ಬೆಳಗಾವಿ ಜನತೆಗೆ ಗುಡ್ ನ್ಯೂಸ್
ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ರಾಷ್ಟ್ರೀಯ ಹೆದ್ದಾರಿಗಳ ಕಚೇರಿಯ ವಲಯ ವಿಭಾಗ ಇನ್ನು ಬೆಳಗಾವಿಯಲ್ಲೂ ಕಾರ್ಯನಿರ್ವಹಿಸಲಿದೆ.
ಧಾರವಾಡದ ಉತ್ತರ ಮತ್ತು ಕಲಬುರ್ಗಿಯ ಈಶಾನ್ಯ ವಲಯ ಇನ್ನು ಬೆಳಗಾವಿಯ ವಲಯ ಕಚೇರಿ ವ್ಯಾಪ್ತಿಗೆ ಸೇರಲಿವೆ. ಈ ಮೂಲಕ ಬೆಳಗಾವಿಗೆ ಮಹತ್ವದ ಕಚೇರಿಯೊಂದು ಸಿಕ್ಕಂತಾಗಿದೆ.
ಈ ಕುರಿತು ಜ.9ರಂದು ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಧಾರವಾಡದ ಉತ್ತರ ಮತ್ತು ಕಲಬುರ್ಗಿಯ ಈಶಾನ್ಯ ವಲಯದ ಜಿಲ್ಲೆಗಳ ಭೌಗೋಳಿಕ ಕಾರ್ಯವ್ಯಾಪ್ತಿ ಸೇರಿಸಿ ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಮುಖ್ಯಇಂಜಿನಿಯರ್ ಕಚೇರಿ ಸೃಜಿಸಲು ನಿರ್ದೇಶನ ನೀಡಲಾಗಿದೆ. ವಿವಿಧ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 37 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೂತನ ವಲಯ ಕಚೇರಿಗೆ ಸ್ಥಳಾಂತರ ಅಥವಾ ಮರು ಹೊಂದಾಣಿಕೆ ಮಾಡಲು ಸೂಚನೆ ನೀಡಲಾಗಿದೆ.
ನೂತನ ಕಚೇರಿಯ ಉದ್ದೇಶ:
ಕೇಂದ್ರ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಪ್ರತಿವರ್ಷ ಉತ್ತಮ ಮೊತ್ತದ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಿದರೂ ಕಾಮಗಾರಿಗಳ ಅನುಷ್ಠಾನನದಲ್ಲಿ ಸಾಕಷ್ಟು ವಿಳಂಭವಾಗುತ್ತಿದ್ದು, ರಾಜ್ಯಕ್ಕೆ ದೊರೆತ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಕಚೇರಿ ಬೆಂಗಳೂರಿನಲ್ಲಿ ಮಾತ್ರ ಇರುವುದು ಕೂಡ ಅನುಷ್ಠಾನ ಹಿನ್ನೆಡೆ ಕಾರಣ. ಹಾಗಾಗಿ, ಹೆದ್ದಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಉತ್ತರ ಮತ್ತು ಈಶಾನ್ಯ ವಲಯ ಒಳಗೊಂಡಂತೆ ಬೆಳಗಾವಿಯಲ್ಲಿ ವಲಯ ಕಚೇರಿ ಸ್ಥಾಪನೆಗೆ ಲೋಕೋಪಯೋಗಿ ಇಲಾಖೆ ಅಧೀನ ಕಾರ್ಯದರ್ಶಿ ರಘುನಾಥಗೌಡ ಪಾಟೀಲ ಆದೇಶಿಸಿದ್ದಾರೆ.
ರಾಜ್ಯದಲ್ಲಿ ದಕ್ಷಿಣ ಮತ್ತು ಕೇಂದ್ರ ವ್ಯಾಪ್ತಿಗೆಯಲ್ಲಿ 2,221.96 ಕಿಮೀ ಮತ್ತು ಉತ್ತರ ಹಾಗೂ ಈಶಾನ್ಯ ವ್ಯಾಪ್ತಿಯಲ್ಲಿ 1,607.40 ಕಿಮೀ ರಸ್ತೆ ಉದ್ದ ಹೊಂದಿದ್ದು, ಇನ್ನು ಧಾರವಾಡ ವಲಯ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ ಮತ್ತು ಕಲಬುರ್ಗಿ ವಲಯದ ಬೀದರ, ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು, ವಿಜಯನಗರ,ಬಳ್ಳಾರಿ ಭೌಗೋಳಿಕ ಕಾರ್ಯ ವ್ಯಾಪ್ತಿಯು ಬೆಳಗಾವಿ ವಲಯ ಕಚೇರಿಗೆ ಸೇರಲಿದೆ.