ಹುಬ್ಬಳ್ಳಿ; ಮೋದಿ ಗ್ಯಾರಂಟಿ ಕಾರ್ಡ್‌ ವದಂತಿ:ಅಂಚೆ ಕಚೇರಿಗೆ ಮುಗಿಬಿದ್ದ ಮಹಿಳೆಯರು

'ಮೋದಿ ಕಾರ್ಡ್‌, ಮೋದಿ ಖಾತೆ ಎಂಬ ಯಾವುದೇ ಯೋಜನೆ ಅಂಚೆ ಕಚೇರಿಯಲ್ಲಿ ಇಲ್ಲ'

WhatsApp Group Join Now
Telegram Group Join Now

ಹುಬ್ಬಳ್ಳಿ: ‘ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್‌ ಕಾರ್ಡ್ ಕುಟುಂಬದ ಮಹಿಳೆಯರಿಗೆ ₹3 ಸಾವಿರ ಜಮಾ ಮಾಡಲಾಗುವುದು’ ಎಂಬ ವದಂತಿ ಹರಡಿ ಸೋಮವಾರ ನಗರದ ಅಂಚೆ ಕಚೇರಿಗಳಿಗೆ ಮಹಿಳೆಯರು ಮುಗಿಬಿದ್ದರು.

ಬೆಳಿಗ್ಗೆ 8ರಿಂದ ನಗರದ ವಿವಿಧ ಅಂಚೆಕಚೇರಿಗಳ ಎದುರು ಮಹಿಳೆಯರು ಸಾಲುಗಟ್ಟಿ ನಿಂತರು.

ಸ್ಟೇಷನ್‌ ರಸ್ತೆಯಲ್ಲಿರುವ ಮುಖ್ಯ ಅಂಚೆಕಚೇರಿ ಎದುರು ರಾತ್ರಿ 8ರವರೆಗೆ ಸಾಲು ಇತ್ತು. ಹಳೇಹುಬ್ಬಳ್ಳಿ, ಗಿರಣಿಚಾಳ, ಉದ್ಯಮನಗರ, ನವಗರ, ಟ್ರಾಫಿಕ್‌ ಐಲ್ಯಾಂಡ್‌ ಉಪ ಅಂಚೆ ಕಚೇರಿಗಳ ಎದುರು ಸಹ ಇದೇ ವಾತಾವರಣ ಇತ್ತು.

‘ಮೋದಿ ಕಾರ್ಡ್‌, ಮೋದಿ ಖಾತೆ ಎಂಬ ಯಾವುದೇ ಯೋಜನೆ ಅಂಚೆ ಕಚೇರಿಯಲ್ಲಿ ಇಲ್ಲ’ ಎಂದು ಅಂಚೆ ಕಚೇರಿ ಸಿಬ್ಬಂದಿ ಪದೇ ಪದೇ ಹೇಳಿದರೂ, ‘ನೀವು ಸುಳ್ಳು ಹೇಳುತ್ತೀರಿ. ನಾವು ಉಳಿತಾಯ ಖಾತೆ ತೆರೆಯಲೇಬೇಕು’ ಎಂದರು.

‘ಮೋದಿ ಗ್ಯಾರಂಟಿ ಯೋಜನೆ ಘೋಷಿಸಿದ್ದಾರಂತೆ. ಉಳಿತಾಯ ಖಾತೆ ಮಾಡಿಸಿದರೆ, ಮೂರು ತಿಂಗಳಿಗೊಮ್ಮೆ ₹3 ಸಾವಿರ ಹಾಕುತ್ತಾರಂತೆ. ಅದಕ್ಕೆ ಬೆಳಿಗ್ಗೇನೆ ಬಂದು ನಿಂತಿರುವೆ’ ಎಂದು ಗಂಗಾಧರ ನಗರದ ಲಕ್ಷ್ಮವ್ವ ಸಣ್ಣಕ್ಕಿ ಹೇಳಿದರು.

‘ಮೋದಿ ಕಾರ್ಡ್‌ ಮಾಡಿಸಿದರಷ್ಟೇ ₹ 3 ಸಾವಿರ ಹಾಕುತ್ತಾರಂತೆ. ನಮ್ಮ ಮನೆ ಅಕ್ಕಪಕ್ಕದವರು ಕಾರ್ಡ್‌ ಮಾಡಿಸಿದ್ದಾರೆ. ಶನಿವಾರದ ಒಳಗ ಕಾರ್ಡ್‌ ಮಾಡಿಸಿದರಷ್ಟೇ ಹಣ ಬರುತ್ತಂತೆ’ ಎಂದು ಕೆ.ಕೆ.ನಗರದ ಶಿವರುದ್ರಮ್ಮ ಹೇಳಿದರು.

‘ಅಂಚೆ ಕಚೇರಿಯಲ್ಲಿ ಮಹಿಳೆಯರು ಮೋದಿ ಖಾತೆ ತೆರೆದರೆ, ಮೂರು ತಿಂಗಳಿಗೊಮ್ಮೆ ₹3 ಸಾವಿರ ಖಾತೆಗೆ ಜಮಾ ಆಗುವುದು ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದನ್ನು ನಂಬಿದ ಮಹಿಳೆಯರು ಬೆಳಿಗ್ಗೆಯಿಂದ ಅಂಚೆ ಕಚೇರಿಗಳ ಎದುರು ಜಮಾಯಿಸಿದ್ದಾರೆ. ಅಂಚೆ ಕಚೇರಿಗಳ ಎದುರು ನೋಟಿಸ್‌ ಅಂಟಿಸಿ, ಸುಳ್ಳು ಸುದ್ದಿ ನಂಬಬೇಡಿ ಎಂದಿದ್ದೇವೆ. ಆದರೂ ಮಹಿಳೆಯರು ನಮ್ಮ ಮಾತು ಒಪ್ಪುತ್ತಿಲ್ಲ’ ಎಂದು ಪ್ರಧಾನ ಅಂಚೆ ಕಚೇರಿಯ ಹಿರಿಯ ಪೋಸ್ಟ್‌ಮಾಸ್ಟರ್ ಎಂ.ಕುಮಾರಸ್ವಾಮಿ ತಿಳಿಸಿದರು.

‘ಎರಡು ವರ್ಷದ ಹಿಂದೆಯೇ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಯೋಜನೆ ಪರಿಚಯಿಸಿದ್ದೇವೆ. ಅದು ಉಳಿತಾಯ ಖಾತೆಯಾಗಿದ್ದು, ಯಾರು ಬೇಕಾದರೂ ₹200 ನೀಡಿ ಖಾತೆ ತೆರೆಯಬಹುದು. ವದಂತಿ ನಂಬಿ ಅಂಚೆ ಕಚೇರಿ ಎದುರು ದಿನಕ್ಕೆ ಹುಬ್ಬಳ್ಳಿ ನಗರದ ವಿವಿಧ ಬಡಾವಣೆಯ ಒಂದು ಸಾವಿರ ಮಹಿಳೆಯರು ಖಾತೆ ತೆರೆಯಲು ಬರುತ್ತಿದ್ದಾರೆ. ಗರಿಷ್ಠ 400 ಖಾತೆ ತೆರೆಯಬಹುದು. ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಬಳಸಿಕೊಂಡು ರಾತ್ರಿ 11ರವರೆಗೂ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

WhatsApp Group Join Now
Telegram Group Join Now
Back to top button