ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಷಣದ ಹೈಲೈಟ್ಸ್: ಜೆಡಿಎಸ್- ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಸೇರಲು ಮುಕ್ತ ಆಹ್ವಾನ ನೀಡಿದ ಡಿಸಿಎಂ

WhatsApp Group Join Now
Telegram Group Join Now

ಚನ್ನಪಟ್ಟಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಷಣದ ಹೈಲೈಟ್ಸ್:

ನಾನು ಈ ಕಾರ್ಯಕ್ರಮಕ್ಕೆ ಬರುವಾಗ ಕೆಲವು ಮಹಿಳೆಯರು ನನ್ನನ್ನು ಅಡ್ಡಹಾಕಿ ನಮಗೆ ಎಲ್ಲಾ ಯೋಜನೆ ಸಿಗುತ್ತಿವೆ ಎಂದು ನನಗೆ ಆಶೀರ್ವಾದ ಮಾಡಿದರು. ಇದು ನನ್ನ ಭಾಗ್ಯ.

ನಾನು ಪ್ರವಾಸ ಮಾಡಿದ ಎಲ್ಲೆಡೆ ಇದೇ ರೀತಿ ಮಹಿಳೆಯರು ಸಾಗರೋಪಾದಿಯಲ್ಲಿ ಸೇರುತ್ತಿದ್ದಾರೆ. ನಾನು ಇಲ್ಲಿಗೆ ಬರುವ ಮುನ್ನ ಬಡವರಿಗಾಗಿ ಕಟ್ಟಿಸಿರುವ 32 ಸಾವಿರ ಮನೆಗಳ ಹಂಚುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದೆ. ಬಡವರಿಂದ ಕೇವಲ 1 ಲಕ್ಷ ಹಣ ಪಡೆದು, ಸರ್ಕಾರದಿಂದ 5 ಲಕ್ಷ ಪಾವತಿ ಮಾಡಿ ಬಡವರಿಗೆ ಈ ಮನೆಗಳನ್ನು ನೀಡಲಾಗುತ್ತಿದೆ.

ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು.
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು.
ಇದನ್ನು ನೋಡಿದ ಕಮಲ ಉದುರಿ ಹೋಯಿತು.
ಕುಮಾರಣ್ಣ ತೆನೆ ಎಸೆದು ಬಿಜೆಪಿ ಸೇರಿಕೊಂಡರು.
ಕರ್ನಾಟಕ ಸಮೃದ್ಧವಾಯಿತು.
ಕರ್ನಾಟಕ ಪ್ರಬುದ್ಧವಾಯಿತು.

ನಮ್ಮ ಯೋಜನೆಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿ ದೇವಾಲಯಗಳ ಹುಂಡಿ ತುಂಬುತ್ತಿವೆ. ಆರ್ಥಿಕತೆಗೆ ಉತ್ತೇಜನ ಸಿಕ್ಕಿದೆ. ನಾನು ಚುನಾವಣೆಗೂ ಮುನ್ನವೇ ಬಂದು ಇಲ್ಲಿ ಮಾತನಾಡಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದ್ದೆ.

ನಮ್ಮ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಅನೇಕ ಸುಳ್ಳು ಪ್ರಚಾರ ಮಾಡಿದರು. ಅದರಲ್ಲಿ ಯಾವುದಾದರೂ ಒಂದು ಸತ್ಯವಾಗಿದೆಯಾ? ಸಾಯಿಬಾಬಾ ಅವರು ಒಮ್ಮೆ ಕಾರ್ಯಕ್ರಮದಲ್ಲಿ ದುಡ್ಡು ಮತ್ತು ಬ್ಲಡ್ ಒಂದೇ ಕಡೆ ಇರಬಾರದು ಅವುಗಳು ಚಲನೆಯಲ್ಲಿರಬೇಕು ಎಂದು ಹೇಳಿದರು. ಅದರಂತೆ ನಮ್ಮ ಯೋಜನೆಗಳಿಂದ ಜನರ ಕೈಯಲ್ಲಿ ಹಣ ಹರಿದಾಡುತ್ತಿದೆ. ಆರ್ಥಿಕತೆಗೆ ಉತ್ತೇಜನ ಸಿಕ್ಕಿದೆ.

