ಹರ್ ಘರ್ ತಿರಂಗಾ ಮಾಡಿದವರು ಈಗ ತಿರಂಗಾ ಮರೆತರಾ? ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ
“ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ಬಹುತೇಕ ವಿಲೀನ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಮಂಗಳವಾರ ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರ ಜತೆ ಪ್ರತಿಭಟನೆ ಮಾಡಿದ ಬಗ್ಗೆ ಮಾಧ್ಯಮದವರು ಕೇಳಿದಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ;
“ಇದು ಅವರ ಪಕ್ಷದ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ. ಅವರು ಯಾವ ಬಣ್ಣದ ಶಾಲನ್ನಾದರೂ ಧರಿಸಲಿ. ಬಿಜೆಪಿಗೆ ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲ. ಅಲ್ಲಿ ನೆಲೆ ಕಂಡುಕೊಳ್ಳಲು ಇವರಿಬ್ಬರಲ್ಲಿ ಯಾರು ಯಾರನ್ನು ನುಂಗುತ್ತಾರೋ ಗೊತ್ತಿಲ್ಲ.”
ಮಂಡ್ಯದಲ್ಲಿ ಕೋಮು ಗಲಭೆ ಪ್ರಯೋಗ:
ಮಂಡ್ಯದಲ್ಲಿ ಕೇಸರಿ ಧ್ವಜದ ವಿವಾದದ ಬಗ್ಗೆ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಶಾಂತಿ ಕದಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎಂದು ಮುಗ್ಧ ಹಳ್ಳಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ನಮ್ಮ ಭಾಗದ ಎಲ್ಲಾ ಜಾತಿ ಹಾಗೂ ಧರ್ಮದ ಜನರು ಬಹಳ ಸೌಹಾರ್ದತೆಯಿಂದ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ನಮ್ಮ ಕಡೆ ಊರ ಹಬ್ಬ ಮಾಡುವಾಗ ಯಾವರೀತಿ ಮಾಡುತ್ತಾರೆ ಎಂದು ನೀವು ನೋಡಿದ್ದೀರಲ್ಲಾ? ಈಗ ಅವರು ಹೊಸ ಪ್ರಯೋಗ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಕಾನೂನುಬಾಹಿರವಾಗಿ ಕೇಸರಿ ಧ್ವಜ ಹಾರಿಸಿರುವ ಬಗ್ಗೆ ಕೇಳಿದಾಗ, “ಪಂಚಾಯ್ತಿಯವರು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಮಾತ್ರ ಹಾರಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ರಾಷ್ಟ್ರ ಧ್ವಜ ಹಾಗೂ ಕನ್ನಡ ಬಾವುಟಕ್ಕೆ ಗೌರವ ನೀಡಬೇಕು. ಕನ್ನಡದಲ್ಲೇ ನಾಮಫಲಕ ಇರಬೇಕು ಎಂದೂ ನಾವು ಕಾನೂನು ಮಾಡಿದ್ದೇವೆ. ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದ್ದೆವು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಬಹುದಾಗಿತ್ತು, ಆದರೆ ಅವರು ವಿಧಾನ ಮಂಡಲ ಅಧಿವೇಶನದಲ್ಲೇ ಜಾರಿ ಮಾಡಲು ಹೇಳಿದ್ದಾರೆ. ರಾಷ್ಟ್ರ ಧ್ವಜ, ಸಂವಿಧಾನಕ್ಕೆ ಏನು ಗೌರವ ನೀಡಬೇಕೋ ಆ ಗೌರವ ನೀಡುವುದು ನಮ್ಮ ಬದ್ಧತೆ. ಜನ ಎಲ್ಲವನ್ನು ಗಂಭೀರವಾಗಿ ಗಮನಿಸುತ್ತಿದ್ದಾರೆ” ಎಂದು ತಿಳಿಸಿದರು.
ಹರ್ ಘರ್ ತಿರಂಗಾ ಮಾಡಿದವರು ಈಗ ತಿರಂಗಾ ಮರೆತರಾ?:
ಬಿಜೆಪಿಯವರು ಮನೆ, ಮನೆಗೆ ಹನುಮಧ್ವಜ ಹಂಚುವ ಬಗ್ಗೆ ಕೇಳಿದಾಗ, “ಬೇಡ ಎಂದು ಹೇಳಿದವರು ಯಾರು? ಬಿಜೆಪಿಯವರು ಹರ್ ಘರ್ ತಿರಂಗಾ ಎಂದು ಪ್ರಚಾರ ಮಾಡಿದ್ದರು. ಈಗ ಆ ತಿರಂಗಾವನ್ನು ಯಾಕೆ ಮರೆತಿದ್ದಾರೆ? ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ತಿರಂಗಾ ಬದಲಿಗೆ ಕೇಸರಿ ಧ್ವಜವನ್ನೇ ಕಾನೂನು ಮೂಲಕ ತರಲಿ, ಬೇಡ ಎಂದವರು ಯಾರು?” ಎಂದು ಛೇಡಿಸಿದರು.
ಸೋನಿಯಾ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ, “ಇದೆಲ್ಲವೂ ಊಹಾಪೋಹ” ಎಂದು ತಿಳಿಸಿದರು.
ಪ್ರಣಾಳಿಕೆಯಲ್ಲಿ ಶಿಕ್ಷಕರಿಗೆ ಕೊಟ್ಟಿರುವ ಭರವಸೆ ಈಡೇರಿಸುತ್ತೇವೆ:
ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರ ನಾಮಪತ್ರಿಕೆ ಸಲ್ಲಿಕೆ ವೇಳೆ ಪ್ರತಿಕ್ರಿಯೆ ನೀಡಿದ ಅವರು, “ಶಿಕ್ಷಕರ ಬದುಕಿನ ಬಗ್ಗೆ ನಮ್ಮ ಸರ್ಕಾರ ಕಾಳಜಿ ವಹಿಸಲಿದೆ. ಚುನಾವಣೆಗೂ ಮುನ್ನ ನಾವು ಶಿಕ್ಷಕರಿಗೆ ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಬಗ್ಗೆ ಈಗ ಮಾತನಾಡುವುದಿಲ್ಲ. ಒಪಿಎಸ್ ಸೇರಿದಂತೆ ಅನೇಕ ವಿಚಾರವಾಗಿ ನಾವು ಈಗಾಗಲೇ ನುಡಿದಂತೆ ನಡೆದಿದ್ದೇವೆ. ಶಿಕ್ಷಕ ವೃಂದದವರು ವಿದ್ಯಾವಂತರು, ಪ್ರಜ್ಞಾವಂತರಿದ್ದಾರೆ. ನಮ್ಮ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಈ ಚುನಾವಣೆ ಎದುರಿಸುತ್ತೇವೆ. ನಮ್ಮ ಅಭ್ಯರ್ಥಿ ಅನುಭವಿ. ತಮ್ಮ ಸ್ಥಾನವನ್ನು ತ್ಯಾಗ ಮಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಅವರಿಗೆ ನಾವು ಬೆಂಬಲ ನೀಡುತ್ತಿದ್ದೇವೆ” ಎಂದು ತಿಳಿಸಿದರು.