ತಂದೆ ಸಾವಿನ ಬಗ್ಗೆ ಅನುಮಾನ: ಕುಟುಂಬದ ವಿರುದ್ಧವೇ ದೂರು ನೀಡಿದ ಮಗಳು; ಅಂತ್ಯಕ್ರಿಯೆ ನೆರವೇರಿಸಿದ್ದ ಶವತೆಗೆದು ಮರಣೋತ್ತರ ಪರೀಕ್ಷೆ
ಬೆಳಗಾವಿ: ಫೈನಾನ್ಸ್ ಉದ್ಯಮಿಯಾಗಿದ್ದ ತಂದೆಯ ಸಾವು ಮಗಳಿಗೆ ಅನುಮಾನಕ್ಕೆ ಕಾರಣವಾಗಿದ್ದು, ತಂದೆ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕುಟುಂಬದ ವಿರುದ್ಧವೇ ಮಗಳು ದೂರು ನೀಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ತಂದೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಗಳು ದೂರು ನೀಡಿರುವ ಹಿನ್ನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಖಾಸಗಿ ಫೈನಾನ್ಸ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ 47 ವರ್ಷದ ಸಂತೋಷ್ ಪದ್ಮಣ್ಣವರ್ ಅಕ್ಟೋಬರ್ 9ರಂದು ಮುಂಜಾನೆ ಮನೆಯಲ್ಲಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದರು. ಸಹಜ ಸಾವು ಎಂದು ಪತ್ನಿ ಹಾಗೂ ಇಬ್ಬರು ಪುತ್ರರು ಕುಟುಂಬದವರು ಸೇರಿ ಅ.10ರಂದು ಅಂತ್ಯಕ್ರಿಯೆ ನೆರವೇರಿಸಿದ್ದರು. ಎರಡು ದಿನಗಳ ಬಳಿಕ ಮಗಳು ಸಂಜನಾ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಳು. ಈ ವೇಳೆ ಬಂದ ತಾಯಿ ಮಗಳನ್ನು ಗದರಿ ಸ್ನಾನಕ್ಕೆ ಹೋಗು ಎಂದಿದ್ದಾರೆ. ಮಗಳು ಸ್ನಾನ ಮುಗಿಸಿ ವಾಪಾಸ್ ಬರುವಷ್ಟರಲ್ಲಿ ಸಿಸಿಟಿವಿ ಫುಟೇಜ್ ಡಿಲಿಟ್ ಆಗಿದೆ. ತಾಯಿ ಉಮಾ ಸಿಸಿಟಿವಿ ಫುಟೇಜ್ ಡಿಲಿಟ್ ಮಾಡಿದ್ದು, ಮಗಳ ಅನುಮಾನಕ್ಕೆ ಕಾರಣವಾಗಿದೆ. ಇದಕ್ಕೆ ತಾಯಿಯನ್ನು ಪ್ರಶ್ನಿಸಿದರೆ ನಿನ್ನ ಅಣ್ಣಂದಿರು ಸಿಸಿಟಿವಿ ಫುಟೇಜ್ ಡಿಲಿಟ್ ಮಾಡಿದ್ದಾರೆ ಎಂದಿದ್ದಾರೆ. ಅವರನ್ನು ಕೇಳಿದರೆ ಅಮ್ಮ ಹೇಳಿದ್ದಕ್ಕೆ ಮಾಡಿದ್ದಾಗಿ ಸಮಜಾಯಿಷಿ ಕೊಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಮಗಳು ಸಂಜನಾ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಸಂತೋಷ್ ಪದ್ಮಣ್ಣವರ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಪೊಲಿಸರು ಮತ್ತೊಮ್ಮೆ ಮುಂದಾಗಿದ್ದಾರೆ.