ಎಷ್ಟು ವರ್ಷ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಪ್ರಯಾಣಿಕರು ಟೋಲ್ ಪಾವತಿಸಬೇಕು? ವಾಹನ ಸವಾರರ ಆಕ್ರೋಶ

ಹಲವು ವರ್ಷಗಳಿಂದ ಈ ಟೋಲ್ ನಿಂದ ರೋಸಿ ಹೋಗಿರೋ ಜನ ಇದರಿಂದ ಮುಕ್ತಿ ಯಾವಾಗ ಸಿಗುತ್ತೋ ಅಂತಾ ಕಾಯುತ್ತಿದ್ದಾರೆ.

WhatsApp Group Join Now
Telegram Group Join Now

ಧಾರವಾಡ: ಅವಳಿ ನಗರ ಹುಬ್ಬಳ್ಳಿ-ಧಾರವಾಡಗಳ ಮಧ್ಯೆ ವಾಹನ ಸಂಚಾರ ಹೆಚ್ಚಾದ ಕಾರಣ, ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 1998 ರಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಎರಡು ಕಡೆ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್‌ನ ಟೋಲ್ ಆಕರಣೆಯ ಗುತ್ತಿಗೆ ನೀಡಲಾಗಿತ್ತು.

ಈಗ ಆ ಟೋಲ್ ಸಂಗ್ರಹಣೆ ಅವಧಿ ಮುಗಿದಿದ್ದರೂ ಹಣ ವಸೂಲಿ ನಿಂತಿಲ್ಲ. ಅಲ್ಲದೇ ಕೇಂದ್ರ ಸರಕಾರ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಿದೆ. ಇದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಪುಣೆ-ಬೆಂಗಳೂರು ಮಧ್ಯದ ಈ ರಾಷ್ಟ್ರೀಯ ಹೆದ್ದಾರಿ ಎಲ್ಲ ಕಡೆ ಚತುಷ್ಪಥವಿದ್ದರೂ ಧಾರವಾಡ-ಹುಬ್ಬಳ್ಳಿ ಮಧ್ಯದ 31 ಕಿಮೀ ಮಾತ್ರ ನಿರ್ಮಾಣಗೊಂಡ 1998 ರಿಂದಲೂ ದ್ವಿಪಥವಾಗಿದೆ. ಹೀಗಾಗಿ ಅಪಘಾತಗಳು ಆಗುತ್ತಲೇ ಇರುತ್ತವೆ. ಅನೇಕ ಜೀವಹಾನಿಯಾಗಿದೆ. ಇದರಿಂದಾಗಿ ಕಿಲ್ಲರ್ ಬೈಪಾಸ್ ಅಂತಾನೆ ಕರಿತಾರೆ. ಇಂತಹ ಬೈಪಾಸ್‌ನ್ನು ನಿರ್ಮಿಸಿದ್ದ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್, ಧಾರವಾಡ ಹೊರವಲಯದ ನರೇಂದ್ರ ಮತ್ತು ಹುಬ್ಬಳ್ಳಿ ಹೊರವಲಯದ ಗಬ್ಬೂರ ಬಳಿ 2000ನೇ ಇಸವಿಯಿಂದ ಟೋಲ್ ವಸೂಲಿ ಮಾಡುತ್ತಿದೆ. ಸುಮಾರು 31 ಕಿ.ಮೀ. ಉದ್ದದ ಈ ರಸ್ತೆ ನಿರ್ಮಿಸಿ, 25 ವರ್ಷಗಳ ಕಾಲ ಟೋಲ್ ವಸೂಲಿಗೆ ಗುತ್ತಿಗೆ ನೀಡಲಾಗಿತ್ತು. ಕೇವಲ 30 ಕಿ.ಮೀ. ರಸ್ತೆಯಲ್ಲಿಯೇ ಎರಡು ಕಡೆಗಳಲ್ಲಿ ಟೋಲ್ ವಸೂಲಿ ಮಾಡಲಾಗುತ್ತಿದೆ.

