ಲೋಕಸಬಾ ಚುನಾವಣೆಯ 17 ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ: ಸಭೆಯಲ್ಲಿ ವ್ಯಕ್ತವಾದ ಇತರೆ ಅಭಿಪ್ರಾಯಗಳು, ನೀಡಿದ ಸೂಚನೆಗಳು…
ಬೆಂಗಳೂರು: ಲೋಕಸಬಾ ಚುನಾವಣೆಯ ಕಾಂಗ್ರೆಸ್ 2ನೇ ಪಟ್ಟಿ ಪ್ರಕಟವಾಗಿದೆ.
ಬಾಗಲಕೋಟೆ ಸಂಯುಕ್ತ ಪಾಟೀಲ್, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮನ್ಸೂರ್ ಅಲಿ ಖಾನ್, ವಿನೋದ್ ಹಸೂಟಿ ಧಾರವಾಡ, ಚಿತ್ರದುರ್ಗ ಚಂದ್ರಪ್ಪ, ಉಡುಪಿ ಜಯಪ್ರಕಾಶ್ ಹೆಗ್ಡೆ, ದಕ್ಷಿಣ ಕನ್ನಡ ಪದ್ಮರಾಜ್, ರಾಯಚೂರು ಕುಮಾರನಾಯ್ಕ್, ಬೆಂಗಳೂರು ದಕ್ಷಿಣ ಸೌಮ್ಯ ರೆಡ್ಡಿ, ಉತ್ತರ ಕನ್ನಡ ಅಂಜಲಿ ನಿಂಬಾಳ್ಕರ್, ಮೈಸೂರು ಲಕ್ಷ್ಮಣ್ ,ಬೆಂಗಳೂರು ಉತ್ತರ ರಾಜೀವ್ ಗೌಡ, ಬೀದರ್ ಸಾಗರ್ ಖಂಡ್ರೆ, ಬೆಳಗಾವಿ ಮೃಣಾಳ್ ಹೆಬ್ಬಾಳ್ಕರ್, ಚಿಕ್ಕೋಡಿ ಪ್ರಿಯಾಂಕಾ ಜಾರಕಿಹೊಳಿ, ಗುಲಬರ್ಗಾ ರಾಧಾಕೃಷ್ಣ, ಕೊಪ್ಪಳ ರಾಜಶೇಖರ ಹಿಟ್ನಾಳ, ದಾವಣಗೆರೆ ಪ್ರಭಾ ಮಲ್ಲಿಕಾರ್ಜುನ.
ಗುರುವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಬಹುತೇಕ ಎಲ್ಲರೂ ಭಾಗವಹಿಸಿದ್ದರು.
ನಮಗೆ ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಉತ್ತಮ ಅವಕಾಶವಿದೆ. ಹೀಗಾಗಿ ಜನರ ನಡುವೆ ಗಟ್ಟಿಯಾಗಿ ನಿಂತು ಸಮರ್ಥವಾಗಿ ಚುನಾವಣೆ ಎದುರಿಸಿ ಗೆದ್ದು ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣೆ ಸಂಬಂಧದ ಸಿದ್ದತೆಗಳನ್ನು ತೀವ್ರಗೊಳಿಸುವ ಸಂಬಂಧ ಸಚಿವರು, ಹಿರಿಯ ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ನಾವು 136 ಸ್ಥಾನ ಗೆಲ್ಲುತ್ತೀವಿ ಎಂದು ಯಾರೂ ಹೇಳಿರಲಿಲ್ಲ. ಆದರೆ ನನಗೆ ವೈಯುಕ್ತಿಕವಾಗಿ ಜನರ ಭಾವನೆ ಗೊತ್ತಿತ್ತು. ಹೀಗಾಗಿ 135 ಗೆದ್ದೇ ಗೆಲ್ತೀವಿ ಎಂದು ನಾವು ಧೈರ್ಯವಾಗಿ ಚುನಾವಣೆಗೆ ಮೊದಲೇ ಹೇಳಿದ್ದೆವು. ಲೋಕಸಭೆಯಲ್ಲೂ ನಮಗೆ 20 ಸ್ಥಾನದವರೆಗೂ ಖಚಿತವಾಗಿ ಗೆಲ್ಲುವ ಅವಕಾಶಗಳಿವೆ ಎಂದು ಖಚಿತವಾಗಿ ನುಡಿದರು.
