ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳನ್ನು ಗೆಲ್ಲುತ್ತೇವೆ – ಸಚಿವ ಸತೀಶ್ ಜಾರಕಿಹೊಳಿ
ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಿಳಿಸಿ-ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಗೆಲುವು ಸಾಧ್ಯ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲ್ಲಬೇಕಾಗಿದ್ದು, ಗೆಲ್ಲಿಸುವ ಪ್ರಯತ್ನವನ್ನು ನಿವೆಲ್ಲರೂ ಕೂಡಿ ಒಗ್ಗಟ್ಟಾಗಿ ಮಾಡಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಜಿವೇಶ್ವರ್ ಭವನದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು, ಕಾಂಗ್ರೆಸ್ ಪಕ್ಷವನ್ನೇ ಯಾಕೆ ಗೆಲ್ಲಿಸಬೇಕೆಂದರೆ, ಕಾಂಗ್ರೆಸ್ ಪಕ್ಷ ನುಡೆದಂತೆ ನಡೆದಿದೆ. ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಹಾಗಾಗಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಿಳಿಸುವ ಕೆಲಸವಾಗಬೇಕೆಂದು ಕರೆ ನೀಡಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಕಡಿಮೆ ಇದೆ. ಅದಕ್ಕಾಗಿಯೇ ನಾವು ಪ್ರತಿಯೊಂದು ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಆದ್ಯತೆ ನೀಡುತ್ತಿದ್ದು, ದಕ್ಷಿಣ ಮತಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಇಲ್ಲಿನ ಮೂಂಚೂಣಿ ಘಟಕದ ಕಾರ್ಯಕರ್ತರು ಮಾಡಬೇಕು. ದಕ್ಷಿಣ ಕ್ಷೇತ್ರದಿಂದ 50 ರಿಂದ 60 ಸಾವಿರ ಲಿಡ್ ಕೊಟ್ಟರೆ ಕಾಂಗ್ರೆಸ್ ಪತಾಕೆ ಹಾರುವುದು ನಿಚ್ಛಿತ. ಯಾವುದೇ ಚುನಾವಣೆ ಇರಲಿ, ಗೆಲುವಿಗೆ ಒಗ್ಗಟ್ಟು ಮುಖ್ಯ. ಹೀಗಾಗಿ ಮೂಂಚೂಣಿ ಘಟಕದ ಕಾರ್ಯಕರ್ತರು ದಕ್ಷಿಣ ಮತಕ್ಷೇತ್ರದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ತಿಳಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ರಾಜ್ಯದಲ್ಲಿ 136 ಸೀಟು ಗೆಲುವು ಸಾಧಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಗೆಲುವಿಗೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಬೆಳಗಾವಿ, ಚಿಕ್ಕೋಡಿ ಲೋಕಸಭೆಗೆ ಯಾರೇ ಅಭ್ಯರ್ಥಿಯಾದರೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ. ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸೋಣ ಎಂದರು.
ಶಾಸಕ ರಾಜು(ಆಸೀಫ್) ಸೇಠ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದರೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ. ಹೀಗಾಗಿ ಕಾರ್ಯಕರ್ತರು ತಳಮಟ್ಟದಿಂದ ಜವಾಬ್ದಾರಿಯುತ್ತವಾಗಿ ಕಾರ್ಯನಿರ್ವಹಿಸಬೇಕು. ಲೋಕಸಭಾ ಚುನಾವಣಾ ಕಾವು ಏರಿದೆ. ಮತದಾರರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ವಿಶ್ವಾಸದಿಂದ ಮತಚಲಾಯಿಸಲು ಕೆಲಸಮಾಡಬೇಕು. ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಬೇಕು ಎಂದರು.
ಬೆಳಗಾವಿ ಲೋಕಸಭಾ ಟಿಕೆಟ್ ಆಕಾಂಕ್ಷಿ ಮೃಣಾಲ್ ಹೆಬ್ಬಾಳಕರ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲು ಒಪ್ಪಿಕೊಳ್ಳಬೇಕಾಯಿರು. ಈ ಚುನಾವಣೆಯಲ್ಲಿ ಬಹು ಅಂತರದಿಂದ ಗೆಲುವು ಸಾಧಿಸೋಣ. ಅದಕ್ಕೆ ಮತದಾರರು ಆಶೀರ್ವಾದ ಮಾಡಬೇಕೆಂರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹನಮನ್ನವರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ ಜೆ., ಕಾಂಗ್ರೆಸ್ ಮುಖಂಡರಾದ ಪರಶುರಾಮ ಧಗೆ, ಲಿಂಗರಾಜ ಕದಂಬ, ರಾಜು ಕೌಜಲಗಿ, ದಲಿತ ಮುಖಂಡ ಮಲ್ಲೇಶ ಚೌಗಲೆ, ಮಹಿಳಾ ಮುಖಂಡರಾದ ಪ್ರಭಾವತಿ ಮಾಸ್ತರವಾಡಿ, ಲಕ್ಷ್ಮೀ ಲೋಕುರ, ಕಲ್ಪನಾ ಜೋಶಿ ಸೇರಿದಂತೆ ಸಾವಿರಾರು ಕಾರ್ಯಕರ್ತರಿದ್ದರು.