ನಮಗೆ ಸಿಕ್ಕ ಅವಕಾಶದಲ್ಲಿ ನಾವು ನಿಮ್ಮ ಸೇವೆ ಮಾಡಿ ನಿಮ್ಮ ಋಣ ತೀರಿಸಿದ್ದೇವೆ. ಚನ್ನಪಟ್ಟಣ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನಾನು ಇಂಧನ ಸಚಿವನಾಗಿದ್ದಾಗ ಎಲ್ಲಾ ಕಡೆ ಹೆಚ್ಚಿನ ಟ್ರಾನ್ಸ್ ಫಾರ್ಮರ್ಸ್ ಗಳನ್ನು ನೀಡಿದ್ದೇನೆ. ಆಮೂಲಕ ವಿದ್ಯುತ್ ಸಮಸ್ಯೆ ಬಗೆಹರಿಸಲಾಗಿದೆ. ಇಂತಹ ವ್ಯವಸ್ಥೆ ಬೇರೆ ಜಿಲ್ಲೆಗಳಲ್ಲಿ ಇಲ್ಲ. ಕಾರಣ ನೀವು ಡಿ.ಕೆ. ಸುರೇಶ್ ಅವರಿಗೆ ಕೊಟ್ಟ ಶಕ್ತಿ.

ನಿನ್ನೆ ಕುಣಿಗಲ್ ನಲ್ಲಿ 250ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ಮಾಡಿ ಬಂದೆ.

ರೈತರಿಗೆ ಉಳುಮೆ ಮಾಡಲು ಭೂಮಿ ಕೊಟ್ಟಿದ್ದು, ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದು, ಹಳ್ಳಿಗಳಲ್ಲಿ ಉಚಿತವಾಗಿ ಮನೆ, ಉಚಿತವಾಗಿ 5 ಕೆ.ಜಿ ಅಕ್ಕಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ವಾರ್ಷಿಕವಾಗಿ ಬಡವರಿಗೆ 50-60 ಸಾವಿರ ಉಳಿತಾಯ ಮಾಡುವಂತಹ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ.

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅಪಮಾನ. ಇವೆರಡನ್ನೂ ನಾವು ನಿಮಗೆ ಕೊಟ್ಟಿದ್ದೇವೆ.

ನೀವೆಲ್ಲರೂ ಜೆಡಿಎಸ್ ಹಾಗೂ ಬಿಜೆಪಿಗೆ ಅಧಿಕಾರ ಕೊಟ್ಟಿದ್ದೀರಿ. ಆದರೆ ಅವರು ಎಂದಾದರೂ ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಒಂದಾದರೂ ಯೋಜನೆ ಜಾರಿ ಮಾಡಿದ್ದಾರಾ? ಚನ್ನಪಟ್ಟಣ ಕ್ಷೇತ್ರದ ಮಹಾ ಜನತೆ ಜೊತೆ ನಾವಿದ್ದೇವೆ ಎಂದು ಹೇಳಲು ಈ ಎಲ್ಲಾ ನಾಯಕರ ಜತೆ ಬಂದಿದ್ದೇನೆ.

ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ. ರಾಜಕಾರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಯಾರೇ ಒಂದಾಗಲಿ, ನೀವು ನಿಮ್ಮ ಬದುಕಿನ ಬಗ್ಗೆ ಆಲೋಚಿಸಿ. ನೀವು ಮುಂದಿನ ಚುನಾವಣೆಯಲ್ಲಿ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಿ. ಇದಕ್ಕಾಗಿ ನೀವು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷದ ಜನರನ್ನು ಮನವೊಲಿಸಿ ಈ ಕೈಗೆ ಶಕ್ತಿ ನೀಡಬೇಕು.

