, ಸಾಲ ಸೌಲಭ್ಯ ನೀಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ವಿವರಿಸಿದರು.

ವಿವಿಧ ಬ್ಯಾಂಕ್ ಗಳ ಬಡ್ಡಿ ದರ ಹಾಗೂ ವಿವಿಧ ಯೋಜನೆಗಳ ಸಾಲ ಸೌಲಭ್ಯ ಮಾಹಿತಿ ಕುರಿತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯ ನೋಟಿಸ್ ಬೋರ್ಡ್ ನಲ್ಲಿ ಮಾಹಿತಿ ನಮೂದಿಸಬೇಕು ಇದರಿಂದ ಇಲಾಖೆಯ ಯೋಜನೆಗಳ ಸೌಲಭ್ಯ ಕೋರಿ ಬರುವ ಜನರಿಗೆ ಸಹಾಯ ಆಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಿರ್ದೇಶನ ನೀಡಿದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಬ್ದುಲ್ ರಶೀದ್ ಮಿರ್ಜನ್ನವರ, ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಗಂಗಾಧರ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ ಕುಲಕರ್ಣಿ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

 

WhatsApp Group Join Now
Telegram Group Join Now
Back to top button