ರಾಜ್ಯದಲ್ಲಿ ಮಾತ್ರವಲ್ಲ, ದೇಶದ ನಾನಾ ಕಡೆಗಳಲ್ಲಿ ಬಿಜೆಪಿ ವಿರುದ್ಧವಾದ ಅಲೆ ತೀವ್ರವಾಗಿದೆ. ದೇಶದ ಭವಿಷ್ಯಕ್ಕೆ ಈ ಸರ್ಕಾರ ಬದಲಾಗಲೇಬೇಕಿದೆ ಎನ್ನುವ ಅಭಿಪ್ರಾಯ ವಿದ್ಯಾವಂತ ಸಮುದಾಯದಲ್ಲಿದೆ. ಹೀಗಾಗಿ ನಾವು 20 ಸ್ಥಾನ ಗೆಲ್ಲಬಹುದು. ಅಂಡರ್ ಕರೆಂಟ್ ಏನಿದೆ ಎನ್ನುವುದು ನಮಗೆ ಗೊತ್ತಾಗಿದೆ ಎಂದರು.
ನಮ್ಮ ಗ್ಯಾರಂಟಿಗಳ ಬಗ್ಗೆ ನಾಡಿನ ಜನತೆಗೆ, ನಮ್ಮ ಹೆಣ್ಣು ಮಕ್ಕಳಿಗೆ, ತಾಯಂದರಿಗೆ ಧನ್ಯತೆ ಇದೆ. ಇವರ್ಯಾರೂ ನಮ್ಮ ಕೈ ಬಿಡಲ್ಲ. ಪ್ರತೀ ದಿನ ಪ್ರತೀ ತಿಂಗಳು ನಾಡಿನ ಮನೆ ಮನೆಗೆ ಸರ್ಕಾರದ ಗ್ಯಾರಂಟಿಗಳ ಫಲ ಹೆಣ್ಣು ಮಕ್ಕಳ ಮಡಿಲು ಸೇರುತ್ತಿದೆ. ಈ ಧನ್ಯತೆ ನಮ್ಮ ನಾಡಿನ ತಾಯಂದಿರು ಮತ್ತು ಹೆಣ್ಣು ಮಕ್ಕಳ ಹೃದಯದಲ್ಲಿದೆ. ಇವರಿಗೆ ಕೈ ಮುಗಿದು ಮತ ಕೇಳಿ ಎಂದು ಸಂಭಾವ್ಯ ಅಭ್ಯರ್ಥಿಗಳಿಗೆ ಸಲಹೆ ನೀಡಿದರು.
ರಾಜ್ಯದ ತೆರಿಗೆ ದುಡ್ಡು ಪಡೆದ ರಾಜ್ಯಕ್ಕೆ ಯಾವ ಪ್ರಮಾಣದಲ್ಲಿ ವಂಚಿಸಿದೆ ಎನ್ನುವ ನೋವು ನಮ್ಮ ನಾಡಿನ ಜನರಿಗೆ ಇದೆ. ರೈತರಿಗೆ ಇದೆ. ಕೇಂದ್ರದ ಭೀಕರ ಅನ್ಯಾಯದ ನಡುವೆಯೂ ರಾಜ್ಯ ಆರ್ಥಿಕವಾಗಿ ಪ್ರಗತಿ ಮಾಡಿರುವುದು, ಸಾಧನೆ ಆಗಿರುವುದರ ಬಗ್ಗೆ ನೇರ ಮತ್ತು ಪರೋಕ್ಷ ತೆರಿಗೆದಾರರೆಲ್ಲರನ್ನೂ ಮಾತಾಡಿಸಿ ಮನವರಿಕೆ ಮಾಡಿ ಎಂದು ಸೂಚಿಸಿದರು.
