ಬೆಳಗಾವಿಯಲ್ಲಿ ಪ್ರವಾಹ: ಹಲವು ಗ್ರಾಮಗಳು ಜಲಾವೃತ,
ಬೆಳಗಾವಿ, ಜುಲೈ 28: ಜಿಲ್ಲೆಯಲ್ಲಿ 7 ನದಿಗಳಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದ ಜನರು ಅತಂತ್ರವಾಗಿದ್ದಾರೆ. ಘಟಪ್ರಭಾ ನದಿ (Ghataprabha River) ಸೃಷ್ಟಿಸಿರುವ ಅವಾಂತರಕ್ಕೆ ಈಗ ಜನ ತತ್ತರಿಸಿ ಹೋಗಿದ್ದಾರೆ. ತನ್ನ ಪಾತ್ರವನ್ನ ಬಿಟ್ಟು ಹರಿಯುತ್ತಿರುವ ನದಿ ಊರಿಗೆ ಊರನ್ನೇ ತನ್ನ ಒಡಲಿಗೆ ಹಾಕಿಕೊಂಡಿದೆ. ಸೇತುವೆ, ದೇವಸ್ಥಾನ, ಬ್ಯಾಂಕ್ ಮತ್ತು ಮನೆಗಳು ಹೀಗೆ ಎಲ್ಲವೂ ಜಲಾವೃತವಾಗಿವೆ.
ಪ್ರವಾಹದಿಂದ ಬಿದಿಗೆ ಬಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು
ಗೋಕಾಕ್, ನಿಪ್ಪಾಣಿ, ಅಥಣಿ, ಮೂಡಲಗಿ, ಹುಕ್ಕೇರಿ, ಕಾಗವಾಡ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದ ಎಫೆಕ್ಟ್ ಉಂಟಾಗಿದೆ. ಜಿಲ್ಲೆಯಲ್ಲಿ ಈವರೆಗೆ 41 ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದ ಜನರು ಅತಂತ್ರಕೊಳಗಾಗಿದ್ದು, ಪ್ರವಾಹಕ್ಕೆ ಸಿಲುಕಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ. ಮೂರುವರೆ ಸಾವಿರ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಲಾಗುತ್ತಿದೆ. ಸಂಬಂಧಿಕರ ಮನೆ, ಜಮೀನಿನಲ್ಲಿ 1800 ಸಂತ್ರಸ್ತರು ಸುರಕ್ಷಿತವಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ ಈಗಾಗಲೇ 20 ಕಾಳಜಿ ಕೇಂದ್ರ ತೆರೆಯಲಾಗಿದೆ.