ಮತ್ತೆ ಸೆಪ್ಟೆಂಬರ್‌ವರೆಗೂ ವಿಸ್ತರಣೆ
ಇದೇ ವರ್ಷದ ಮೇ 4 ಕ್ಕೆ ಟೋಲ್ ಅವಧಿ ಮುಕ್ತಾಯವಾಗಿತ್ತು. ಆದರೆ ಕಂಪನಿಯ ಮನವಿ ಮೇರೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟೋಲ್ ವಸೂಲಿಯನ್ನು 49 ದಿನಗಳ ಕಾಲ ಹೆಚ್ಚಿಸಿ, ಜೂನ್ 23 ರವರೆಗೆ ಅವಕಾಶ ನೀಡಿತ್ತು. ಅದರ ಬೆನ್ನಲ್ಲಿಯೇ ಈಗ ಪುನಃ ಆ ಅವಧಿಯನ್ನು 75 ದಿನಗಳವರೆಗೆ ವಿಸ್ತರಿಸಿ ಸೆಪ್ಟೆಂಬರ್‌ ತಿಂಗಳವರೆಗೂ ಅವಕಾಶ ಕೊಟ್ಟಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕೂಡಲೇ ಟೋಲ್ ನಿಲ್ಲಿಸದೇ ಹೋದಲ್ಲಿ ಹೋರಾಟ ಮಾಡೋದಾಗಿ ಕರವೇ ಎಚ್ಚರಿಕೆ ನೀಡಿದೆ.

2026ಕ್ಕೆ ಹೊಸ ರಸ್ತೆ
ಟೋಲ್ ಸಂಗ್ರಹಣೆಗೆ ಪುನಃ ಪುನಃ ಅವಧಿ ವಿಸ್ತರಿಸಿರೋ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗೋದಕ್ಕೆ ಕಾರಣವೂ ಇದೆ. ಇಷ್ಟು ವರ್ಷ ಟೋಲ್ ಸಂಗ್ರಹಿಸಿರೋ ಕಂಪನಿ ರಸ್ತೆಯನ್ನು ಸರಿಯಾಗಿ‌ ನಿರ್ವಹಿಸಿಲ್ಲ. ಅನೇಕ ಅಪಘಾತಗಳಾದರೂ ತಲೆ ಕೆಡಿಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಕೇಂದ್ರ ಸರಕಾರ 580 ಕೋಟಿ ರೂಪಾಯಿ ಅನುದಾನದಲ್ಲಿ ಷಟ್ಪಥ ರಸ್ತೆಯನ್ನು ನಿರ್ಮಿಸುತ್ತಿದ್ದು, ಅದು 2026 ರ ಹೊತ್ತಿಗೆ ಮುಕ್ತಾಯವಾಗಿ, ಈ ಹೊಸ ರಸ್ತೆ ಸಾರ್ವಜನಿಕರ ಸೇವೆಗೆ ಸಿಗಲಿದೆ.

ಇದೀಗ ಏನೂ ಮಾಡದ ನಂದಿ ಹೈವೇ ಡೆವೆಲಪರ್ಸ್ ಲಿಮಿಟೆಡ್‌ಗೆ ವಸೂಲಿ ಮಾಡಲು ಮುಂದುವರೆಸಿರೋದೆ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನಗಳು ಓಡಾಡದ ಹಿನ್ನೆಲೆಯಲ್ಲಿ ಆದಾಯ ಕುಸಿದಿದ್ದೇ ಟೋಲ್ ವಸೂಲಿ ಮುಂದುವರೆಸಲು ಕಾರಣ ಅಂತಾ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳುತ್ತಿದೆ.

ಸಂಸದರು ಹೇಳೋದೇನು?
ಈ ಬಗ್ಗೆ ಕೇಂದ್ರ ಸಚಿವ ಹಾಗೂ ಧಾರವಾಡದ ಸಂಸದ ಪ್ರಲ್ಹಾದ ಜೋಶಿ ಅವರನ್ನು ಕೇಳಿದರೆ, ಅವರು ಕೂಡ ಇದೇ ಕಾರಣ ಹೇಳುತ್ತಾರೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ದೆಹಲಿಗೆ ಹೋಗಿ ಸಂಬಂಧಿಸಿದ ಅಧಿಕಾರಿಗಳಿಂದ ಫೈಲ್ ತರಿಸಿ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಹಲವು ವರ್ಷಗಳಿಂದ ಈ ಟೋಲ್ ನಿಂದ ರೋಸಿ ಹೋಗಿರೋ ಜನ ಇದರಿಂದ ಮುಕ್ತಿ ಯಾವಾಗ ಸಿಗುತ್ತೋ ಅಂತಾ ಕಾಯುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ವಸೂಲಿಗೆ ಮತ್ತೆ ಮತ್ತೆ ಅವಕಾಶ ಕೊಡುತ್ತಿರೋದನ್ನು ನೋಡಿದರೆ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲವಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

WhatsApp Group Join Now
Telegram Group Join Now
Back to top button