ಮಾಧ್ಯಮ ಪ್ರತಿಕ್ರಿಯೆ:

ಜೆಡಿಎಸ್- ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಸೇರಲು ಮುಕ್ತ ಆಹ್ವಾನ:

ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;

“ರಾಜಕೀಯ ಸ್ಟಂಟ್ ಮಾಡಲು ಬಿಜೆಪಿ- ಜೆಡಿಎಸ್ ನಾಯಕರು ತಬ್ಬಾಡುತ್ತಿದ್ದಾರೆ. ಆದರೆ ಕಾರ್ಯಕರ್ತರ ವಯಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಗ್ಗಟ್ಟಾಗಿ ನೀವೆಲ್ಲಾ ಹೋಗಲು ಸಾಧ್ಯವಿಲ್ಲ. ಪ್ರಜ್ಞಾವಂತರಾಗಿ ಕೈ ಬಲಪಡಿಸಿ‌ ಎಂದು ಚನ್ನಪಟ್ಟಣದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕಿವಿ ಮಾತು ಹೇಳುತ್ತೇನೆ.

ನನಗೂ ಒಂದು ಕಾಲದಲ್ಲಿ ಚನ್ನಪಟ್ಟಣದಿಂದ ವಿಧಾನಸಭೆಗೆ ಸ್ಪರ್ಧೆ ಮಾಡಬೇಕು ಎನ್ನುವ ಆಸೆ ಇತ್ತು. ವಯಸ್ಸು ಯಾರಿಗೂ ಮುಂದಕ್ಕೆ ಹೋಗುವುದಿಲ್ಲ. ಮುಂದಿನ ಅವಧಿಯೂ ಸೇರಿ 10 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ.

ಜೆಡಿಎಸ್ ಮತ್ತು ಬಿಜೆಪಿಗೆ ಬಡವರ ಮೇಲೆ, ಗ್ಯಾರಂಟಿ ಯೋಜನೆಗಳ ಮೇಲೆ ನಂಬಿಕೆ ಇಲ್ಲ. ನಂಬಿಕೆ ಇದ್ದಿದ್ದರೆ ಚನ್ನಪಟ್ಟಣದ ಸಮಾವೇಶಕ್ಕೆ ಬಂದು ತಾಯಂದಿರ ಆಶೀರ್ವಾದ ಪಡೆಯುತ್ತಿದ್ದರು.

ಕಾಂಗ್ರೆಸ್ ಸರ್ಕಾರ ಪ್ರತಿಯೊಂದು ಕುಟುಂಬಕ್ಕೂ ಅನುಕೂಲ ಮಾಡಿಕೊಟ್ಟಿದೆ. ಸಮಾವೇಶಕ್ಕೆ ಬಂದಿರುವ ಪ್ರತಿಯೊಬ್ಬ ತಾಯಂದಿರ ಮುಖದಲ್ಲೂ ಮಂದಹಾಸ ಸಂತೋಷ ಕಾಣುತ್ತಿತ್ತು.

ಮೈತ್ರಿಯಿಂದ ಏನೂ ಪ್ರಯೋಜನವಾಗುವುದಿಲ್ಲ. ಇದನ್ನು ಅರಿತು ಎಲ್ಲಾ ಕಾರ್ಯಕರ್ತರು ನಮ್ಮ ಜೊತೆ ಕೈ ಜೋಡಿಸಬೇಕು. ಕಾರ್ಯಕರ್ತರು ನಮ್ಮ ಜೊತೆ ಕೈ ಜೋಡಿಸಿದರೆ ಎಲ್ಲಾ ಸಮೃದ್ದಿಯಾಗುತ್ತದೆ.

