ಬೆಳಗಾವಿಯಲ್ಲಿ ನಕಲಿ ನೋಟು ಜಾಲ ಐವರು ಅರೆಸ್ಟ್ : ಕಾರು ಸೇರಿದಂತೆ 52,3900 ರೂ. ವಶಪಡಿಸಿಕೊಳ್ಳಲಾಗಿದೆ
ಗೋಕಾಕ-ಬೆಳಗಾವಿ ರಸ್ತೆಯ ಕಡಬಗಟ್ಟಿ ಗ್ರಾಮದ ಮೂಲಕ ಸಾಗುವ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದನ್ನು ತಪಾಸಣೆ ಮಾಡಿದಾಗ ₹100, ₹500 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದು, ಐವರನ್ನು ಬಂಧಿಸಲಾಗಿದೆ.
ಗಸ್ತು ಪೊಲೀಸರು ನಡೆಸಿದ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. 100 ಹಾಗೂ 500 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ.
ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಮೂಡಲಗಿ ತಾಲ್ಲೂಕಿನ ಅರಭಾವಿಯ ಅನ್ವರ ಮೊಹ್ಮದ ಸಲೀಂ ಯಾದವಾಡ, ಮಹಾಲಿಂಗಪೂರದ ಸದ್ದಾಂ ಮುಸಾ ಯಡಹಳ್ಳಿ, ರವಿ ಚನ್ನಪ್ಪ ಹ್ಯಾಗಡಿ, ದುಂಡಪ್ಪ ಮಹಾದೇವ ವನಶೆಣವಿ ಮತ್ತು ವಿಠ್ಠಲ ಹಣಮಂತ ಹೊಸಕೋಟಿ ಬಂಧಿತ ಆರೋಪಿಗಳು.
ಈ ಬಗ್ಗೆ ಮಾತನಾಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುವ ಹಾಗೂ ಮನಿ ಡಬಲಿಂಗ್ ಮಾಡಿ ಜಿಲ್ಲೆಯ ಹಲವೆಡೆ ಅಸಲಿ ನೋಟು ಎಂದು ನಂಬಿಸಿ ಮೋಸ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಂದ ಪ್ರಿಂಟ್ ತೆಗೆಯಲು ಉಪಯೋಗಿಸಿದ ಕಂಪ್ಯೂಟರ್, ಸಿಪಿಯು, ಪ್ರಿಂಟರ್, ಸ್ಕ್ರೀನಿಂಗ್ ಬೋರ್ಡ್, ಪೇಂಟ್, ಶೈನಿಂಗ್, ಸ್ಟೀಕರ್, ಡಿಕೋಟಿಂಗ್ ಪೌಡರ್, ಪ್ರಿಂಟಿಂಗ್ ಪೇಪರ್, ಕಟರ್ ಬ್ಲೇಡ್ ಗಳು, ಆರು ಮೊಬೈಲ್, ಒಂದು ಬಿಳಿ ಬಣ್ಣದ ಕಾರು ಸೇರಿದಂತೆ 52,3900 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.