BIG NEWS: ಮಹಿಳೆ ಬೆದರಿಸಿ ಹಣ ವಸೂಲಿ; ನಾಲ್ವರು ಸಂಚಾರಿ ಪೊಲೀಸರು ಸಸ್ಪೆಂಡ್
ಬೆಂಗಳೂರು: ಪ್ರಯಾಣಿಕರನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಟ್ರಾಫಿಕ್ ಪೊಲೀಸರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ.
ಮಹಿಳೆಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಸಂಚಾರಿ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಜೀವನ್ ಭೀಮಾ ನಗರ ಸಂಚಾರ ಠಾಣೆ ಇನ್ಸ್ ಪೆಕ್ಟರ್ ವೆಂಕಟಾಚಲಪತಿ, ಹೆಡ್ ಕಾನ್ಸ್ ಟೇಬಲ್ ಗಳಾದ ಗಿರೀಶ್, ಹುಚ್ಚುಸಾಬ್ ಹಾಗೂ ಕಾನ್ಸ್ ಟೇಬಲ್ ಬಸಪ್ಪ ಅಮಾನತುಗೊಂಡವರು.
ಕಳೆದವಾರ ಇಸ್ರೋ ಜಂಕ್ಷನ್ ಬಳಿ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವುದಾಗಿ ಆರೋಪಿಸಿ ಮಹಿಳೆಯನ್ನು ಬೆದರಿಸಿ 8000 ರೂಪಾಯಿ ಸುಲಿಗೆ ಮಾಡಿದ ಆರೋಪ ಸಂಚಾರಿ ಪೊಲೀಸರ ವಿರುದ್ಧ ಕೇಳಿಬಂದಿತ್ತು. ಈ ಬಗ್ಗೆ ಮಹಿಳೆಯ ತಂದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಪೂರ್ವ ಸಂಚಾರಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಇಲಖೆ ಮಟ್ಟದ ತನಿಖೆ ನಡೆಸಿ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.