ಕಾಂಗ್ರೆಸ್ ಸರ್ಕಾರ ರೈತರ ಮತ್ತು ಬಡವರ ಪರವಾಗಿ ಕೆಲಸ ಮಾಡುತ್ತದೆ. ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಯಾರೇ ನಿಂತರೂ ಸುರೇಶ್ ಗೆಲುವು ನಿಶ್ಚಿತ:

ಮೈತ್ರಿ ಅಭ್ಯರ್ಥಿಯೂ ಅಂತಿಮಗೊಂಡಿಲ್ಲ, ಜೊತೆಗೆ ಸುರೇಶ್ ಅವರ ಸ್ಪರ್ಧೆಯ ಬಗ್ಗೆ ಕೇಳಿದಾಗ “ಡಿ.ಕೆ.ಸುರೇಶ್ ಈ ಭಾಗಕ್ಕೆ ಸಂಸದರಲ್ಲ ಬದಲಾಗಿ ಪಂಚಾಯತಿ ಸದಸ್ಯ. ಪ್ರತಿಯೊಂದು ಪಂಚಾಯತಿಗೂ ಭೇಟಿ ಮಾಡಿ ಜನರ ಮಧ್ಯೆ ಕೆಲಸ ಮಾಡುತ್ತಿದ್ದಾರೆ. ನನ್ನ ತಮ್ಮ ಎನ್ನುವುದು ಬೇರೆ ಮಾತು. ಆದರೆ ಸ್ವಾಭಿಮಾನದಿಂದ ಕೆಲಸ ಮಾಡುತ್ತಿದ್ದಾರೆ.

ಅನಿತಾ ಕುಮಾರಸ್ವಾಮಿ ಅವರನ್ನು ಈ ಹಿಂದೆ ಮೈತ್ರಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದರು. ಆಗ ಬಿಜೆಪಿಗರು ಜೆಡಿಎಸ್‌ಗೆ ಬೆಂಬಲ ನೀಡಿದ್ದರು. ಆದರೂ ಡಿ.ಕೆ.ಸುರೇಶ್ ಅವರು 1.20 ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದಿದ್ದರು.

ಇಂದು ಸಹ ಅದೇ ಸಂದರ್ಭ ಆದರೆ ಈ ಹಿಂದಿಗಿಂತ ದೊಡ್ಡ ಮಟ್ಟದಲ್ಲಿ ಕ್ಷೇತ್ರದ ತಾಯಂದಿರು ಕೈ ಹಿಡಿಯಲಿದ್ದಾರೆ. ಅವರ ಅಭ್ಯರ್ಥಿಗಳ ಬಗ್ಗೆ ನನಗೆ ಏನೂ ಗೊತ್ತೇ ಇಲ್ಲ. ಯಾರೇ ಬಂದರೂ ಡಿ.ಕೆ.ಸುರೇಶ್ ಅವರಿಗೆ ಸಮನಾಗಿ ನಿಲ್ಲಲು ಸಾಧ್ಯವಿಲ್ಲ. ಪಕ್ಷದ ಮೇಲೆ ಯಾರನ್ನಾದರೂ ನಿಲ್ಲಸಬಹುದೇ ಹೊರತು, ವ್ಯಕ್ತಿಯ ಮೇಲೆ ನಿಲ್ಲಿಸಲು ಸಾಧ್ಯವೇ ಇಲ್ಲ.

ಪ್ರತಿ ಮನೆಯ ಹೃದಯ, ಪ್ರತಿ ‌ಮನೆಯ ಮತ, ಪ್ರತಿ ಮನೆಯ ಮತದಾರರಿಗೂ ಕೈ ಹಾಕುತ್ತಿದ್ದೇನೆ. ಕೈ ಬಲ ಪಡಿಸಲು ಅವರೆಲ್ಲಾ ನಮ್ಮ ಹೃದಯದ ಒಳಗೆ ಬರಬೇಕು ಎಂದು ಕೆಲಸ ಮಾಡುತ್ತಿದ್ದೇವೆ.

ಕುಮಾರಸ್ವಾಮಿ ಯಾರ ಪರವಾಗಿ ಮಾತಾಡುತ್ತಿದ್ದಾರೆ?