ಸಭೆಯಲ್ಲಿ ವ್ಯಕ್ತವಾದ ಇತರೆ ಅಭಿಪ್ರಾಯಗಳು, ನೀಡಿದ ಸೂಚನೆಗಳು…
ಪ್ರತಿ ಮತದಾರರ ಮನೆ ಮತ್ತು ಮನಸ್ಸು ತಲುಪಲು ಪ್ಲಾನ್ ಮಾಡಿ
ಕೇಂದ್ರ ಸರ್ಕಾರದ ಸುಳ್ಳು, ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿಗೆ ವಂಚಿಸುವ ಬಿಜೆಪಿ ಷಡ್ಯಂತ್ರವನ್ನು ಜನರಿಗೆ ಸಮಾಧಾನದಿಂದ ಮನವರಿಕೆ ಮಾಡಿಸಿ
ದೇಶದ ಪ್ರಜಾತಂತ್ರ ಉಳಿವಿಗೆ-ಭವಿಷ್ಯದ ಭಾರತಕ್ಕಾಗಿ ಜನ ಮೋದಿ ಸರ್ಕಾರವನ್ನು ಬದಲಾಯಿಸುತ್ತಾರೆ. ನಾವು-ನೀವು ಗಟ್ಟಿಯಾಗಿ ಜನರ ನಡುವೆ ನಿಲ್ಲೋಣ
ಕಾರ್ಯಕರ್ತರನ್ನು, ಸ್ಥಳೀಯ ಮುಖಂಡರನ್ನು ಮಾತಾಡಿಸಿ, ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪ್ರತಿಷ್ಠೆ ಬೇಡ
ಎಲ್ಲಾ ರೀತಿಯ ಅಧಿಕಾರ ದುರುಪಯೋಗ ಮಾಡಿ ನಮಗೆ ತೊಂದರೆ ಕೊಡುತ್ತಾರೆ. ನಾವು ಎದೆಗಾರಿಕೆಯಿಂದ ಎದುರಿಸಿ ಜನರಿಂದ ಶಕ್ತಿ ಪಡೆದುಕೊಳ್ಳಬೇಕು
ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ವೈಜ್ಞಾನಿಕವಾಗಿ ಪ್ರಚಾರ ಮಾಡಿ ಅರ್ಥಪೂರ್ಣ ವಾಗಿ ಚುನಾವಣೆ ನಡೆಸೋಣ
ಸಭೆಯಲ್ಲಿ, ಬಾಗಲಕೋಟೆ ಸಂಯುಕ್ತ ಪಾಟೀಲ್, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮನ್ಸೂರ್ ಅಲಿ ಖಾನ್, ವಿನೋದ್ ಹಸೂಟಿ ಧಾರವಾಡ, ಚಿತ್ರದುರ್ಗದ ಚಂದ್ರಪ್ಪ, ಉಡುಪಿ ಜಯಪ್ರಕಾಶ್ ಹೆಗ್ಡೆ, ತುಮಕೂರು ಮುದ್ದಹನುಮೇಗೌಡ, ದಕ್ಷಿಣ ಕನ್ನಡ ಪದ್ಮರಾಜ್, ಬಳ್ಳಾರಿಯ ಹಿರಿಯ ಶಾಸಕರಾದ ಈ.ತುಕಾರಾಂ, ರಾಯಚೂರು ಕುಮಾರನಾಯ್ಕ್, ಬೆಂಗಳೂರು ದಕ್ಷಿಣದ ಸೌಮ್ಯ ರೆಡ್ಡಿ, ಉತ್ತರ ಕನ್ನಡ ಅಂಜಲಿ ನಿಂಬಾಳ್ಕರ್, ಮಂಡ್ಯ ವೆಂಕಟರಮಣೇಗೌಡ, ಮೈಸೂರು ಲಕ್ಷ್ಮಣ್ ,ಬೆಂಗಳೂರು ಉತ್ತರದ ರಾಜೀವ್ ಗೌಡ, ಬೀದರ್ ಸಾಗರ್ ಖಂಡ್ರೆ, ಮೃಣಾಳ್ ಹೆಬ್ಬಾಳ್ಕರ್ ಸೇರಿ ಹಲವರು ಉಪಸ್ಥಿತರಿದ್ದರು.
ಸಚಿವರಾದ ಹೆಚ್.ಸಿ.ಮಹದೇವಪ್ಪ, ಸಂತೋಷ್ ಎಸ್ ಲಾಡ್, ತಿಮ್ಮಾಪುರ, ಜಮೀರ್ ಅಹಮದ್ ಖಾನ್, ಎಂ.ಸಿ.ಸುಧಾಕರ್, ಶರಣಪ್ರಕಾಶ್ ಪಾಟೀಲ್, ಹೆಚ್.ಕೆ.ಪಾಟೀಲ್, ಕೆ.ಎನ್.ರಾಜಣ್ಣ, ಕೆ.ವೆಂಕಟೇಶ್, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಡಿ.ಸುಧಾಕರ್, ರಹೀಂ ಖಾನ್, ಮಂಕಾಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ರಾಯರೆಡ್ಡಿ, ಪಕ್ಷದ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕರಾದ ಶಿವಲಿಂಗೇಗೌಡರು, ಚನ್ನರಾಜ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.