ಬೆಂಗಳೂರು ಗ್ರಾಮಾಂತರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ ಎಂದಾಗ “ಜೆಡಿಎಸ್ ಎಲ್ಲಿದೆ ಈಗ. ಕುಮಾರಸ್ವಾಮಿ ಅವರು ಜೆಡಿಎಸ್ ಪರವಾಗಿ ಮಾತನಾಡುತ್ತಿದ್ದಾರಾ? ಇಲ್ಲ. ಅವರು ಬಿಜೆಪಿ ಪರವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯ ವಕ್ತಾರನಂತೆ ಮಾತನಾಡುತ್ತಿದ್ದಾರೆ.

ನಮ್ಮನ್ನು ನೂರು ಮಾತು ಬೈಯಲಿ, ಏನೂ ಬೇಕಾದರೂ ಹೇಳಲಿ. ನಮಗೆ ಬೇಸರವಿಲ್ಲ. ಜೆಡಿಎಸ್ ಬಲ ಪಡಿಸಿ ಎಂದು ಎಂದಾದರೂ ಹೇಳಿದ್ದಾರಾ? ಬಿಜೆಪಿ ಬಲಪಡಿಸಿ ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ಬಿಜೆಪಿ ಪರ ಮಾತನಾಡಲು ನೇಮಕ ಮಾಡಿಕೊಂಡಿದ್ದಾರೆ. ತೆನೆ ಹೊತ್ತ ಮಹಿಳೆಯನ್ನು ಮುದುರಿ ಹಾಕಿ ಹೊರಟು ಹೋದರು” ಎಂದರು.

ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಎನ್‌ಡಿಎಗೆ ಬೆಂಬಲ ನೀಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದಾಗ “ದೇವೇಗೌಡರು ಏನು ಹೇಳಿದ್ದಾರೆ. ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಅವರು ಹೇಳಿದ್ದನ್ನು ನೀವೆ ಮಾಧ್ಯಮಗಳಲ್ಲಿ ತೋರಿಸಿದ್ದೀರಿ” ಎಂದರು.

ಲೋಕಸಭಾ ಚುನಾವಣೆ ನಂತರ ಜೆಡಿಎಸ್ ಪಕ್ಷದ ಕತೆ ಮುಗಿಯಲಿದೆಯೇ ಎಂದಾಗ “ನನಗೆ ಗೊತ್ತಿಲ್ಲ, ಪಕ್ಷದ ಪರಿಸ್ಥಿತಿ ಬಗ್ಗೆ ಕುಮಾರಣ್ಣನನ್ನೇ ಕೇಳಬೇಕು. ದೊಡ್ಡ ಗೌಡರು ಕಷ್ಟಪಟ್ಟು ಪಕ್ಷ ಉಳಿಸಿಕೊಂಡಿದ್ದರು. ಈಗ ಇಂತಹ ಪರಿಸ್ಥಿತಿ ಬಂದಿತಲ್ಲ ಎಂದು ಬೇಸರವಾಗುತ್ತದೆ. ನಾವು ಮತ್ತು ಜೆಡಿಎಸ್ ಇಬ್ಬರೇ ಜಗಳವಾಡುತ್ತಿದ್ದೆವು” ಎಂದು ಹೇಳಿದರು.

ಡಾ.ಸಿ.ಎನ್.ಮಂಜುನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆಯೇ ಎಂದಾಗ “ಯಾರನ್ನಾದರೂ ಚುನಾವಣೆಗೆ ನಿಲ್ಲಿಸಲಿ. ನಮಗೆ ಮಂಜುನಾಥ್, ಕುಮಾರಸ್ವಾಮಿ, ಅವರ ಧರ್ಮಪತ್ನಿ, ದೊಡ್ಡ ಗೌಡರು, ನಿಖಿಲ್ ಎಲ್ಲರ ಬಗ್ಗೆಯೂ ಗೌರವಿದೆ.” ಎಂದರು.

WhatsApp Group Join Now
Telegram Group Join Now
Back to top button